ಗ್ರಾಹಕರಿಂದಲೇ ನೀರಿನ ಕರ ಬಾಕಿ ವಸೂಲಿಗೆ ತೀರ್ಮಾನ

KannadaprabhaNewsNetwork |  
Published : Aug 02, 2026, 01:15 AM IST
1ಕೆಆರ್ ಎಂಎನ್ 1.ಜೆಪಿಜಿರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿರವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. | Kannada Prabha

ಸಾರಾಂಶ

ರಾಮನಗರ: ನೀರಿನ ಶುಲ್ಕ ಹಳೆಯ ಬಾಕಿ - ಬಡ್ಡಿ ಸೇರಿ 21.99 ಕೋಟಿ ರುಪಾಯಿಯನ್ನು ಮನ್ನಾ ಮಾಡುವಂತೆ ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳೋಣ ಎಂಬ ವಿಪಕ್ಷದವರ ಸಲಹೆಗೆ ಮನ್ನಣೆ ನೀಡದ ಆಡಳಿತ ಪಕ್ಷ, ರಾಜ್ಯ ಸರ್ಕಾರ ಬಾಕಿ ಅಥವಾ ಬಡ್ಡಿ ಮನ್ನಾ ಮಾಡದಿದ್ದರೆ ಗ್ರಾಹಕರಿಂದಲೇ ಬಾಕಿ ವಸೂಲಿ ಮಾಡಲು ಶನಿವಾರ ನಗರಸಭೆಯ ಸಾಮಾನ್ಯಸಭೆಯಲ್ಲಿ ತೀರ್ಮಾನ ಕೈಗೊಂಡಿತು

ರಾಮನಗರ: ನೀರಿನ ಶುಲ್ಕ ಹಳೆಯ ಬಾಕಿ - ಬಡ್ಡಿ ಸೇರಿ 21.99 ಕೋಟಿ ರುಪಾಯಿಯನ್ನು ಮನ್ನಾ ಮಾಡುವಂತೆ ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳೋಣ ಎಂಬ ವಿಪಕ್ಷದವರ ಸಲಹೆಗೆ ಮನ್ನಣೆ ನೀಡದ ಆಡಳಿತ ಪಕ್ಷ, ರಾಜ್ಯ ಸರ್ಕಾರ ಬಾಕಿ ಅಥವಾ ಬಡ್ಡಿ ಮನ್ನಾ ಮಾಡದಿದ್ದರೆ ಗ್ರಾಹಕರಿಂದಲೇ ಬಾಕಿ ವಸೂಲಿ ಮಾಡಲು ಶನಿವಾರ ನಗರಸಭೆಯ ಸಾಮಾನ್ಯಸಭೆಯಲ್ಲಿ ತೀರ್ಮಾನ ಕೈಗೊಂಡಿತು.

ನಗರಸಭೆಯ ಪ್ರಶಸ್ತಿ ಭವನದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನೀರು ಸರಬರಾಜು ನಿರ್ವಹಣೆ ಜವಾಬ್ದಾರಿಯನ್ನು ಜಲಮಂಡಳಿಯಿಂದ ನಗರಸಭೆಗೆ ಹಸ್ತಾಂತರಿಸುವ ವಿಚಾರ ಚರ್ಚೆಗೆ ಬಂದಾಗ ವಿರೋಧ ಪಕ್ಷದ ಸದಸ್ಯರು, ನೀರಿನ ಕರ ಬಾಕಿ ಮನ್ನಾ ಮಾಡುವಂತೆ ಶಾಸಕರು ಮತ್ತು ನಗರಸಭಾ ಸದಸ್ಯರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡೋಣವೆಂದು ಸಲಹೆ ನೀಡಿದರು. ಇದನ್ನು ಕಿವಿಗೆ ಹಾಕಿಕೊಳ್ಳದ ಆಡಳಿತ ಪಕ್ಷದವರು ಜನರಿಂದಲೇ ನೀರಿನ ಬಾಕಿ ವಸೂಲಿ ಮಾಡಲು ನಿರ್ಧರಿಸಿದರು.

ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿ, ನೀರು ಸರಬರಾಜು ಜವಾಬ್ದಾರಿಯನ್ನು ನಗರಸಭೆ ಇಂದಲ್ಲ ನಾಳೆ ವಹಿಸಿಕೊಳ್ಳಲೇ ಬೇಕಿದೆ. ಈ ಬಗ್ಗೆ ನಗರಸಭೆ ಮತ್ತು ಜಲಮಂಡಳಿ ಅಧಿಕಾರಿಗಳನ್ನು ಒಳಗೊಂಡಂತೆ ಜಂಟಿ ಸಮಿತಿ ರಚನೆ ಮಾಡೋಣ. ಆ ಸಮಿತಿಯಲ್ಲಿ ನಗರಸಭಾ ಸದಸ್ಯರು ಇರಲಿ. ಮೊದಲು ಟಿಕೆ ಹಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸೋಣ. ನೀರಿನ ಹಳೆ ಬಿಲ್ ಬಾಕಿ ಅಥವಾ ಬಡ್ಡಿ ಮನ್ನಾ ಮಾಡುವಂತೆ ಈ ಹಿಂದೆಯೇ ನಗರಸಭೆಯಲ್ಲಿ ನಿರ್ಣಯ ಕೈಗೊಂಡು ರಾಜ್ಯಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆದರೆ, ಸರ್ಕಾರ ಯಾವುದೇ ನಿರ್ಣಯ ಕೈಗೊಂಡಿಲ್ಲ. ನೀರು ಸರಬರಾಜು ನಿರ್ವಹಣೆ ಮಾಡಬೇಕಾದರೆ ಹಳೇ ಬಿಲ್ ವಸೂಲಿ ಅನಿವಾರ್ಯ ಎಂದು ಹೇಳಿದರು.

