ಹುಬ್ಬಳ್ಳಿ: ರಾಜ್ಯ ಸರ್ಕಾರ ಜೈನ ನಿಗಮ ಮಂಡಳಿ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ. 9ರಂದು ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ವರೂರಿನ ನವಗ್ರಹ ತೀರ್ಥಕ್ಷೇತ್ರದ ಆಚಾರ್ಯ ಗುಣಧರನಂದಿ ಮಹಾರಾಜ ಹೇಳಿದರು.
ವರೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಎಲ್ಲ ಸಮಾಜಕ್ಕೂ ನಿಗಮ ಮಂಡಳಿ ನೀಡಿದೆ. ಆದರೆ, ಅತಿ ಚಿಕ್ಕ ಜೈನ ಸಮುದಾಯಕ್ಕೆ ಈ ವರೆಗೂ ನಿಗಮ ಮಂಡಳಿ ನೀಡಿಲ್ಲ. ಈ ಹಿಂದೆ ತೀರ್ಥಕ್ಷೇತ್ರಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ ಆಶ್ವಾಸನೆ ನೀಡಿ ಒಂದೂವರೆ ವರ್ಷ ಗತಿಸಿದೆ. ಆ ಕುರಿತು ಪ್ರಶ್ನಿಸಿದರೆ ವಿಧಾನಸೌಧದಲ್ಲಿ ಕಡತ ಪರಿಶೀಲನೆಯ ಪ್ರಕ್ರಿಯೆಯಲ್ಲಿದೆ ಎನ್ನುತ್ತಿದ್ದಾರೆ. ಈ ಅವಧಿಯಲ್ಲಿ 3-4 ಸಮಾಜಕ್ಕೆ ನಿಗಮ ಮಂಡಳಿ ನೀಡಲಾಗಿದೆ. ನಮಗೆ ನೀಡಲು ಸಮಸ್ಯೆ ಏನಿದೆ ಎಂಬುದನ್ನು ತಿಳಿಸಲಿ ಎಂದು ಪ್ರಶ್ನಿಸಿದರು.ಅಧಿವೇಶನದಲ್ಲಿ ಈಡೇರಿಸಿ
ಜೈನ ಸಮಾಜ ಸಾಕ್ಷರತೆ ಹೊಂದಿದ್ದರೂ, ಸಾಕಷ್ಟು ಕುಟುಂಬ ಇಂದಿಗೂ ಬಡತನದಲ್ಲಿವೆ. ಅಂಥವರನ್ನು ಗುರುತಿಸಿ ಸರ್ಕಾರ ನಿವೇಶನ ನೀಡಿದಲ್ಲಿ ಮನೆ ನಿರ್ಮಾಣಕ್ಕೆ ನಾವು ಸಹಾಯ ಮಾಡುತ್ತೇವೆ. ಅಲ್ಲದೆ, ಸಮಾಜದ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಬೇಕು. ನಮ್ಮೆಲ್ಲ ಬೇಡಿಕೆಗಳನ್ನು ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದ ಒಳಗೆ ಈಡೇರಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ವಿಶ್ರಾಂತಿಗೆ ಸರ್ಕಾರಿ ಕಟ್ಟಡ ನೀಡಿ
ವರೂರು ಕ್ಷೇತ್ರದಲ್ಲಿ ಜನವರಿಯಲ್ಲಿ ಮಹಾಮಸ್ತಾಕಾಭಿಷೇಕ ನಡೆಯಲಿದ್ದು, ತಮಿಳುನಾಡು, ಕೇರಳ, ಗುಜರಾತ್ ರಾಜ್ಯಗಳಿಂದ ಅಸಂಖ್ಯಾತ ಭಕ್ತರು ವರೂರಿನ ತೀರ್ಥಕ್ಷೇತ್ರಕ್ಕೆ ಬರುತ್ತಾರೆ. ಚಳಿಗಾಲದ ಸಮಯವಾಗಿರುವುದರಿಂದ ಜೈನ ಮುನಿಗಳಿಗೆ, ಭಕ್ತರಿಗೆ ರಾತ್ರಿಯ ವೇಳೆ ವಿಶ್ರಾಂತಿ ಪಡೆಯಲು ಸರ್ಕಾರಿ ಕಟ್ಟಡಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.ಮೊಟ್ಟೆಯಿಂದ ವಿನಾಯ್ತಿ ನೀಡಿ
ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣೆ ಕಡ್ಡಾಯ ಎಂಬ ಸರ್ಕಾರದ ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಗುಣಧರನಂದಿ ಮಹಾರಾಜರು, ರಾಜ್ಯದಲ್ಲಿನ ಬಹುತೇಕ ಮಠಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಧಾರ್ಮಿಕ ಪರಂಪರೆ, ಅಹಿಂಸಾ ಧರ್ಮ ಪಾಲಿಸುತ್ತ ಮಾಂಸ ಸೇವನೆಯಿಂದ ದೂರ ಇದ್ದಾರೆ. ಆದರೆ, ಸರ್ಕಾರದ ಈ ಆದೇಶ ಅವರ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದೆ. ಮಠಗಳಲ್ಲಿ ಓದುವ ಮಕ್ಕಳಿಗೆ ಮೊಟ್ಟೆ ತಿನ್ನುವ ಆದೇಶದಿಂದ ವಿನಾಯಿತಿ ನೀಡಿ, ಆದೇಶ ಹಿಂಪಡೆಯಬೇಕು. ಅಂತಹ ಸ್ಥಳಗಳಲ್ಲಿ ಹಣ್ಣುಗಳ ವಿತರಣೆಗೆ ವ್ಯವಸ್ಥೆ ಮಾಡಲಿ ಎಂದರು.ಅನ್ಯರಿಗೂ ಅಧ್ಯಕ್ಷರನ್ನಾಗಿಸಿ
ಅಲ್ಪಸಂಖ್ಯಾತರ ನಿಗಮ ಮಂಡಳಿಗೆ ಒಂದೇ ಸಮಾಜದವರನ್ನು ಅಧ್ಯಕ್ಷರನ್ನಾಗಿ ಮಾಡುತ್ತ ಬರಲಾಗಿದೆ. ಜೈನ್, ಬೌದ್ಧ, ಕ್ರಿಶ್ಚಿಯನ್, ಸಿಖ್ ಸಮುದಾಯದವರು ಸಹ ಇದೇ ನಿಗಮ ಮಂಡಳಿಗೆ ಒಳಪಡುತ್ತಾರೆ. ಎಲ್ಲ ಸಮುದಾಯದವರಿಗೂ ಅಧ್ಯಕ್ಷ ಸ್ಥಾನ ನೀಡಬೇಕು. ಎರಡು, ಮೂರು ವರ್ಷಕ್ಕೊಮ್ಮೆ ಅಧ್ಯಕ್ಷರನ್ನು ಬದಲಾಯಿಸಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶ್ರಮಿಸುವಂತಾಗಲಿ ಎಂದರು.ಸುದ್ದಿಗೋಷ್ಠಿಯಲ್ಲಿ ಜೈನ ಸಮುದಾಯದ ಮುಖಂಡರಾದ ಸಂದೀಪ ಸೈಬಣ್ಣವರ, ದೇವೇಂದ್ರಪ್ಪ ಕಾಗೇನವರ, ರಾಜೇಂದ್ರ ಬೀಳಗಿ, ಸಂತೋಷ ಮುರುಗಿಪಾಟೀಲ, ವಿಮಲ್ ತಾಳಿಕೋಟೆ ಸೇರಿದಂತೆ ಹಲವರಿದ್ದರು.ಮುತ್ತಿಗೆ
ನ. 25ರಿಂದ ವರೂರಿನ ನವಗ್ರಹ ಕ್ಷೇತ್ರದಿಂದ ಪಾದಯಾತ್ರೆ ನಡೆಯಲಿದೆ. ಡಿಸೆಂಬರ್ 9ರಂದು ಬೆಳಗಾವಿಯ ಬಸ್ತವಾಡ ಗ್ರಾಮದಿಂದ 30 ಸಾವಿರಕ್ಕೂ ಅಧಿಕ ಸಮಾಜ ಬಾಂಧವರೊಂದಿಗೆ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಲಾಗುವುದು. ಆಗಲೂ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು.ಆಚಾರ್ಯ ಗುಣಧರನಂದಿ ಮಹಾರಾಜರು, ವರೂರು ತೀರ್ಥಕ್ಷೇತ್ರ