ಕೊಡವ ಮುಸ್ಲಿಮರ ಮಾತೃಭಾಷೆ ನಿಘಂಟು ಹೊರತರಲು ನಿರ್ಧಾರ

KannadaprabhaNewsNetwork |  
Published : Jan 09, 2026, 02:45 AM IST
 | Kannada Prabha

ಸಾರಾಂಶ

ಕೊಡವ ಮುಸ್ಲಿಮರ ಮಾತೃಭಾಷೆಯ ಎಲ್ಲಾ ಪದಗಳನ್ನು ಸಂಗ್ರಹಿಸಿ ನಿಘಂಟನ್ನು (ಶಬ್ದ ಭಂಡಾರ) ಹೊರತರಲು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ನಿರ್ಧರಿಸಿದೆ.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಕೊಡವ ಮುಸ್ಲಿಮರ ಮಾತೃಭಾಷೆಯ ಎಲ್ಲಾ ಪದಗಳನ್ನು ಸಂಗ್ರಹಿಸಿ ನಿಘಂಟನ್ನು (ಶಬ್ದ ಭಂಡಾರ) ಹೊರತರಲು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ನಿರ್ಧರಿಸಿದೆ. ಕೆಎಂಎ ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಅಧ್ಯಕ್ಷತೆಯಲ್ಲಿ ವಿರಾಜಪೇಟೆಯಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಕೊಡವ ಮುಸ್ಲಿಮರ ಮಾತೃಭಾಷೆಯಾದ ‘ಪಯಕ’ದ ಬೆಳವಣಿಗೆ ಮತ್ತು ದಾಖಲೀಕರಣದ ನಿಟ್ಟಿನಲ್ಲಿ ಇದೊಂದು ಮಹತ್ವದ ಯೋಜನೆಯಾಗಿದ್ದು, ಇದಕ್ಕಾಗಿ ಸಮುದಾಯದ ಸಹಕಾರ ನಿರೀಕ್ಷಿಸಲಾಗಿದೆ ಎಂದು ಸೂಫಿ ಹಾಜಿ ಹೇಳಿದರು.

ಉದ್ದೇಶಿತ ಈ ನಿಘಂಟಿನಲ್ಲಿ ‘ಪಯಕ’ದ ಸಮಗ್ರ ಪದಗಳನ್ನು ಸೇರ್ಪಡೆಗೊಳಿಸಲು ಶ್ರಮಿಸಲಾಗುವುದು. ಸಮುದಾಯದ ಪೂರ್ವಜರು ಬಳಸುತ್ತಿದ್ದ ಮತ್ತು ಪ್ರಸ್ತುತ ಬಳಕೆಯಲ್ಲಿ ಇಲ್ಲದ ಪದಗಳನ್ನು ಹಿರಿಯರಿಂದ ಸಂಗ್ರಹಿಸಲಾಗುವುದು. ಆಸಕ್ತರಿಂದಲೂ ಪದಗಳನ್ನು ಆಹ್ವಾನಿಸಲಾಗುವುದು. ಇಂದು ಬಳಕೆಯಲ್ಲಿ ಇಲ್ಲದ ಅತ್ಯಂತ ಹೆಚ್ಚು ಪದಗಳನ್ನು ಕಳುಹಿಸಿಕೊಟ್ಟವರಿಗೆ ಸಂಸ್ಥೆಯಿಂದ ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಈ ನಿಘಂಟನ್ನು ಪುಸ್ತಕ ರೂಪದ ಜೊತೆಗೆ ಡಿಜಿಟಲೀಕರಿಸಲಾಗುವುದು. ನಿಘಂಟಿನ ಆ್ಯಪ್ ನಿರ್ಮಿಸಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಉಚಿತವಾಗಿ ನೀಡುವ ಗುರಿ ಹೊಂದಲಾಗಿದೆ ಎಂದರು.ಆಸಕ್ತರು ಪಯಕದ ಕುರಿತು ತಮಗೆ ಗೊತ್ತಿರುವ ಪದಗಳನ್ನು ಕನ್ನಡ ಅನುವಾದ ಮತ್ತು ವಿವಿಧ ಸಾಂಧರ್ಬಿಕ ಅರ್ಥಗಳೊಂದಿಗೆ ವಾಟ್ಸಪ್ ಸಂಖ್ಯೆ 9886060342ಕ್ಕೆ ಕಳಿಸಿಕೊಡಬಹುದು ಅಥವಾ ಲಿಖಿತವಾಗಿ ಕಳಿಸುವವರು. ವಿಳಾಸ: ಅಧ್ಯಕ್ಷರು, ಕೊಡವ ಮುಸ್ಲಿಂ ಅಸೋಸಿಯೇಷನ್, ಪ್ರಧಾನ ಕಚೇರಿ, ಡಿ.ಎಚ್. ಎಸ್. ಕಟ್ಟಡ, ಮುಖ್ಯ ರಸ್ತೆ ವಿರಾಜಪೇಟೆ, ಕೊಡಗು ಜಿಲ್ಲೆ-571218. ಗಡುವು ಫೆ.28.ನಿಘಂಟು ಮತ್ತು ಬೈಲಾ ತಿದ್ದುಪಡಿಯ ಹೊಣೆಗಾರಿಕೆಯನ್ನು ಸಭೆಯ ತೀರ್ಮಾನದಂತೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ ಅವರಿಗೆ ವಹಿಸಲಾಗಿದೆ ಎಂದರು.ಉಪಾಧ್ಯಕ್ಷ ಅಕ್ಕಳತಂಡ ಎಸ್. ಮೊಯ್ದು, ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಸಂಘಟನಾ ಕಾರ್ಯದರ್ಶಿ ಮೀತಲ್ತಂಡ ಎಂ. ಇಸ್ಮಾಯಿಲ್, ಹಿರಿಯ ನಿರ್ದೇಶಕರು ಸೇರಿದಂತೆ ಜಿಲ್ಲೆಯ ವಿವಿಧ ಪ್ರದೇಶಗಳ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