ಮಳೆ ಪರಿಸ್ಥಿತಿ ಆಧರಿಸಿ ಬೆಳೆ ಬಗ್ಗೆ ನಿರ್ಧಾರ: ಚಲುವರಾಯಸ್ವಾಮಿ

KannadaprabhaNewsNetwork |  
Published : Aug 10, 2026, 01:30 AM IST
೯ಕೆಎಂಎನ್‌ಡಿ-೧ಕೆ.ಆರ್.ಪೇಟೆ ತಾಲೂಕಿನ  ಸಿಂಧಘಟ್ಟ ಗ್ರಾಮದಲ್ಲಿ ಮಳೆ ಕೊರತೆಯಿಂದ ಒಣಗಿರುವ ಅಲಸಂದೆ ಬೆಳೆಯನ್ನು ಸಚಿವ ಎನ್.ಚಲುವರಾಯಸ್ವಾಮಿ ವೀಕ್ಷಿಸಿದರು. | Kannada Prabha

ಸಾರಾಂಶ

ಮಳೆಯ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬಹುದಾದರೂ ಖಚಿತವಾಗಿ ಏನನ್ನೂ ಹೇಳಲಾಗದ ಪರಿಸ್ಥಿತಿಯಲ್ಲಿದ್ದೇವೆ.ಒಂದು ವೇಳೆ ಮಳೆ ಕೊರತೆಯಿಂದ ಭತ್ತ, ಕಬ್ಬು ಸೇರಿದಂತೆ ಇನ್ನಿತರೆ ಬೆಳೆಗಳನ್ನು ಬಿತ್ತನೆ ಮಾಡಲಾಗದಿದ್ದರೆ ಅರೆ ಖುಷ್ಕಿ ಬೆಳೆಗಳನ್ನು ಬೆಳೆಯುವುದಕ್ಕೆ ಅನುವು ಮಾಡಿಕೊಡಬಹುದೇ ಎಂಬ ಬಗ್ಗೆ ಒಂದು ವಾರದೊಳಗೆ ನಿರ್ಧರಿಸಿ ರೈತರಿಗೆ ಮಾಹಿತಿ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಳೆ ಪರಿಸ್ಥಿತಿಯನ್ನು ಇನ್ನೂ ಒಂದು ವಾರದವರೆಗೆ ಕಾದು ನೋಡಿ ವಿಶ್ವೇಶ್ವರಯ್ಯ ನಾಲಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ಹಾಕಬೇಕೋ, ಬೇಡವೋ, ಬೆಳೆ ಹಾಕಿದರೆ ಯಾವ ಬೆಳೆ ಹಾಕಬೇಕು ಎಂಬ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಕೆ.ಆರ್.ಪೇಟೆ ತಾಲೂಕಿನ ಸಿಂಧಘಟ್ಟ ಮತ್ತು ತೆಂಡೇಕರೆಯಲ್ಲಿ ಪೂರ್ವ ಮುಂಗಾರಿನಲ್ಲಿ ಬಿತ್ತನೆ ಮಾಡಲಾದ ಬೆಳೆಗಳ ಪರಿಸ್ಥಿತಿಯ ಕುರಿತಂತೆ ಅಧ್ಯಯನ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಳೆಯ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬಹುದಾದರೂ ಖಚಿತವಾಗಿ ಏನನ್ನೂ ಹೇಳಲಾಗದ ಪರಿಸ್ಥಿತಿಯಲ್ಲಿದ್ದೇವೆ. ಮಳೆ ಆಶಾದಾಯಕವಾಗಿ ಬಂದರೆ ಬೆಳೆ ಬೆಳೆಯುವುದಕ್ಕೆ ಅವಕಾಶ ಮಾಡಿಕೊಡಬಹುದು. ಒಂದು ವೇಳೆ ಮಳೆ ಕೊರತೆಯಿಂದ ಭತ್ತ, ಕಬ್ಬು ಸೇರಿದಂತೆ ಇನ್ನಿತರೆ ಬೆಳೆಗಳನ್ನು ಬಿತ್ತನೆ ಮಾಡಲಾಗದಿದ್ದರೆ ಅರೆ ಖುಷ್ಕಿ ಬೆಳೆಗಳನ್ನು ಬೆಳೆಯುವುದಕ್ಕೆ ಅನುವು ಮಾಡಿಕೊಡಬಹುದೇ ಎಂಬ ಬಗ್ಗೆ ಒಂದು ವಾರದೊಳಗೆ ನಿರ್ಧರಿಸಿ ರೈತರಿಗೆ ಮಾಹಿತಿ ನೀಡಲಾಗುವುದು ಎಂದರು.

