ಬೆಳಗಾವಿಯಲ್ಲಿ ಅದ್ಧೂರಿ ರಾಜ್ಯೋತ್ಸವಕ್ಕೆ ನಿರ್ಧಾರ

KannadaprabhaNewsNetwork |  
Published : Oct 09, 2026, 03:00 AM IST
ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌ ಅಧ್ಯಕ್ಷತೆಯಲ್ಲಿ ರಾಜ್ಯೋತ್ಸವ ಪೂರ್ವಭಾವಿ ಸಭೆ ನಡೆಯಿತು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿಪ್ರತಿ ವರ್ಷದಂತೆ ಈ ಬಾರಿಯೂ ನ.1 ರಂದು ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ವಿಜೃಂಭಣೆ ಹಾಗೂ ಮಾದರಿ ರಾಜ್ಯೋತ್ಸವ ಆಚರಿಸಲು ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪ್ರತಿ ವರ್ಷದಂತೆ ಈ ಬಾರಿಯೂ ನ.1 ರಂದು ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ವಿಜೃಂಭಣೆ ಹಾಗೂ ಮಾದರಿ ರಾಜ್ಯೋತ್ಸವ ಆಚರಿಸಲು ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.

ಬೆಳಗಾವಿ ಜಿಪಂ ಸಭಾಂಗಣದಲ್ಲಿ ಗುರುವಾರ ಜರುಗಿದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನ.1ರಂದು ಕರ್ನಾಟಕ ರಾಜ್ಯೋತ್ಸವವನ್ನು ಬೆಳಗಾವಿಯಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಲಾಗುವುದು. ರಾಜ್ಯೋತ್ಸವದ ಹಿನ್ನಲೆಯಲ್ಲಿ ಬೆಳಗಾವಿ ನಗರದಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಬೆಳಗಾವಿ ಮಹಾನಗರ ಪಾಲಿಕೆಯಿಂದ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಠರಾವು ಅಂಗೀಕರಿಸಿದ್ದು ಐತಿಹಾಸಿಕ ಕಾರ್ಯವಾಗಿದೆ. ಈ ಕಾರ್ಯಕ್ಕೆ ಹೋರಾಡಿದ ಕನ್ನಡಪರ ಸಂಘಟನೆಗಳಿಗೆ ಅಭಿನಂದನೆ ಸಲ್ಲಿಸಿದರು. ಸಂಪೂರ್ಣ ಮಹಾಜನ ವರದಿಯನ್ನು ಅಳವಡಿಸಿಕೊಂಡು ಅಂಗೀಕಾರವಾದ ಈ ಠರಾವು ಮುಂದಿನ ಕಾನೂನು ಹೋರಾಟಕ್ಕೆ ತುಂಬಾ ಉಪಯುಕ್ತವಾಗಲಿದೆ ಎಂದರು.

ರಾಜ್ಯೋತ್ಸವ ದಿನದಂದು ನಗರದಲ್ಲಿ ಲಕ್ಷಾಂತರ ಜನ ಸೇರುವುದರಿಂದ ಸಾರ್ವಜನಿಕರಿಗೆ ಸಮರ್ಪಕ ಕುಡಿಯುವ ನೀರು ಹಾಗೂ ಸಂಚಾರಿ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು. ರಾಜ್ಯೋತ್ಸವದ ಹಿನ್ನಲೆಯಲ್ಲಿ ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಕನ್ನಡಪರ ಹೋರಾಟಗಾರರಿಗೆ ಸನ್ಮಾನ ಮಾಡಲಾಗುವುದು. ಕನ್ನಡ ಪರ ಹೋರಾಟಗಾರರು ಹಾಗೂ ಸಾಧಕರಿಗೆ ಸನ್ಮಾನಿಸಲು ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗುವುದು.

ಪ್ರತಿವರ್ಷ ಬೆಳಗಾವಿ ರಾಜ್ಯೋತ್ಸವಕ್ಕೆ ಆಗಮಿಸುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ಬೆಳಗಾವಿಯ ರಾಜ್ಯೋತ್ಸವದ ಮೆರವಣಿಗೆಗೆ ಹೆಚ್ಚಿನ ಮೆರಗು ನೀಡಲು ಹಾಗೂ ಸಾರ್ವಜನಿಕರಿಗೆ ಕುಳಿತು ವೀಕ್ಷಿಸಲು ಅನುಕೂಲವಾಗುವ ಉದ್ದೇಶದೊಂದಿಗೆ ಈ ಬಾರಿ ಮೆರವಣಿಗೆಯ ಮಾರ್ಗ ಬದಲಾವಣೆ ಮಾಡಲು ಚಿಂತಿಸಲಾಗಿದ್ದು ಈ ಕುರಿತು ವಿವಿಧ ಕನ್ನಡಪರ ಸಂಘಟನೆಗಳೊಂದಿಗೆ ಚರ್ಚಿಸಿ ನಿರ್ಣಯಿಸಲಾಗುವುದು.