ಶಾಸಕರ ನೇತೃತ್ವದಲ್ಲಿ ನಿಯೋಗ ಹೋಗೋಣ:

ಆಗ ಜೆಡಿಎಸ್ ಸದಸ್ಯ ರಮೇಶ್, ನೀರಿನ ಹಳೆ ಬಾಕಿ 22 ಕೋಟಿ ರು.ಗಳಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕನಕಪುರ ನಗರಸಭೆಯಲ್ಲಿ ನೀರಿನ ಬಾಕಿ ಮನ್ನಾ ಮಾಡಿದ್ದಾರೆ. ಅದೇ ರೀತಿ ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಹಳೇ ಬಿಲ್ ಬಾಕಿ ಮನ್ನಾ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ. ಹಳೆ ಬಿಲ್ ಬಾಕಿ ಮನ್ನಾ ಆದ ಮೇಲೆ ನಗರಸಭೆ ನೀರು ಸರಬರಾಜು ಜವಾಬ್ದಾರಿ ವಹಿಸಿಕೊಂಡರೆ ಸೂಕ್ತ ಎಂದು ಸಲಹೆ ನೀಡಿದರು.

ಇದಕ್ಕೆ ಕೆ.ಶೇಷಾದ್ರಿ, ಸರ್ಕಾರದಿಂದ ಮನ್ನಾ ಆಗದಿದ್ದರೆ ಏನು ಮಾಡಬೇಕು ಎಂದಾಗ ಸದಸ್ಯ ರಮೇಶ್,

ಶಾಸಕರು ಮನ್ನಾ ಮಾಡಿಸುವುದಾಗಿ ಹೇಳಿದ್ದಾರೆ. ಜನರಿಗೆ ಒಳ್ಳೆಯದಾಗುವುದಾದರೆ ಶಾಸಕರೊಂದಿಗೆ ನಗರಸಭಾ ಸದಸ್ಯರು ನಿಯೋಗದಲ್ಲಿ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಒತ್ತಾಯ ಮಾಡೋಣ. ಕೋಟ್ಯಂತರ ರುಪಾಯಿ ಬಾಕಿ ಭಾರವನ್ನು ನಗರಸಭೆ ಏಕೆ ಹೊತ್ತಿಕೊಳ್ಳಬೇಕು ಎಂದು ಪ್ರಶ್ನೆ ಮಾಡಿದರು.

ಇದಕ್ಕೆ ಪ್ರತ್ಯುತ್ತರ ನೀಡಿದ ಶೇಷಾದ್ರಿ, ಬಾಕಿ ಮನ್ನಾವನ್ನು ಸರ್ಕಾರವೇ ತೀರ್ಮಾನ ಮಾಡಬೇಕು. ಶಾಸಕರು ಶಿಫಾರಸ್ಸು ಮಾಡಬಹುದೇ ಹೊರತು, ಅವರಿಂದ ಮನ್ನಾ ಮಾಡಲಾಗದು. 456 ಕೋಟಿ ವೆಚ್ಚದ ನೆಟ್ಕಲ್ ಯೋಜನೆ ನಿರ್ವಹಣೆ ಮಾಡಬೇಕೆಂದರೆ ಹಳೇ ಬಾಕಿ ವಸೂಲಿ ಆಗಲೇಬೇಕು. ಎಲ್ಲವನ್ನೂ ಮನ್ನಾ ಮಾಡುತ್ತಾ ಹೋದರೆ ನಗರಸಭೆಯನ್ನು ನಡೆಸುವುದು ಹೇಗೆ? ಮನ್ನಾ ಮಾಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸೋಣ, ಸಾಧ್ಯವಾಗದಿದ್ದರೆ ಜನರಿಂದ ಕಟ್ಟಿಸೋಣ ಎಂದು ಹೇಳಿದರು.

ಫಿಲೇಚರ್‌ಗಳಿಗೆ ಗೃಹೇತರ ಬಿಲ್ :

ನಗರದ 31 ವಾರ್ಡುಗಳಲ್ಲಿರುವ ಫಿಲೇಚರಿಗಳ ನೀರಿನ ಸಂಪರ್ಕವನ್ನು ವಾಣಿಜ್ಯದ ಬದಲಿಗೆ ಗೃಹೇತರ ಬಳಕೆಗೆ ಸೇರಿಸಲು ಹಾಗೂ ಇನ್ನು ಮುಂದೆ ಮನೆಗಳಿಗೆ ನೀರಿನ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದವರು ಕಂದಾಯ ಶಾಖೆಯಲ್ಲಿ ಆಸ್ತಿ ತೆರಿಗೆ ಪಾವತಿಸಿರುವುದಕ್ಕೆ ನಿರಪೇಕ್ಷಣ ಪ್ರಮಾಣ ಪತ್ರ ಪಡೆಯಬೇಕೆಂಬ ಕೆ.ಶೇಷಾದ್ರಿರವರ ಪ್ರಸ್ತಾಪಕ್ಕೆ ಸದಸ್ಯರೆಲ್ಲರು ಒಪ್ಪಿಗೆ ಸೂಚಿಸಿದರು.

ಫುಡ್ ಸ್ಟ್ರೀಟ್ ಮಳಿಗೆಗಳಿಗೆ 2.25 ಲಕ್ಷ ಮುಂಗಡ ದರ:

ಗಾಂಧಿನಗರದ ಯುನಿಲೆಟ್ ಎದುರ ಫುಡ್ ಸ್ಟ್ರೀಟ್ ಮಳಿಗೆಗಳ ದರ ನಿಗದಿ ವಿಚಾರ ಚರ್ಚೆಗೆ ಬಂದಾಗ ಆಯುಕ್ತ ಡಾ.ಜಯಣ್ಣ, ವಿವಿಧ ಅಳತೆಯ 37 ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಸರ್ಕಾರದ ನಿಯಮದಂತೆ ಒಂದು ಅಂಗಡಿಗೆ ಬಡ್ಡಿ ರಹಿತ ಮರು ಪಾವತಿ ಠೇ‍ವಣಿ ಮತ್ತು ಬಾಡಿಗೆ ದರ ಪಟ್ಟಿ ಸಿದ್ಧಪಡಿಸಲಾಗಿದೆ. ಇದಕ್ಕೆ ಸಭೆ ಒಪ್ಪಿಗೆ ಸೂಚಿಸಿದರೆ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಬಹಿರಂಗ ಹರಾಜು ನಡೆಸಬಹುದು ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಶೇಷಾದ್ರಿ ಮಾತನಾಡಿ, ಈ ಫುಡ್ ಸ್ಟ್ರೀಟ್ ನಿರ್ಮಾಣಕ್ಕೆ ಸುಮಾರು 80 ಲಕ್ಷ ರುಪಾಯಿ ಖರ್ಚಾಗಿದೆ. ಅಷ್ಟೂ ಹಣವೂ ಸಂಗ್ರಹ ಆಗಬೇಕಿದೆ. ಠೇವಣಿಗಾಗಿ ಬಹಿರಂಗ ಹರಾಜು ಮಾಡಿದರೆ ಹಣ ಉಳ್ಳವರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಇದಕ್ಕೆ ಅವಕಾಶ ನೀಡದೆ ಮುಂಗಡ ದರ 2 ಲಕ್ಷ 25 ಸಾವಿರ ನಿಗದಿ ಪಡಿಸೋಣ, ಮಾಸಿಕ ಬಾಡಿಗೆ ದರ ಕನಿಷ್ಠ 3,460 ರು.ಗಳಿಂದ 5 ಸಾವಿರ ರು.ಗಳಿದೆ. ಬಹಿರಂಗ ಹರಾಜಿನಲ್ಲಿ ಪಾಲ್ಗೊಳ್ಳುವವರು ತಮ್ಮ ಆರ್ಥಿಕ ಅನುಕೂಲಕ್ಕೆ ತಕ್ಕಂತೆ ಬಾಡಿಗೆ ದರಕ್ಕೆ ಬಿಡ್ ಕೂಗಲಿ ಎಂದು ನೀಡಿದ ಸಲಹೆಗೆ ಸದಸ್ಯರು ಒಪ್ಪಿಗೆ ಸೂಚಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಗಿರಿಜಮ್ಮ ಗುರುವೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಮಹಮ್ಮದ್ ಆರೀಫ್ ಉಪಸ್ಥಿತರಿದ್ದರು.

1ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಉಪಾಧ್ಯಕ್ಷೆ ಗಿರಿಜಮ್ಮ ಗುರುವೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಮಹಮ್ಮದ್ ಆರೀಫ್ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಜಾಪ್ರಭುತ್ವದ ಭದ್ರ ಅಡಿಪಾಯಕ್ಕೆ ಎಸ್‌ಐಆರ್‌ನಲ್ಲಿ ಭಾಗಿಯಾಗಿ
ವ್ಯಸನಮುಕ್ತ ಸಮಾಜಕ್ಕೆ ಯುವಕರ ಪಾತ್ರ ಮುಖ್ಯ