ಪೂರ್ವ ಮುಂಗಾರಿನಲ್ಲಿ ಬಿತ್ತನೆಯಾದ ಉದ್ದು, ಹೆಸರು, ಅಲಸಂದೆ ಬೆಳೆಗಳು ಮಳೆ ಅಭಾವದಿಂದ ಒಣಗುತ್ತಿವೆ. ಈ ಬೆಳೆಗಳಿಗೆ ಹೆಚ್ಚಿನ ಮಳೆಯ ಅಗತ್ಯವಿರಲಿಲ್ಲ. ಮಳೆ ಸ್ವಲ್ಪ ಪ್ರಮಾಣದಲ್ಲಿ ಆಗಿದ್ದರೂ ಬೆಳೆ ರೈತರ ಕೈಸೇರುತ್ತಿತ್ತು. ಮಳೆಯಾಗದಿರುವ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿದ್ದ ಬೆಳೆಯಲ್ಲಿ ಸ್ವಲ್ಪ ಪ್ರಮಾಣದ ಬೆಳೆ ಒಣಗುತ್ತಿದೆ ಎಂದರು.

ನಿರೀಕ್ಷೆಯಂತೆ ಮುಂಗಾರು ಮಳೆ ಬೀಳದಿರುವುದರಿಂದ ಈ ಹಂಗಾಮಿನಲ್ಲಿ ಬಿತ್ತನೆ ಮಾಡುವುದಕ್ಕೆ ಬಹುತೇಕರು ಮುಂದಾಗಿಲ್ಲ. ಇನ್ನೂ ಮಳೆಯಾಗಬಹುದೆಂಬ ಆಶಾಭಾವನೆಯಲ್ಲೇ ನಾವಿದ್ದೇವೆ. ಆದರೆ, ವಾತಾವರಣದಲ್ಲಾಗುತ್ತಿರುವ ಬದಲಾವಣೆಯಿಂದ ಮಳೆ ಪರಿಸ್ಥಿತಿ ಏನಾಗಲಿದೆ ಎಂಬ ಬಗ್ಗೆ ನಿಖರವಾಗಿ ಹೇಳಲಾಗುತ್ತಿಲ್ಲ ಎಂದರು.

ವಿಶ್ವೇಶ್ವರಯ್ಯ ನಾಲಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಇಲ್ಲದ ಕಾರಣ ಕಬ್ಬು ಬೆಳೆ ಒಣಗಿದೆ. ಸೋಮವಾರ ನಾಗಮಂಗಲ ತಾಲೂಕಿನಲ್ಲೂ ಬೆಳೆ ಪರಿಸ್ಥಿತಿಯ ಅಧ್ಯಯನ ನಡೆಸಿ ಎಲ್ಲಾ ತಾಲೂಕುಗಳಿಂದ ಕ್ರೋಢೀಕರಿಸಿದ ಮಾಹಿತಿಯನ್ನೊಳಗೊಂಡ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಎಲ್ಲಾ ಜಿಲ್ಲೆಗಳಿಂದ ಬಂದಂತಹ ವರದಿಯನ್ನು ಆಧರಿಸಿ ಮುಖ್ಯಮಂತ್ರಿಗಳೊಂದಿಗೆ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಚರ್ಚಿಸಿ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಆಲೋಚಿಸುತ್ತೇವೆ ಎಂದು ನುಡಿದರು.

ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ, ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್, ಸಹಾಯಕ ಕೃಷಿ ಅಧಿಕಾರಿಗಳಾದ ಮಾಲತಿ, ಸುಷ್ಮಾ, ಪ್ರತಿಭಾ, ಹರ್ಷ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಕಾಂಗ್ರೆಸ್ ಮುಖಂಡರಾದ ಚಿನಕುರಳಿ ರಮೇಶ್, ಬಿ.ರೇವಣ್ಣ, ಚಂದಗಾಲು ವಿಜಯಕುಮಾರ್ ಇತರರಿದ್ದರು.ಬೆಳೆ ವಿಮೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಿ: ಚಲುವರಾಯಸ್ವಾಮಿಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ರೈತರು ಬೆಳೆ ವಿಮೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದರಿಂದ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಬೆಳೆಗಳು ನಷ್ಟವಾದರೆ ಬರುವ ವಿಮೆ ಹಣದಿಂದ ಆರ್ಥಿಕ ನಷ್ಟದಿಂದ ಪಾರಾಗಬಹುದು ಎಂದು ಸಚಿವ ಎನ್.ಚಲುವರಾಯಸ್ವಾಮಿ ರೈತರಿಗೆ ಕಿವಿಮಾತು ಹೇಳಿದರು.