ಗಡಿ ಭಾಗದ ಕನ್ನಡ ಶಾಲೆಗಳಲ್ಲಿ ಕಡ್ಡಾಯವಾಗಿ ರಾಜ್ಯೋತ್ಸವ ಆಚರಣೆ ಮಾಡಿ ಜಿ.ಪಿ.ಎಸ್. ಆಧಾರಿತ ಛಾಯಾಚಿತ್ರಗಳೊಂದಿಗೆ ಕಾರ್ಯಕ್ರಮದ ವರದಿ ಸಲ್ಲಿಸಲು ಹಾಗೂ ಸದಲಗಾದಲ್ಲಿನ ಕುವೆಂಪು ಮಾದರಿ ಶಾಲೆಯ ಸ್ಥಿತಿಗತಿಯ ವರದಿ ಸಲ್ಲಿಸಲು ಸೂಚಿಸಿದರು.

ನ.1ರಂದು ಜರುಗಲಿರುವ ರಾಜ್ಯೊತ್ಸವದ ಭವ್ಯ ಮೆರವಣಿಗೆ ಮಾರ್ಗದುದ್ದಕ್ಕೂ ಕನ್ನಡ ನಾಡಿನ ಮಹನಿಯರ ಭಾವಚಿತ್ರಗಳನ್ನು ಅಳವಡಿಸುವುದರ ಜತೆಗೆ ರೂಪಕಗಳಿಗೆ ಪ್ರಶಸ್ತಿ ನೀಡಲಾಗುವುದು. ಬೆಳಗಾವಿಯ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಮೇಯರ್‌, ಉಪಮೇಯರ್‌ ವಿರುದ್ಧ ಆಕ್ರೋಶ:

ಬೆಳಗಾವಿ ಮೇಯರ್‌, ಉಪಮೇಯರ್‌ ನಾಡದ್ರೋಹಿಗಳು. ಹಾಗಾಗಿ, ಅವರನ್ನು ಈ ಬಾರಿಯ ರಾಜ್ಯೋತ್ಸವಕ್ಕೆ ಆಹ್ವಾನ ನೀಡಬಾರದು ಎಂದು ಕೆಲ ಕನ್ನಡ ಸಂಘಟನೆಗಳ ಮುಖಂಡರು ಆಗ್ರಹಿಸಿದರು. ಮೇಯರ್‌, ಉಪಮೇಯರ್‌ ಅವರಿಗೆ ಆಹ್ವಾನ ನೀಡುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಮೇಯರ್, ಉಪಮೇಯರ್‌ ವಿರುದ್ಧ ಘೋಷಣೆ ಕೂಗುತ್ತ, ಕೆಲ ಕನ್ನಡ ಸಂಘಟನೆಗಳ ಮುಖಂಡರು ಸಭೆಯಿಂದ ಹೊರನಡೆದರು.ಕರಾಳ ದಿನಾಚರಣೆಗೆ ವಿರೋಧ:

ಕರಾಳ ದಿನಾಚರಣೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂಬ ಕನ್ನಡ ಪರ ಸಂಘಟನೆಗಳ ಮನವಿಗೆ ಸ್ಪಂಧಿಸಿದ ಜಿಲ್ಲಾಧಿಕಾರಿಗಳು ಈ ಬಾರಿ ಯಾವುದೇ ಕಾರಣಕ್ಕೂ ಕರಾಳ ದಿನಾಚರಣೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಸಭೆಗೆ ತಿಳಿಸಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿರುವ ವೇದಿಕೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವೇದಿಕೆ ಸಿದ್ಧತೆ, ಧ್ವಜಾರೋಹಣ, ಆಮಂತ್ರಣ ಪತ್ರಿಕೆ, ಪಥ ಸಂಚಲನ, ಸಾಧಕರಿಗೆ ಸನ್ಮಾನ, ಮೆರವಣಿಗೆ, ರೂಪಕ ವಾಹನಗಳಿಗೆ ಅನುಮತಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಕುರಿತು ಚರ್ಚಿಸಲಾಯಿತು.

