ಕೊಪ್ಪಳ: ಮುಖ್ಯಮಂತ್ರಿ, ಸಚಿವರ ಗಮನಕ್ಕೆ ತಂದು ಆದಷ್ಟು ಶೀಘ್ರ ಪರಿಹಾರ ಕೊಡಿಸುವ ಪ್ರಯತ್ನ ಮಾಡುವೆ, ನೂರಾರು ದಿನದಿಂದ ಹೋರಾಟ ನಡೆಯುತ್ತಿರುವುದನ್ನು ಗಮನಿಸುತ್ತಿದ್ದೇನೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು.
ಸರ್ಕಾರ ಸದಾ ಜನಪರ ಕೆಲಸ ಮಾಡಬೇಕು, ಅದರಲ್ಲೇನು ಅನುಮಾನ ಬೇಡ, ಶಾಸಕರ ಬಳಿ ಚರ್ಚಿಸಿ ಸಹಕಾರ ಕೊಡೋಕೆ ಹೇಳುವ ಜತೆಗೆ ತಮ್ಮ ಅಧ್ಯಕ್ಷರ ಲೆಟರ್ ಹೆಡ್ ನಲ್ಲಿ ಸಿಎಂ ಅವರಿಗೂ ಮನವಿ ಸಲ್ಲಿಸುವದಾಗಿ ಹೇಳಿದರು. ಬಂದ್ ದಿನದ ಖರ್ಚು ವೆಚ್ಚಕ್ಕಾಗಿ ವೈಯಕ್ತಿಕವಾಗಿ ಎರಡು ಲಕ್ಷ ಸಹಾಯ ಘೋಷಣೆ ಮಾಡಿದರು. ನಂತರ ಬಾಧಿತ ಪ್ರದೇಶಗಳಲ್ಲಿನ ರೈತರ ಒತ್ತಾಯಕ್ಕೆ ಮಣಿದು ಹಿರೇಬಗನಾಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆಯಿಂದ ಕರೆದ ಫೆ.24ರ ಬಂದ್ ಪೂರ್ವಭಾವಿ ಸಭೆ ಯಶಸ್ವಿಯಾಯಿತು. ಈ ಪೂರ್ವಭಾವಿ ಸಭೆಯಲ್ಲಿ ಫೆ.24 ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕೊಪ್ಪಳ, ಭಾಗ್ಯನಗರ ಸಂಪೂರ್ಣ ಬಂದ್ ಆಚರಿಸಲು ನಿರ್ಣಯ ಸ್ವೀಕರಿಸಲಾಯಿತು. ಆ ದಿನದ ಜೀವಕ್ಕೆ ಸಂಬಂಧಿಸಿದ ಅಗತ್ಯ ಸೇವೆ,ಪರೀಕ್ಷೆ ಹೊರತುಪಡಿಸಿ ಉಳಿದೆಲ್ಲ ವಾಣಿಜ್ಯ ಚಟುವಟಿಕೆ ಬಂದ್ ಮಾಡಿ ಬಲ್ಡೋಟ ಒಳಗೊಂಡು ಯಾವುದೇ ಕಾರ್ಖಾನೆಗಳ ವಿಸ್ತರಣೆ ಮಾಡಬಾರದು, ಬಸಾಪುರ ಕೆರೆ ಬಲ್ಡೋಟ ಅತಿಕ್ರಮಣದಿಂದ ಮುಕ್ತಗೊಳಿಸಬೇಕು, ತುಂಗಭದ್ರಾ ವಿಷಗೊಳಿಸುವ ಕಾರ್ಖಾನೆ ಮುಚ್ಚಬೇಕು, ಬಾಧಿತ ಹಳ್ಳಿಗಳಿಗೆ ಮುಖ್ಯಮಂತ್ರಿಗಳು ಭೇಟಿ ಕೊಡಬೇಕು, ಐಐಎಸ್ಸಿ ಮತ್ತು ಏಮ್ಸ್ ಸ್ವಾಯತ್ತ ಸಂಸ್ಥೆಗಳ ಮೂಲಕ ಆರೋಗ್ಯ,ಪರಿಸರ ಹಾಳಾಗಿದ್ದರ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸಬೇಕು ಎಂದು ಕಳೆದ ಒಂದು ವರ್ಷದಿಂದ ಚಳವಳಿ ನಡೆಯುತ್ತಿದೆ. ಸರ್ಕಾರ ಈ ವಿಷಯದಲ್ಲಿ ಇದುವರೆಗೆ ಜನರ ಆರೋಗ್ಯ ರಕ್ಷಣೆಗೆ ಮುಂದಾಗದ ಕಾರಣಕ್ಕೆ ಬಾಧಿತ 20 ಹಳ್ಳಿ ಮತ್ತು ನಗರದ ಎರಡು ಲಕ್ಷ ಜನರ ಭವಿಷ್ಯದ ಆತಂಕದಿಂದ ಈ ಬಂದ್ ಹೋರಾಟ ಕರೆಯಲಾಗಿದೆ. ಪಕ್ಷಾತೀತವಾಗಿ ಜಿಲ್ಲೆಯ ಪ್ರತಿಯೊಬ್ಬ ರಾಜಕೀಯ ಮುಖಂಡರು, ಧಾರ್ಮಿಕ ಮುಖ್ಯಸ್ಥರು, ಸಮಾಜ, ಸಮುದಾಯ, ಸಂಘ, ಸಂಸ್ಥೆಯವರು ಸ್ವಯಂಪ್ರೇರಣೆಯಿಂದ ತಮ್ಮ ಎಲ್ಲ ಶಕ್ತಿ ಬಲದಿಂದ ಬಂದ್ ಹೋರಾಟ ಬೆಂಬಲಿಸಿ ಯಶಸ್ವಿಗೊಳಿಸಲು ವಿನಂತಿಸಿ ನಿರ್ಣಯ ಕೈಗೊಳ್ಳಲಾಯಿತು.ನಗರ ಮತ್ತು ಬಾಧಿತ ಹಳ್ಳಿಯ ಪ್ರಮುಖರಾದ ಈಶ್ವರಪ್ಪ ಕೊರ್ಲಹಳ್ಳಿ, ಎ.ವಿ.ಕಣವಿ ವಕೀಲರು, ಡಿ.ಎಚ್.ಪೂಜಾರ, ಮಾನವ ಬಂಧುತ್ವ ವೇದಿಕೆ ಮುಖಂಡ ಟಿ.ರತ್ನಾಕರ, ಮಂಜುನಾಥ ಜಿ. ಗೊಂಡಬಾಳ, ಭೀಮಪ್ಪ ಹವಳಿ, ನೇತ್ರಾ ಪಾಟೀಲ್, ಕಾಶಪ್ಪ ಚಲವಾದಿ, ಕೀರ್ತಿ ಪಾಟೀಲ್, ಹುಲಿಗೆಪ್ಪ ಭೋವಿ, ಬಾಳಪ್ಪ ವೀರಾಪುರ, ಡಾ.ಮಂಜುನಾಥ ಸಜ್ಜನ್, ಸದಾನಂದಯ್ಯ ಬೀಳಗಿಮಠ, ಮಹೇಶ ವದ್ನಾಳ, ಗವಿಸಿದ್ದಪ್ಪ ಪುಟಗಿ, ಶರಣು ಪಾಟೀಲ್, ಗವಿಸಿದ್ದಪ್ಪ ಹಲಿಗಿ, ಮಹಾಂತೇಶ ಕೊತಬಾಳ, ಎಸ್.ಬಿ. ರಾಜೂರು, ಜಿ.ಬಿ.ಪಾಟೀಲ್, ಸಾವಿತ್ರಿ ಮುಜುಮದಾರ ಹಾಗೂ ರಾಘು ಚಾಕ್ರಿ ಮುಂತಾದವರು ಸಭೆಯಲ್ಲಿ ನಗರ ಬಂದ್ ಮಾಡುವ ಕುರಿತು ಚರ್ಚೆ ಮಾಡಿ ಸಲಹೆ ನೀಡಿದರು.
ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ ಸಭೆಯ ನಿರ್ಣಯ ಮಂಡಿಸಿದರು. ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ನಿರ್ಣಯಗಳಿಗೆ ಅನುಮೋದನೆ ಪಡೆದರು.