
ಹುಬ್ಬಳ್ಳಿ: ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಟ್ಟು 1800ಕ್ಕೂ ಹೆಚ್ಚು ರೌಡಿಶೀಟರ್‌ಗಳಿದ್ದಾರೆ. ಅದರಲ್ಲಿ ಸನ್ನಡತೆ ಹೊಂದಿದೆ 370 ಜನರನ್ನು ರೌಡಿಶೀಟರ್ ಪಟ್ಟಿಯಿಂದ ಕೈಬಿಡಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಸಿದ್ಧತೆ ನಡೆದಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಇನ್ನೂ 1450ಕ್ಕೂ ಹೆಚ್ಚು ರೌಡಿಶೀಟರ್‌ಗಳಿದ್ದಾರೆ. ರೌಡಿಗಳು ಅಪರಾಧ ಚಟುವಟಿಕೆ ತೊಡಗದಂತೆ ಮುಂಜಾಗ್ರತಾ ಕ್ರಮವಾಗಿ 700 ರೌಡಿಶೀಟರ್‌ಗಳಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿದೆ. ಇನ್ನೂ ಕೆಲವು ರೌಡಿಗಳ ಚಲನವಲನವನ್ನು ಗಮನಿಸುತ್ತಿದ್ದು, ಅಪರಾಧ ಕೃತ್ಯದಲ್ಲಿ ತೊಡಗಿದರೆ ಅವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಮಾದಕ ವಸ್ತುಗಳ ಮಾರಾಟ ಮಾಡುವ 18 ಜನ ಸೇರಿ ವಿವಿಧ ಪ್ರಕರಣದಲ್ಲಿ ಭಾಗಿಯಾದ 83 ಜನರನ್ನು ಪ್ರಸಕ್ತ ವರ್ಷ ಗಡಿಪಾರು ಮಾಡಲಾಗಿದೆ. ಹು-ಧಾ ಅವಳಿ ನಗರದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಅಗತ್ಯ ಬಿದ್ದರೆ ಇನ್ನೂ ಕೆಲವರನ್ನು ಗಡಿಪಾರು ಮಾಡಲಾಗುವುದು ಎಂದು ತಿಳಿಸಿದರು.ಉಪನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಪೊಲೀಸ್ ಕ್ವಾಟರ್ಸ್‌ನಲ್ಲಿ ಪೊಲೀಸ್ ಸಿಬ್ಬಂದಿ ಮನೆಗಳ ಕಳವು ಪ್ರಕರಣ ದಾಖಲಾಗಿದೆ. ಈ ಕುರಿತು ತನಿಖೆ ಕೈಗೊಂಡಿದ್ದು, ಆರೋಪಿಗಳ ಸೆರೆಹಿಡಿಯಲಾಗುವುದು. ಹಿಂದೆ ವಿದ್ಯಾಗಿರಿ, ಕಸಬಾಪೇಟ ಹಾಗೂ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳರ ಗ್ಯಾಂಗ್ ಹಿಡಿದು ಸಾಕಷ್ಟು ಜನರ ಬಂಧಿಸಲಾಗಿತ್ತು. ಕಳೆದ ಹಲವು ತಿಂಗಳಿನಿಂದ ಪ್ರಕರಣಗಳು ನಡೆದಿರಲಿಲ್ಲ. ಇತ್ತೀಚೆಗೆ ವಿದ್ಯಾಗಿರಿ ಹಾಗೂ ಕೇಶ್ವಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿದ್ದು, ಆದಷ್ಟು ಬೇಗ ಆರೋಪಿಗಳ ಪತ್ತೆ ಹಚ್ಚಲಾಗುವುದು ಎಂದರು.
ನಾಲ್ವರ ಮೇಲೆ ಗೂಂಡಾ ಕಾಯ್ದೆ ಜಾರಿ: ನ್ಯಾಯಾಲಯ ಕಮಿಷನರೇಟ್ ವ್ಯಾಪ್ತಿಯ ನಾಲ್ವರ ಮೇಲೆ ಗೂಂಡಾ ಕಾಯ್ದೆ ಜಾರಿಗೆ ಆದೇಶಿಸಿದೆ. ಜೂನ್ ತಿಂಗಳಲ್ಲಿ ಸಾಗರ ಲಕ್ಕುಂಡಿ, ಲಕ್ಷ್ಮಣ ಬಳ್ಳಾರಿ, ಮಂಜುನಾಥ್ (ಸೈಂಟಿಸ್ಟ್ ಮಂಜಾ), ದಾವುದ್ ನದಾಫ್ ಮೇಲೆ ಗೂಂಡಾ ಕಾಯ್ದೆ ಜಾರಿ ಮಾಡಿ ಬಳ್ಳಾರಿ, ಮೈಸೂರು ಹಾಗೂ ಮಂಗಳೂರ ಜೈಲಿಗೆ ಹಾಕಲಾಗಿತ್ತು. ಹೈಕೋರ್ಟ್ ಸಲಹಾ ಮಂಡಳಿ ವಿಚಾರಣೆ ನಡೆಸಿ ನ್ವಾಲರ ಮೇಲೆ ಗೂಂಡಾ ಕಾಯ್ದೆ ಜಾರಿ ಮಾಡಿ ಆದೇಶ ನೀಡಿದ್ದು, ಒಂದು ವರ್ಷಗಳ ಕಾಲ ನಾಲ್ವರು ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ. ಇನ್ನೂ ಹಲವರ ಮೇಲೆ ಗೂಂಡಾ ಕಾಯ್ದೆ ಜಾರಿ ಮಾಡಲು ತಯಾರಿ ನಡೆದಿದೆ ಎಂದೂ ತಿಳಿಸಿದರು.