ವಿವಿಧ ಕನ್ನಡ ಪರ ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು ಮಾತನಾಡಿ, ಮೈಸೂರು ದಸರಾ ಮೆರವಣಿಗೆಯಲ್ಲಿ ಭಾಗವಹಿಸುವ ಜಿಲ್ಲೆಯ ರೂಪಕವನ್ನು ಈ ಬಾರಿ ಬೆಳಗಾವಿ ರಾಜ್ಯೋತ್ಸವ ಮೆರವಣಿಗೆಗೆ ತರಲು‌, ಬೆಂಗಳೂರಿನಿಂದ‌ ಬೆಳಗಾವಿಗೆ 3 ದಿನಗಳ ಕಾಲ ವಿಶೇಷ ರೈಲಿನ ವ್ಯವಸ್ಥೆ, ಮಹಾನಗರ ಪಾಲಿಕೆಯಿಂದ ಅಳವಡಿಸಿರುವ ನಾಮಫಲಕಗಳಲ್ಲಿ ದ್ವಿಭಾಷಾ ಬಳಸಲು, ಸುವರ್ಣ ವಿಧಾನ ಸೌಧದ ಮುಂದೆ 108 ಅಡಿಯ ಭುವನೇಶ್ವರಿ ತಾಯಿ ಕಂಚಿನ ಪ್ರತಿಮೆ ಸ್ಥಾಪಿಸಬೇಕು. ಬೆಳಗಾವಿ ರಾಜ್ಯೋತ್ಸವ ಇಡೀ ರಾಜ್ಯಕ್ಕೆ ಮಾದರಿಯಾಗಬೇಕು.

ಮೆರವಣಿಗೆಯಲ್ಲಿ ಜಿಲ್ಲೆಯ, ರಾಜ್ಯದ ಸಂಸ್ಕೃತಿ ಬಿಂಬಿಸುವ ಕಾರ್ಯವಾಗಬೇಕು. ಪ್ರತಿ ವರ್ಷ ರಾಜ್ಯೋತ್ಸವಕ್ಕೆ ಸರಕಾರದಿಂದ ಒಂದು ಕೋಟಿ ಅನುದಾನ ನೀಡುವ ಕುರಿತು ಪ್ರಸ್ತಾವನೆ ಸಲ್ಲಿಸಲು ಹಾಗೂ ನಗರದ ಪ್ರಮುಖ ಸ್ಥಳದಲ್ಲಿ ಇಮ್ಮಡಿ ಪುಲಕೇಶಿಯ ಪ್ರತಿಮೆಯನ್ನು ಸ್ಥಾಪಿಸಲು, ಕೃಷ್ಣದೇವರಾಯ ವೃತ್ತದಲ್ಕಿ ಕೃಷ್ಣದೇವರಾಯರ ಪ್ರತಿಮೆ ಸ್ಥಾಪಿಸಿ ಅಲ್ಲಿಂದಲೇ ರಾಜ್ಯೋತ್ಸವದ ಮೆರವಣಿಗೆಯನ್ನು ಪ್ರಾರಂಭಿಸುವ ಕುರಿತು ಸಲಹೆಗಳನ್ನು ನೀಡಿದರು.

ಸಭೆಯಲ್ಲಿ ನಗರ ಪೋಲಿಸ್ ಆಯುಕ್ತರಾದ ಪ್ರಕಾಶ ನಿಕಮ್, ಜಿಲ್ಲಾ ಎಸ್ಪಿ ಕೆ.ರಾಮರಾಜನ್, ಅಪರ‌ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಜಿಲ್ಲಾ‌ ಪಂಚಾಯತ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಕನ್ನಡಪರ ಸಂಘಟನೆಗಳು, ಪದಾಧಿಕಾರಿಗಳು ಹಾಜರಿದ್ದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲು ಜನರಿಗೆ ಅನುವು ಮಾಡಿಕೊಡುವಂತೆ ಹೆಚ್ಚಿನ ಸ್ಥಳಾವಕಾಶ ಒದಗಿಸಬೇಕು ಹಾಗೂ ಸುವರ್ಣ ವಿಧಾನಸೌಧದ ಎದುರಿಗೆ 108 ಅಡಿಯ ಭುವನೇಶ್ವರಿ ದೇವಿಯ ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸಲ್ಲಿಸಲಾಗುವುದು.

- ಮೊಹಮ್ಮದ ರೋಷನ್‌ , ಜಿಲ್ಲಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವನ್ಯಜೀವಿ ಸಪ್ತಾಹ: ಪ್ರಬಂಧ, ಚಿತ್ರಕಲೆ ಸ್ಪರ್ಧೆ
ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೇಕಿದೆ ಚಿಕಿತ್ಸೆ