ಶಾಂಕರ ತತ್ವ ಪ್ರಸಾರದಡಿ ರಾಮಾಯಣ ಸ್ಪರ್ಧೆಗೆ ನಿರ್ಧಾರ: ಸದಾಶಿವ ಭಟ್

KannadaprabhaNewsNetwork |  
Published : Aug 10, 2026, 01:45 AM IST
ನರಸಿಂಹರಾಜಪುರ ಅಗ್ರಹಾರದ ಬ್ರಾಹ್ಮಣ ಮಹಾ ಸಭಾದ ಅನ್ನಪೂರ್ಣ ರಂಗನಾಥ ಸಭಾ ಭವನದಲ್ಲಿ ನಡೆದ ಶಾಂಕರ ತತ್ವ ಪ್ರಸಾರದಡಿ ವಲಯ ಮಟ್ಟದ ಭಜನಾ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸದಾಶಿವ ಭಟ್, ರಾಮಪ್ರಸಾದ್, ಎನ್.ಶ್ರೀನಾಥ್ ಮತ್ತಿತರರು ಇದ್ದರು. | Kannada Prabha

ಸಾರಾಂಶ

ನರಸಿಂಹರಾಜಪುರಶಾಂಕರ ತತ್ವ ಪ್ರಸಾರ ಅಭಿಯಾನದಡಿ ಮುಂದಿನ ದಿನಗಳಲ್ಲಿ ರಾಮಾಯಣ ಸ್ಪರ್ಧೆಗಳನ್ನು ಶೃಂಗೇರಿಯ ಶಾರದಾ ಪೀಠದ ನಿರ್ದೇಶನದಂತೆ ಎಲ್ಲಾ ಶಾಲೆಗಳಲ್ಲಿ ಆಯೋಜಿಸಲು ರಾಜ್ಯ ಸಂಚಾಲರು ನಿರ್ಧರಿಸಿದ್ದು ಮಕ್ಕಳನ್ನು ಇದರಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶಾಂಕರತತ್ತ್ವ ಪ್ರಸಾರ ಅಭಿಯಾನದ ಜಿಲ್ಲಾ ಸಂಚಾಲಕ ಸದಾಶಿವ ಭಟ್ ಹೇಳಿದರು.

