ಕುಮಟಾ: ಇತ್ತೀಚೆಗೆ ನಿಧನರಾದ ರೈತ ಮುಖಂಡ, ಅಘನಾಶಿನಿ ನದಿ ಹೋರಾಟ ಸಮಿತಿ ಅಧ್ಯಕ್ಷರಾಗಿದ್ದ ಟಿ.ಪಿ. ಹೆಗಡೆ ಅವರ ಮುಂದಾಳತ್ವದಲ್ಲಿ ಆರಂಭಿಸಿದ ಅಘನಾಶಿನಿ ನದಿ ಉಳಿಸಿ ಹೋರಾಟವನ್ನು ದಿಟ್ಟವಾಗಿ ಮುಂದುವರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪಟ್ಟಣದ ಹವ್ಯಕ ಸಭಾಭವನದಲ್ಲಿ ನಡೆದ ಅಘನಾಶಿನಿ ನದಿ ಹೋರಾಟ ಸಮಿತಿಯ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.ಇತ್ತೀಚೆಗೆ ನಿಧನರಾದ ಟಿ.ಪಿ. ಹೆಗಡೆ ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮದ್ಯಪಾನ ಸಂಯಮ ಮಂಡಳಿ ಮಾಜಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಭತ್ತಗುತ್ತಿಗೆ, ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಅಘನಾಶಿನಿ ಹೋರಾಟ ಸಮಿತಿ ಅಧ್ಯಕ್ಷ ಗಣಪತಿ ಗೌಡ ಕಂದಳ್ಳಿ, ಡಾ. ಸುರೇಶ ಹೆಗಡೆ, ಸೂರಜ್ ನಾಯ್ಕ, ವಿನೋದ ಪ್ರಭು, ಡಾ. ಪ್ರಕಾಶ ಮೇಸ್ತ, ಜಿ.ಪಿ. ಭಟ್, ಜಿ.ವಿ. ಹೆಗಡೆ, ವಿಷ್ಣು ಶಾಸ್ತ್ರಿ, ಗಿರಿಯಾ ಗೌಡ, ವಿವೇಕ ಜಾಲಿಸತ್ಗಿ ಮುಂತಾದವರು ನುಡಿನಮನ ಸಲ್ಲಿಸಿದರು.
ಬಳಿಕ ಅಘನಾಶಿನಿ ನದಿಗೆ ಸಂಬಂಧಿಸಿದಂತೆ ಬಹುಗ್ರಾಮ ಯೋಜನೆಯ ಸಾಧಕ-ಬಾಧಕಗಳನ್ನು ಪುನರ್ವಿಮರ್ಶಿಸಲಾಯಿತು. ಹೋರಾಟ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಸಮಿತಿಯ ಅಧ್ಯಕ್ಷ ಗಣಪತಿ ಗೌಡ ಪ್ರಕಟಿಸಿದರು.ಯೋಜಿತ ಬಹುಗ್ರಾಮ ಕುಡಿಯುವ ನೀರು ಯೋಜನೆ ಅಘನಾಶಿನಿ ನದಿಗೆ ಕುತ್ತು ತರಲಿದೆ. ಜಲಮೂಲ ಸ್ಥಳ ಬದಲಾವಣೆಗೆ ಒತ್ತಾಯಿಸಿ ಈಗಾಗಲೇ ಅಘನಾಶಿನಿ ನದೀ ತೀರದ ಪ್ರದೇಶಕ್ಕೆ ವಿಜ್ಞಾನಿಗಳ ಭೇಟಿ ಆಗಿದೆ. ತಜ್ಞರು ವರದಿ ನೀಡಿದ್ದಾರೆ. ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ಜತೆ ಸಭೆ ನಡೆಸಲಾಗಿದೆ. ಹಾಗೆಯೇ ಸಮಿತಿಯಿಂದ ಜಿಲ್ಲಾಧಿಕಾರಿ ಭೇಟಿ ಮಾಡಲಾಗಿದೆ. ಅಘನಾಶಿನಿ ರೈತರ ಸಮಾವೇಶ ನಡೆಸಲಾಗಿದೆ. ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಸ್ವರ್ಣವಲ್ಲೀ ಸ್ವಾಮೀಜಿ ಅವರನ್ನು ಹೋರಾಟ ಸಮಿತಿ ಭೇಟಿ ಮಾಡಿದೆ. ಯೋಜನೆಯ ಕಾಮಗಾರಿ ನಿಲ್ಲಿಸಲು ಜಿಲ್ಲಾ ಸಚಿವರು ಸೂಚಿಸಿದ್ದಾರೆ.
