ಹೆಚ್ಚು ಶುಲ್ಕ ಆರೋಪ । ಶಾಲೆ ವಿರುದ್ಧ ಕ್ರಮಕ್ಕೆ ಪೋಷಕರ ತೀರ್ಮಾನ । ತಾತ್ವಿಕ ಅಂತ್ಯ ಕಾಣದ ವಿದ್ಯಾಸಂಸ್ಥೆ ಜತೆಗಿನ ಚರ್ಚೆ
ತಾಲೂಕಿನ ಐಚನಹಳ್ಳಿ ಗ್ರಾಪಂ ವ್ಯಾಪ್ತಿಯ ಎಲೆಚಾಗಳ್ಳಿ ಮಾರ್ಗದ ಲಕ್ಷ್ಮೀಪುರ ಸಮೀಪ ಇರುವ ಋಷಿಶ್ರೀ ವಿದ್ಯಾನಿಕೇತನ ಅಂತಾರಾಷ್ಟ್ರೀಯ ಶಾಲೆಯ ಆವರಣದಲ್ಲಿ ಆಯೋಜನೆ ಮಾಡಿದ್ದ ಪೋಷಕರ ಜತೆಗಿನ ಮುಕ್ತ ಚರ್ಚೆಯು ತಾತ್ವಿಕ ಅಂತ್ಯ ಕಾಣದೆ ಶಾಲೆಯ ವಿರುದ್ಧ ವಂಚನೆ ದೂರು ದಾಖಲಿಸಲು ಪೋಷಕರು ಮುಂದಾದರು.
ಋಷಿಶ್ರೀ ವಿದ್ಯಾಸಂಸ್ಥೆಯ ಕಾರ್ಯದರ್ಶಿಯ ಧೋರಣೆ ಖಂಡಿಸಿ, ಪೋಷಕರು ಸೋಮವಾರ ಬೆಳಿಗ್ಗೆ ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿ, ಒಪ್ಪಂದದಂತೆ ಹಣ ಹಿಂದಿರುಗಿಸುವಂತೆ ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಪೊಲೀಸ್ ಪಿಎಸ್‌ಐ ಜಿ.ಎಸ್.ರಕ್ಷಿತಾ ಅವರ ಸಲಹೆ ಮೇರೆಗೆ ದೂರು ಸಲ್ಲಿಕೆ ನಂತರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮಂಗಳವಾರ ಬರುವುದಾಗಿ ತಿಳಿಸಿದ ನಂತರ ಪೋಷಕರು ಪ್ರತಿಭಟನೆ ಹಿಂದಕ್ಕೆ ಪಡೆದಿದ್ದರು.ಮಂಗಳವಾರ ಬೆಳಿಗ್ಗೆ ೧೧ ಗಂಟೆಗೆ ಪ್ರಾರಂಭವಾದ ಸಭೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಮಾತನಾಡಿ, ವಿದ್ಯಾಸಂಸ್ಥೆಯನ್ನು ಮುನ್ನಡೆಸಲು ತೊಂದರೆಯಾಗುತ್ತಿದೆ, ಹಣಕೊಟ್ಟು ಸಹಕರಿಸಿ ಎಂದು ಸಂಸ್ಥೆಯ ಆಡಳಿತ ಹಾಗೂ ಹಣಕಾಸಿನ ಸಮಸ್ಯೆ ಕುರಿತು ತಿಳಿಸಿದರು.
‘ನಮ್ಮ ಮಕ್ಕಳು ಶಾಲೆ ಬಿಟ್ಟು ನಾಲ್ಕು ವರ್ಷವಾಗಿದೆ, ಹಣ ಕೇಳಿ, ಕೇಳಿ, ನಂತರ ಅವರು ನೀವು ನೀಡಿದ್ದ ಚೆಕ್ ಬ್ಯಾಂಕ್‌ಗೆ ಹಾಕಿದಾಗ ಹಣವಿಲ್ಲದೇ ಚೆಕ್ ಬೌಸ್ಸ್ ಆಯಿತು. ನಂತರ ನ್ಯಾಯಾಲಯಕ್ಕೆ ಹೋಗಬೇಡಿ ಎಂದು ಸಮಯಾವಕಾಶ ಕೇಳಿ, ನ್ಯಾಯಾಲಯಕ್ಕೆ ಹೋಗಲು ಆಗದಂತಹ ಇಕ್ಕಿಟ್ಟಿನ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆ’ ಎಂದು ಪೋಷಕರೊಬ್ಬರು ಕಣ್ಣೀರು ಹಾಕಿದರು.
ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಮಾತನಾಡಿ, ‘ನಿಮ್ಮ ಮಕ್ಕಳು ಶಾಲೆಯಲ್ಲಿ ವ್ಯಾಸಂಗ ಮಾಡಲು ಅವಕಾಶ ಬೇಕಿದ್ದರೆ ದಯವಿಟ್ಟು ಸಂಸ್ಥೆ ಕೇಳಿರುವ ಹಣದಲ್ಲಿ ಶೇ. ೫೦ರಷ್ಟು ನೀಡಿ ಅಥವಾ ಜುಲೈ ೩೦ರ ಒಳಗೆ ಹಂತಹಂತವಾಗಿ ಹಣ ನೀಡಿ’ ಎಂದರು.
‘ಜುಲೈ ತಿಂಗಳಲ್ಲಿ ಸಿಬಿಎಸ್‌ಸಿ ಶಾಲೆಗಳಲ್ಲಿ ಪ್ರವೇಶಾತಿ ಕೊಡಲ್ಲ, ಆದ್ದರಿಂದ ಹಣ ನೀಡುವುದಾದರೆ ಈಗ ನೀಡಿ ಅಥವಾ ನಿಮ್ಮ ಕರಾರಿನಂತೆ ಶಾಲೆಯಲ್ಲಿ ವ್ಯಾಸಂಗ ಮಾಡಲು ಅವಕಾಶ ಕೊಡಿ, ಒಂದು ರು. ಸಹ ಹೆಚ್ಚುವರಿಯಾಗಿ ಕೊಡಲ್ಲ’ ಎಂದು ಪೋಷಕರು ಖಡಕ್ಕಾಗಿ ನುಡಿದರು.ಪೋಷಕರ ಮಾತುಗಳನ್ನು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಅಥವಾ ಪೋಷಕರ ಮಾತನ್ನು ಕಾರ್ಯದರ್ಶಿ ಕೇಳುವ ಮನಸ್ಥಿತಿಯಲ್ಲಿ ಇರಲಿಲ್ಲ. ಕೊನೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಹಂತಕ್ಕೆ ಬಂದು ತಲುಪಿತು.
ಪ್ರತಿಭಟನೆಯಲ್ಲಿ ಪೋಷಕರಾದ ವಕೀಲ ವಸಂತಕುಮಾರ್, ಹೇಮಂತ್, ಪ್ರಶಾಂತ್, ಶಿವಣ್ಣ, ಪುಷ್ಪರಾಜ್, ಸತೀಶ್, ಯಶೋಧ, ಪ್ರಶಾಂತ್, ತೇಜಸ್ವಿನಿ, ಸುಮಿತ್ರಾ, ಸುಬ್ರಮಣ್ಯ, ಶಕುಂತಲಾ, ವೆಂಕಟೇಶ್, ಸುರೇಶ್, ಹಾಗೂ ಎಪ್ಪತ್ತಕ್ಕೂ ಹೆಚ್ಚು ಪೋಷಕರು ಇದ್ದರು.