ಕಾರವಾರ: ಭಾರತವು ೧೯೭೧ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಸಾಧಿಸಿದ ಜಯವನ್ನು ಡಿ. ೧೬ರಂದು ವಿಜಯ ದಿವಸ ಕಾರ್ಯಕ್ರಮವನ್ನಾಗಿ ಆಚರಿಸುತ್ತಿದ್ದು, ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡು ಯಶಸ್ವಿಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ತಿಳಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಜಯ ದಿವಸ ಆಚರಣೆ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿವರ್ಷದಂತೆ ವಿಜಯ ದಿವಸ ಆಚರಣೆಯನ್ನು ಡಿ. ೧೬ರಂದು ರವೀಂದ್ರನಾಥ್ ಟಾಗೋರ್ ಕಡಲತೀರದ ಯುದ್ಧ ನೌಕಾ ವಸ್ತು ಸಂಗ್ರಾಲಯದ ಬಳಿ ಆಚರಿಸಲು ನಿರ್ಧರಿಸಲಾಗಿದೆ.
ಹೊರ ಜಿಲ್ಲೆಗಳಿಗಿಂತಲೂ ವಿಭಿನ್ನವಾಗಿ ಜಿಲ್ಲೆಯಲ್ಲಿ ಎನ್‌ಸಿಸಿ, ನೌಕಾದಳ, ವಾಯುದಳ, ಸೈನಿಕರೊಂದಿಗೆ ವಿಜಯ ದಿವಸ ಆಚರಿಸಲಾಗುತ್ತದೆ. ಈ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಎಲ್ಲ ಅಧಿಕಾರಿಗಳು ತಮಗೆ ವಹಿಸಲಾದ ಜವಾಬ್ದಾರಿಗಳ ಸಕಲ ಸಿದ್ಧತೆ ಮಾಡಿಕೊಂಡು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸೂಚನೆ ನೀಡಿದರು.ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕ ಡಾ. ಕ್ಯಾಪ್ಟನ್ ರಮೇಶ ರಾವ್, ೧೯೭೧ರಲ್ಲಿ ನಡೆದ ಯುದ್ಧದಲ್ಲಿ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದವು. ಯುದ್ಧ ನೌಕಾ ವಸ್ತು ಸಂಗ್ರಾಲಯದಲ್ಲಿರುವ ಪರಮವೀರ ಚಕ್ರ ಮೇಜರ್ ರಾಮ ರಘೋಬಾ ರಾಣೆ ಅವರ ಪ್ರತಿಮೆಗೆ ಪುಷ್ಪಾರ್ಚನೆ, ೧೯೭೧ರಲ್ಲಿ ನಡೆದ ಯುದ್ಧದಲ್ಲಿ ಭಾರತೀಯ ಸೇನೆಯಲ್ಲಿ ಭಾಗವಹಿಸಿದ ಹಿರಿಯ ಮಾಜಿ ಸೈನಿಕರಿಗೆ ಸನ್ಮಾನ, ೨೦೨೪ರ ಸಶಸ್ತ್ರ ಪಡೆಗಳ ಧ್ವಜ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.ಕದಂಬ ನೌಕಾನೆಲೆಯ ಕಮಾಂಡರ್ ವಿಷ್ಣು ಬಾಬನ್ ಕುಂಬಾರ್, ಜಿಲ್ಲಾ ಸೈನಿಕ ಮಂಡಳಿಯ ಉಪಾಧ್ಯಕ್ಷ ಎಸ್.ಎಫ್. ಗಾಂವಕರ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ, ಡಿಡಿಪಿಯು ಕೆ.ಎಚ್. ರಾಜಪ್ಪ ಮೊದಲಾದವರು ಇದ್ದರು.ಅಪಾಯ ಎದುರಾದಾಗ ಉಪಾಯವಿರಲಿ
ಅಂಕೋಲಾ: ಅವಘಡಗಳಾದಾಗ ಆತಂಕಕ್ಕೊಳಗಾಗದೆ, ಅದರಿಂದ ಪಾರಾಗುವುದು ಹೇಗೆ ಎಂಬ ಬಗ್ಗೆ ದೂರದೃಷ್ಟಿತ್ವಕ್ಕೆ ಕಾರಣರಾಗಬೇಕು. ಆಗ ಮಾತ್ರ ಅವಘಡದಿಂದ ಪಾರಾಗಬಹುದು ಎಂದು ಎನ್‌ಡಿಆರ್‌ಎಫ್ ತಂಡದ ಕ್ಯಾಪ್ಟನ್ ಕಮಾಂಡರ್ ಪಿಂಟೊ ನಂದಿ ತಿಳಿಸಿದರು.ಶೆಟಗೇರಿಯ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದಲ್ಲಿ ಹಮ್ಮಿಕೊಂಡ ಎನ್‌ಡಿಆರ್‌ಎಫ್‌ದಿಂದ ನೈಸರ್ಗಿಕ ಪ್ರಾಕೃತಿಕ ವಿಕೋಪ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಹತ್ತಿರ ದೊರೆಯುವ ವಸ್ತುಗಳಿಂದ ಪ್ರಾಣ ರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬೆಕೆಂದು ಸರಳವಾದ, ನೈಜವಾದ ವಿಧಾನಗಳನ್ನು ಪ್ರಾತಕ್ಷಿಕೆಯ ಮೂಲಕ ತೋರಿಸಿದರು. ಎಂತಹ ಪರಿಸ್ಥಿತಿ ಬಂದರೂ ಎದೆಗುಂದದೆ ಧೈರ್ಯ, ಉಪಾಯದಿಂದ ಪ್ರಾಣವನ್ನು ಉಳಿಸಿಕೊಳ್ಳಬಹುದೆಂದರು.ಎನ್‌ಡಿಆರ್‌ಎಫ್ ತಂಡದ ಸಂಪನ್ಮೂಲ ಸಿಬ್ಬಂದಿ ಅರ್ಜುನ ಅವರು, ವಿವಿಧ ತರಹದ ಭೂಪಂಕ, ಪ್ರವಾಹ, ಸಿಡಿಲು ಬಡಿತ, ರಾಸಾಯನಿಕ ದುರಂತ, ಹೃದಯಾಘಾತದಿಂದ ಹೇಗೆ ಪಾರಾಗಬೇಕೆಂದು ತರಬೇತಿ ನೀಡಿದರು.ಮುಖ್ಯಾಧ್ಯಾಪಕ ಎನ್.ವಿ. ರಾಠೋಡ ಅಧ್ಯಕ್ಷತೆ ವಹಿಸಿದ್ದರು. ಸಹ ಶಿಕ್ಷಕರಾದ ರಾಜು ಶೆಡಗೇರಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕರಾದ ಜಯಶ್ರೀ ಶೆಡಗೇರಿ, ಅನುಪಮಾ ನಾಯಕ, ಎಂ.ಎಸ್. ದೇವಾಡಿಗ, ರಾಮಪ್ಪ ಟಿ.ಸಿ. ಶಾಂತಲಾ ನಾಯಕ, ಭಾರ್ಗವ ನಾಯಕ, ಯೋಗೇಶ ಡಿ ನಾಯ್ಕ, ಗೌರೀಶ ಸಿ. ಹರಿಜನ ಉಪಸ್ಥಿತರಿದ್ದರು.