ಬ್ಯಾಡಗಿ: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸಂವಿಧಾನಕ್ಕೆ ಅಪಮಾನ ಎಸಗುತ್ತಿದ್ದಾರೆ. ಲೋಕಸಭೆಯಲ್ಲಿ ಒನ್ ನೇಷನ್ ಒನ್ ಎಲೆಕ್ಷನ್ ಮಸೂದೆ ಮಂಡಿಸಿದ್ದು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿರುವ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ ಜಯಕುಮಾರ ಆರೋಪಿಸಿದರು.
ಕಾಂಗ್ರೆಸ್ ಎದುರಿಸುತ್ತಿದ್ದ ಸಂಕಷ್ಟ ಸಂದರ್ಭಗಳಲ್ಲಿ ಕರ್ನಾಟಕ ಎಂದಿಗೂ ಕೈಬಿಟ್ಟಿಲ್ಲ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಚಿಕ್ಕಮಗಳೂರಿನಿಂದ ಗೆಲ್ಲಿಸಿದ್ದಲ್ಲದೇ ದೇಶದ ಪ್ರಧಾನಿಯಾಗುವಂತೆ ಮಾಡಿದೆ. ರಾಜ್ಯದಲ್ಲಿ 136 ಸ್ಥಾನಗಳನ್ನು ಗೆಲ್ಲಿಸಿ, ಜಿಲ್ಲೆಯ 6 ಸ್ಥಾನಗಳಲ್ಲಿ ಕಾಂಗ್ರೆಸ್ ಶಾಸಕರಿದ್ದು ಕರ್ನಾಟಕ ಹಾಗೂ ಹಾವೇರಿ ಜಿಲ್ಲೆಯನ್ನು ಬಿಜೆಪಿಯಿಂದ ಮುಕ್ತಗೊಳಿಸಿದೆ ಎಂದರು.
ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಗ್ಯಾರಂಟಿ ಯೋಜನೆಯ ಲಾಭ ಮನೆಮನೆಯನ್ನು ತಲುಪಿದೆ. ರಾಜ್ಯದಲ್ಲಿ ಕಾಂಗ್ರೆಸ ಸರ್ಕಾರ ಅಧಿಕಾರ ವಹಿಸಿಕೊಂಡ ಬಳಿಕ ಬಡವರು ಸೇರಿದಂತೆ ಎಲ್ಲ ವರ್ಗದವರ ಏಳ್ಗೆಗೆ ವಿವಿಧ ಯೋಜನೆ ರೂಪಿಸಿದ್ದೇವೆ ಎಂದರು.ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, 1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಮೊದಲ ಬಾರಿಗೆ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ಜರುಗಿದ್ದು, 2024 ಡಿ. 26ಕ್ಕೆ ಶತಮಾನ ಸಂಭ್ರಮ ದಿನವಾಗಿದ್ದು, ಈ ಸಭೆಗೆ ಮಹಾತ್ಮ ಗಾಂಧಿ ಅಧ್ಯಕ್ಷತೆ ವಹಿಸಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಸ್ಥಾನ ವಹಿಸುತ್ತಿರುವುದು ರಾಜ್ಯದ ಅತಿ ದೊಡ್ಡ ಭಾಗ್ಯವಾಗಿದೆ ಎಂದರು.
5 ಸಾವಿರ ಕಾರ್ಯಕರ್ತರು: ಬ್ಯಾಡಗಿ ವಿಧಾನಸಭೆಯಿಂದ ಡಿ. 27ರಂದು ಗ್ರಾಪಂ ತಲಾ ಒಂದರಂತೆ 44 ಮತ್ತು ಬ್ಯಾಡಗಿ ಪಟ್ಟಣದಲ್ಲಿ 6 ಸೇರಿದಂತೆ 50 ಸಾರಿಗೆ ಇಲಾಖೆ ಬಸ್ ಬಿಡಲಾಗುವುದು. ಮಹಿಳೆಯರಿಗೆ ಶೇ. 50ರಷ್ಟು ಆದ್ಯತೆ ನೀಡಲಿದ್ದೇವೆ. ಬ್ಯಾಡಗಿ ಮತಕ್ಷೇತ್ರದಿಂದ 5 ಸಾವಿರ ಕಾರ್ಯಕರ್ತರು ತೆರಳುವ ನಿರೀಕ್ಷೆಯಿದೆ ಎಂದರು.ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಲೋಕಸಭೆ ಪರಾಜಿತ ಅಭ್ಯರ್ಥಿ ಆನಂದ ಸ್ವಾಮಿಗಡ್ಡದೇವರಮಠ, ತಾಲೂಕಾಧ್ಯಕ್ಷ ದಾನಪ್ಪಚೂರಿ, ಕಾಗಿನೆಲೆ ಅಧ್ಯಕ್ಷ ಶಿವನಗೌಡ ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಆಶ್ರಯ ಸಮಿತಿ ಅಧ್ಯಕ್ಷ ಮುನಾಫ್ ಎರೇಶೀಮಿ, ದುರ್ಗೆಶ ಗೋಣೆಮ್ಮನವರ, ರಮೇಶ ಸುತ್ತಕೋಟಿ, ಚಿಕ್ಕಪ್ಪ ಹಾದೀಮನಿ, ಮಾರುತಿ ಅಚ್ಚಿಗೇರಿ, ಖಾದರಸಾಬ್ ದೊಡ್ಡಮನಿ, ರವಿ ಪೂಜಾರ, ಬೀರಪ್ಪ ಬಣಕಾರ, ಪರಮೇಶಗೌಡ ತೆವರಿ, ಲಕ್ಷ್ಮೀ ಜಿಂಗಾಡೆ, ಪ್ರೇಮಾ ಕಾಗಿನೆಲೆ, ಡಾ.ಎ.ಎಂ. ಸೌದಾಗರ ಇದ್ದರು.