ಕೆ.ಆರ್.ಪೇಟೆ ತಾಲೂಕಿನ ಸಿಂಧಘಟ್ಟ ಮತ್ತು ತೆಂಡೇಕೆರೆಯಲ್ಲಿ ಬೆಳೆಗಳ ಪರಿಸ್ಥಿತಿಯನ್ನು ಅಧ್ಯಯನ ನಡೆಸಿದ ವೇಳೆ ಮಳೆ ಇಲ್ಲದೆ ಬೆಳೆಗಳೆಲ್ಲಾ ಒಣಗಿರುವುದನ್ನು ರೈತರು ಸಚಿವರ ಗಮನಕ್ಕೆ ತಂದರು. ಆ ಸಮಯದಲ್ಲಿ ಸಚಿವರು ಬೆಳೆಗೆ ವಿಮೆ ಮಾಡಿಸಿದ್ದೀರಾ ಎಂದು ಕೇಳಿದಾಗ, ಇಲ್ಲ ಎಂಬ ಉತ್ತರ ಬಂದಿತು.

ಇದನ್ನು ಕೇಳಿದ ಸಚಿವರು, ಬೆಳೆ ವಿಮೆ ಮಾಡಿಸಿದ್ದರೆ ವಿಮೆ ಹಣ ನಿಮ್ಮ ಕೈಸೇರುತ್ತಿತ್ತು. ಬೆಳೆ ನಷ್ಟದಿಂದ ಉಂಟಾಗಿದ್ದ ಆರ್ಥಿಕ ನಷ್ಟದಿಂದ ಪಾರಾಗಬಹುದಿತ್ತು. ಬೆಳೆ ವಿಮೆ ಬಗ್ಗೆ ರೈತರು ಆಸಕ್ತಿ ಮೂಡಿಸಿಕೊಂಡು ಪ್ರತಿ ವರ್ಷ ಬೆಳೆಗಳಿಗೆ ವಿಮೆ ಮಾಡಿಸಬೇಕು. ವಿಮೆ ಹಣದಲ್ಲಿ ಶೇ.೯೮ರಷ್ಟನ್ನು ಸರ್ಕಾರವೇ ಪಾವತಿಸುತ್ತದೆ. ಉಳಿದ ಶೇ.೨ರಷ್ಟನ್ನು ಮಾತ್ರ ರೈತರು ಪಾವತಿಸಿದರೆ ಸಾಕು. ಮಳೆ ಹೆಚ್ಚಾಗಿ ಬೆಳೆ ಹಾಳಾದರೂ, ಮಳೆ ಕೊರತೆಯಿಂದ ಬೆಳೆ ನಷ್ಟವಾದರೂ ವಿಮೆ ಹಣ ಕೈಗೆ ಸಿಗುವ ಗ್ಯಾರಂಟಿ ಇರುತ್ತದೆ. ಇದರ ಬಗ್ಗೆ ಗ್ರಾಮ ಸಭೆಗಳಲ್ಲಿ ಪಿಡಿಒಗಳು ರೈತರಿಗೆ ಅರಿವು ಮೂಡಿಸಿ ಬೆಳೆ ವಿಮೆ ಪ್ರಮಾಣವನ್ನು ಹೆಚ್ಚಿಸುವಂತೆ ಜಿಪಂ ಸಿಇಓ ಅವರಿಗೆ ಸೂಚನೆ ನೀಡಿದರು.

ಉತ್ತರ ಕರ್ನಾಟಕದ ರೈತರು ಬೆಳೆ ವಿಮೆಯಲ್ಲಿ ಮುಂದಿದ್ದಾರೆ. ಕಲಬುರಗಿ ಜಿಲ್ಲೆಯಲ್ಲೇ ೨ ಸಾವಿರ ಕೋಟಿ ರು. ಬೆಳೆ ವಿಮೆ ಹಣವನ್ನು ರೈತರು ಪಡೆದುಕೊಂಡಿದ್ದಾರೆ. ಅದೇ ರೀತಿ ಜಿಲ್ಲೆಯ ರೈತರೂ ಜಾಗೃತರಾಗಿ ಬೆಳೆ ವಿಮೆ ಮಾಡಿಸುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತಾಂತರ ತಡೆಗೆ ಧರ್ಮ ಪರಿವರ್ತನೆ ಪ್ರಕ್ರಿಯೆ ಪ್ರಾರಂಭ: ಅಲೋಕ್ ಕುಮಾರ್
ಹೊಸಕೋಟೆ ಕುರುಬರ ಸಂಘಕ್ಕೆ ಎಂಟಿಬಿ ಬೆಂಬಲಿತರ ಆಯ್ಕೆ