ಈ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಅರಣ್ಯ ಪರವಾನಗಿ ಇಲ್ಲದೇ ಕಾಮಗಾರಿ ನಡೆದಿರುವ ಬಗ್ಗೆ ರಾಜ್ಯ ಅರಣ್ಯ ಇಲಾಖೆ ಮುಖ್ಯಸ್ಥರಿಗೆ ದೂರು ಸಲ್ಲಿಸಲಾಗಿದೆ. ಬೆಂಗಳೂರು ಮತ್ತು ದೆಹಲಿಯ ಜಲಜೀವನ್ ಮಿಶನ್ ಮುಖ್ಯಸ್ಥರಿಗೂ ದೂರು ಸಲ್ಲಿಸಿದೆ. ಯೋಜನೆಯ ಜಲಮೂಲ ಸ್ಥಳವನ್ನು ದೀವಳ್ಳಿಯಿಂದ ಕಲ್ಲಬ್ಬೆ ಪಂಚಾಯಿತಿಯ ಹೊಸಳ್ಳಿ ಮರಾಕಲ್ ಸ್ಥಳಕ್ಕೆ ಬದಲಾಯಿಸಬೇಕು ಎಂಬ ವಿಷಯಕ್ಕೆ ಎಲ್ಲರ ಒಪ್ಪಿಗೆ ಸಿಕ್ಕಿದೆ. ಹೊಸಳ್ಳಿ ಸ್ಥಳಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿದ್ದಾರೆ. ಅಘನಾಶಿನಿ ದೀವಳ್ಳಿ ಸ್ಥಳ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿ ಅಹಿಂಸಾತ್ಮಕ ಪ್ರತಿಭಟನೆ ಮಾಡಿ ಯೋಜನೆ ಕಾಮಗಾರಿಗೆ ತೀವ್ರ ವಿರೋಧ ಪ್ರಕಟಿಸಲಾಗಿದೆ. ಕುಮಟಾ ಪುರಸಭೆ ಜತೆ ಸಭೆ ನಡೆದಾಗ ಬೇಸಿಗೆಯಲ್ಲಿ ದೀವಳ್ಳಿ ಅಘನಾಶಿನಿಯಲ್ಲಿ ನೀರು ಸಿಗುತ್ತಿಲ್ಲ ಎಂಬುದನ್ನು ನಗರಸಭೆ ಒಪ್ಪಿಕೊಂಡಿದೆ. ಆದ್ದರಿಂದ ಗ್ರಾಮೀಣ ನೀರು ಸರಬರಾಜು ಇಲಾಖೆಯು ಈ ಯೋಜನೆಯ ಜಲಮೂಲ ಸ್ಥಳ ಬದಲಾಯಿಸುವ ಆದೇಶ ಪ್ರಕಟಿಸಬೇಕು. ಮೂರೂರು ಕಲ್ಲಬ್ಬೆ ಪಂಚಾಯಿತಿಯವರಿಗೆ, ಅಘನಾಶಿನಿ ಹೋರಾಟ ಸಮಿತಿಗೆ ಈ ಬಗ್ಗೆ ಲಿಖಿತವಾಗಿ ತಿಳಿಸಬೇಕು ಎಂದು ಸಭೆಯ ನಿರ್ಣಯವನ್ನು ತಿಳಿಸಿದರು.