ಶಾಂಕರ ತತ್ವ ಪ್ರಸಾರದಡಿ ವಲಯ ಮಟ್ಟದ ಭಜನಾ ಸ್ಪರ್ಧೆ ಉದ್ಘಾಟನೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಶಾಂಕರ ತತ್ವ ಪ್ರಸಾರ ಅಭಿಯಾನದಡಿ ಮುಂದಿನ ದಿನಗಳಲ್ಲಿ ರಾಮಾಯಣ ಸ್ಪರ್ಧೆಗಳನ್ನು ಶೃಂಗೇರಿಯ ಶಾರದಾ ಪೀಠದ ನಿರ್ದೇಶನದಂತೆ ಎಲ್ಲಾ ಶಾಲೆಗಳಲ್ಲಿ ಆಯೋಜಿಸಲು ರಾಜ್ಯ ಸಂಚಾಲರು ನಿರ್ಧರಿಸಿದ್ದು ಮಕ್ಕಳನ್ನು ಇದರಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶಾಂಕರತತ್ತ್ವ ಪ್ರಸಾರ ಅಭಿಯಾನದ ಜಿಲ್ಲಾ ಸಂಚಾಲಕ ಸದಾಶಿವ ಭಟ್ ಹೇಳಿದರು. ಭಾನುವಾರ ಪಟ್ಟಣದ ಅಗ್ರಹಾರದ ಬ್ರಾಹ್ಮಣ ಮಹಾಸಭೆಯ ಅನ್ನಪೂರ್ಣಮ್ಮ ರಂಗನಾಥ ಸಭಾ ಭವನದಲ್ಲಿ ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶಾರದ ಪೀಠಂ ಶೃಂಗೇರಿಯ ಶಾಂಕರತತ್ತ್ವ ಪ್ರಸಾರ ಅಭಿಯಾನ ದಡಿ ಭಜನಾ ಮಂಡಳಿ ಸದಸ್ಯರಿಗೆ ಆಯೋಜಿಸಿದ್ದ ವಲಯಮಟ್ಟದ ಭಜನಾ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಶಾಂಕರ ತತ್ತ್ವ ಪ್ರಸಾರ ಅಭಿಯಾನದಡಿ ಈಹಿಂದೆ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು. ಪ್ರಸ್ತುತ ಮಲೆನಾಡು ವಿಭಾಗದ ಭಜನಾ ಮಂಡಳಿ ಸದಸ್ಯರಿಗೆ ಸ್ಪರ್ಧೆಯನ್ನು 4 ವಲಯಗಳಲ್ಲಿ ಆಯೋಜಿಸಿದ್ದು ಮೊದಲ ವಲಯಮಟ್ಟ ಕಾರ್ಯಕ್ರಮ ಬಸರಿಕಟ್ಟೆಯ ಸದ್ಗುರು ಪ್ರೌಢಶಾಲೆಯಲ್ಲಿ ನಡೆಸಲಾಗಿದೆ. ಎರಡನೇ ಕಾರ್ಯಕ್ರಮ ಇಂದು ನರಸಿಂಹರಾಜಪುರದಲ್ಲಿ ನಡೆಯುತ್ತಿದೆ. ಕೊಪ್ಪದಲ್ಲಿ ಆ.22 ರಂದು, ಶೃಂಗೇರಿಯಲ್ಲಿ ಆ.23 ರಂದು ಆಯೋಜಿಸಲಾಗಿದೆ. ನಂತರ ಬಯಲು ಸೀಮೆ ವಿಭಾಗದಲ್ಲಿ ಸ್ಪರ್ಧೆ ನಡೆದು ಜಿಲ್ಲಾ ಮಟ್ಟದ ಕಾರ್ಯಕ್ರಮ ಶೃಂಗೇರಿ ಮಠದಲ್ಲಿ ನಡೆಯಲಿದೆ. ಭಜನ ಮಂಡಳಿಯಲ್ಲಿ ಮಹಿಳಾ ತಂಡಗಳಂತೆ 4 ಪುರುಷರ ತಂಡಗಳನ್ನು ಸಹ ರಚಿಸಲಾಗಿದೆ. ಮಕ್ಕಳ ತಂಡಗಳು ಸಹ ರಚನೆ ಮಾಡಲಾಗುತ್ತಿದೆ ಎಂದರು.

ಶಂಕರಾಚಾರ್ಯರ ಸ್ತೋತ್ರ ಕಂಠಪಾಠ ಮತ್ತು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆಯಿದೆ. ಶಂಕರಾ ಚಾರ್ಯರ ಸ್ತೊತ್ರಗಳಲ್ಲಿ ವಿದ್ವತ್ತು ಗೊತ್ತಾಗುತ್ತದೆ. ಶಂಕರಾಚಾರ್ಯರ ಸ್ತೊತ್ರಗಳನ್ನು ಅಭ್ಯಾಸ ಮಾಡಬೇಕು. ಸ್ತೋತ್ರಗಳು ಕಷ್ಟಕರವಾಗಿದ್ದು ತಿಳಿದವರಿಂದ ಕಲಿತುಕೊಳ್ಳಬೇಕು. ಸ್ತೋತ್ರಗಳ ಅಧ್ಯಯನದಿಂದ ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮಾಜಿಕ ಬದಲಾವಣೆ ಕಂಡು ಕೊಳ್ಳಬಹುದು. ಸ್ತೋತ್ರಗಳನ್ನು ತಪ್ಪಾಗಿ ಪಠಿಸಿದರೆ ಅಪರಾಧ ವಾಗುತ್ತದೆ. ವೇದಾಂತ ಭಾರತಿ 62 ಸ್ತೋತ್ರಗಳ ಪುಸ್ತಕ ಹೊರತಂದಿದ್ದು ಇದನ್ನು ತಿಳಿದವರಿಂದ ಅಭ್ಯಾಸ ಮಾಡಿಕೊಳ್ಳಬೇಕು ಎಂದರು. ಶಾಂಕರ ತತ್ವ ಪ್ರಸಾರ ಅಭಿಯಾನದ ತಾಲೂಕು ಸಂಚಾಲಕ ಎನ್.ಶ್ರೀನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಂಕರ ತತ್ವ ಅಭಿಯಾನ 2014 ರಿಂದ ಪ್ರಾರಂಭವಾಗಿದೆ. ಅಷ್ಟೋತ್ತರ ಪಠಣ ಮತ್ತು ಭಜನೆ ಆಯೋಜಿಸಲಾಗಿತ್ತು. ಕಳೆದ ವರ್ಷ ಉಪನ್ಯಾಸ ಕಾರ್ಯಕ್ರಮ ನಡೆಸಲಾಗಿದೆ. ಶೃಂಗೇರಿ ಶಾರದ ಪೀಠದ ಗುರುಗಳ ಆದೇಶದಂತೆ ಭಜನಾ ಮಂಡಳಿಗಳು ಭಜನೆಯನ್ನು ಯಾವ ರೀತಿ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಶಾಂಕರ ವೈಭವಮ್ ಎಂಬ ಹೆಸರಿನಲ್ಲಿ ಭಜನಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ತಾಲೂಕು ಮಟ್ಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಭಜನಾ ಮಂಡಳಿಗಳು ಶೃಂಗೇರಿಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಂಕರತತ್ವ ಪ್ರಸಾರ ಅಭಿಯಾನದ ಜಿಲ್ಲಾಧ್ಯಕ್ಷ ರಾಮಪ್ರಸಾದ್ ಮಾತನಾಡಿ, ಜಗತ್ತಿನಲ್ಲಿ ನೇರವಾಗಿ ತಲೆ ಎತ್ತಿ ನಿಲ್ಲಲು ಕಾರಣರಾದವರು ಶಂಕರಾಚಾರ್ಯರು ಮತ್ತು ಶಂಕರರ ಪರಂಪರೆಯಾಗಿದೆ. ವಿಜ್ಞಾನಿಗಳು, ತತ್ವಜ್ಞಾನಿಗಳು, ಶ್ರೇಷ್ಠ ವ್ಯಕ್ತಿಗಳು ಶಂಕರರ ತತ್ವಗಳನ್ನು ಅರಿತುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಹಿಂದೂಗಳಾಗಿ ವೈದೀಕ ಪರಂಪರೆ ಉಳಿಸಲು ಶಂಕರಾಚಾರ್ಯರು 4 ಪೀಠಗಳನ್ನು ಸ್ಥಾಪಿಸಿದರು. ಅದ್ವೈತ ತತ್ವಗಳನ್ನು ವಿವರಿಸಲು ಶಾಂಕರ ತತ್ವ ಪ್ರಸಾರ ಅಭಿಯಾನದಲ್ಲಿ ವಿನೂತನ ಕಾರ್ಯಕ್ರಮ ಆರಂಭಿಸಲಾಗಿದೆ. ಅದ್ವೈತವನ್ನು ಅರಿಯಲು ಇದು ಮೊದಲ ಹೆಜ್ಜೆ ಎಂದರು.

ತಾಲೂಕು ಬ್ರಾಹ್ಮಣ ಮಹಾ ಸಭಾದ ಖಜಾಂಚಿ ಎ.ಎಸ್.ಅಭಿಷೇಕ್ ಕಾರ್ಯಕ್ರಮ ಉದ್ಘಾಟಿಸಿದರು. ಶಂಕರ ತತ್ವ ಪ್ರಸಾರ ಅಭಿಯಾನದ ಕೊಪ್ಪ ತಾಲೂಕು ಸಂಚಾಲಕ ರವಿಂದ್ರ ಪಟವರ್ಧನ್, ಕಳಸ ಸಂಚಾಲಕ ನಾಗಭೂಷಣ್, ಶೃಂಗೇರಿ ಸಂಚಾಲಕ ಶ್ರೀಧರ್, ಶಿಕ್ಷಕಿ ವಾಗ್ದೇವಿ, ವಾಸಂತಿ ರಾಮಕೃಷ್ಣ,ಭಾರತಿ ಅರವಿಂದ ಆಚಾರ್ಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2 ಕೋಟಿ ರು. ವೆಚ್ಚದಲ್ಲಿ ಶಿಕ್ಷಕರ ಸಮುದಾಯ ಭವನ ನಿರ್ಮಾಣ: ಸಿ.ಎಸ್.ಪುಟ್ಟರಾಜು
ಸಚಿವರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿಗೆ ಅದ್ಧೂರಿ ಸ್ವಾಗತ