ಜಿಲ್ಲೆಯಲ್ಲಿ ಪಶು ವೈದ್ಯಕೀಯ ವಿಜ್ಞಾನ ಕಾಲೇಜು ಸ್ಥಾಪಿಸಲು ನಿರ್ಧಾರ: ಎನ್.ಚಲುವರಾಯಸ್ವಾಮಿ

KannadaprabhaNewsNetwork |  
Published : Jan 19, 2026, 12:30 AM IST
18ಕೆಎಂಎನ್ ಡಿ20 | Kannada Prabha

ಸಾರಾಂಶ

ಪಶು ವೈದ್ಯಕೀಯ ವಿಜ್ಞಾನ ಕಾಲೇಜು ಸ್ಥಾಪಿಸಲು 100 ಎಕರೆ ಭೂಮಿ ಸಿದ್ದವಿದೆ ಎಂದು ನಿರ್ಮಲಾನಂದನಾಥಶ್ರೀಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ, ಡಿಸಿಎಂ ಮತ್ತು ಪಶು ಸಂಗೋಪನಾ ಸಚಿವರಲ್ಲಿ ಮನವಿ ಮಾಡಿ ಶ್ರೀಗಳ ಮಾರ್ಗದರ್ಶದಲ್ಲಿ ಆದಷ್ಟು ಬೇಗ ಜಿಲ್ಲೆಯಲ್ಲಿ ಕಾಲೇಜು ಸ್ಥಾಪಿಸಲಾಗುವುದೆಂದು ಇಂದು ಭರವಸೆ ನೀಡುತ್ತಿದ್ದೇನೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಆದಿಚುಂಚನಗಿರಿ ಶ್ರೀಗಳ ಆಶಯದಂತೆ ಕೃಷಿಯೊಂದಿಗೆ ಹೈನುಗಾರಿಕೆಯನ್ನು ಆಶ್ರಯಿಸಿಕೊಂಡಿರುವ ರೈತರಿಗಾಗಿ ಜಿಲ್ಲೆಯಲ್ಲಿ ಪಶು ವೈದ್ಯಕೀಯ ವಿಜ್ಞಾನ ಕಾಲೇಜು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ತಾಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರದ ಬಿಜಿಎಸ್ ಸಭಾಭವನದಲ್ಲಿ ಆಯೋಜಿಸಿದ್ದ ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಜಯಂತ್ಯುತ್ಸವ, ಸಂಸ್ಮರಣಾ ಮಹೋತ್ಸವ ಹಾಗೂ ಸಂತ ಭಕ್ತ ಸಂಗಮವನ್ನು ಉದ್ಘಾಟಿಸಿ ಮಾತನಾಡಿದರು.

ಪಶು ವೈದ್ಯಕೀಯ ವಿಜ್ಞಾನ ಕಾಲೇಜು ಸ್ಥಾಪಿಸಲು 100 ಎಕರೆ ಭೂಮಿ ಸಿದ್ದವಿದೆ ಎಂದು ನಿರ್ಮಲಾನಂದನಾಥಶ್ರೀಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ, ಡಿಸಿಎಂ ಮತ್ತು ಪಶು ಸಂಗೋಪನಾ ಸಚಿವರಲ್ಲಿ ಮನವಿ ಮಾಡಿ ಶ್ರೀಗಳ ಮಾರ್ಗದರ್ಶದಲ್ಲಿ ಆದಷ್ಟು ಬೇಗ ಜಿಲ್ಲೆಯಲ್ಲಿ ಕಾಲೇಜು ಸ್ಥಾಪಿಸಲಾಗುವುದೆಂದು ಇಂದು ಭರವಸೆ ನೀಡುತ್ತಿದ್ದೇನೆ ಎಂದರು.

ಕೃಷಿ ಮಾಡುವ ರೈತರು ಮತ್ತು ಜನಪದ ಕಲಾವಿದರನ್ನು ಬಹಳ ಪ್ರೀತಿಸುತ್ತಿದ್ದ ಭೈರವೈಕ್ಯ ಶ್ರೀಗಳು ರೈತರ ಅನುಕೂಲಕ್ಕಾಗಿ ಕೃಷಿ ವಿಜ್ಞಾನ ಕಾಲೇಜು ಸ್ಥಾಪಿಸಬೇಕೆಂದು ಕನಸು ಕಂಡಿದ್ದರು. ರಾಜ್ಯದಲ್ಲಿ ಈವರೆಗೂ ಖಾಸಗಿ ಸಂಸ್ಥೆಗಳಿಗೆ ಕೃಷಿ ವಿಜ್ಞಾನ ಕಾಲೇಜು ಮಂಜೂರು ಮಾಡಿರುವ ಉದಾಹರಣೆಯಿಲ್ಲ. ಆದರೂ ಭೈರವೈಕ್ಯ ಶ್ರೀಗಳ ಕನಸನ್ನು ನನಸು ಮಾಡುವ ಉದ್ದೇಶದಿಂದ ನಾನು ಕೃಷಿ ಸಚಿವನಾದ ನಂತರ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗೆ ಕೃಷಿ ವಿಜ್ಞಾನ ಕಾಲೇಜಿನ ಬೇಡಿಕೆ ಇಟ್ಟಾಗ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಹಳ ಖುಷಿಯಿಂದ ಒಪ್ಪಿಗೆ ನೀಡಿದರು. ಶ್ರೀಗಳ ಆಶಯದಂತೆ ಕೃಷಿ ವಿಜ್ಞಾನ ಕಾಲೇಜು ಮಂಜೂರಾಗಿ ಎರಡು ವರ್ಷದಿಂದ ಕಾರ್ಯಾರಂಭ ಮಾಡುತ್ತಿದೆ ಎಂದರು.

ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳು ಆರೋಗ್ಯ, ಶಿಕ್ಷಣ, ಆಧ್ಯಾತ್ಮಿಕ, ಸಾಮಾಜಿಕ ಮತ್ತು ಜಾನಪದ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕೃಷಿಕರ ಬದುಕನ್ನು ಹಸನುಗೊಳಿಸುವ ಕೆಲಸ ಮಾಡಿದ್ದಾರೆ. ಜಗತ್ತಿನೆಲ್ಲೆಡೆ ಪ್ರವಾಸ ಕೈಗೊಂಡು ಧಾರ್ಮಿಕ ವಿಚಾರಗಳನ್ನು ಜನರಿಗೆ ತಿಳಿಸುವ ಮೂಲಕ ಶ್ರೀಕ್ಷೇತ್ರದ ಮಹತ್ವವನ್ನು ಹೆಚ್ಚಿಸಿದ್ದಾರೆ. ನಾಥ ಪರಂಪರೆಯಲ್ಲಿ ಅತ್ಯಂತ ಶ್ರೇಷ್ಠವಾದ ಇಂತಹ ಸ್ವಾಮೀಜಿ ಅವರನ್ನು ಗುರುತಿಸಿರುವುದು ಬಹಳ ಹೆಮ್ಮೆಯ ಸಂಗತಿ ಎಂದರು.

ಈಗಿನ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥಶ್ರೀಗಳು ಭೈರವೈಕ್ಯಶ್ರೀಗಳನ್ನು ಸ್ಮರಿಸಿಕೊಂಡು ಶ್ರೀಮಠ ಮತ್ತು ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ. ಯಾವುದೇ ಒಂದು ಸರ್ಕಾರ ಮಾಡಲಾಗದಂತಹ ಕೆಲಸ ಕಾರ್ಯಗಳನ್ನೂ ಸಹ ಶ್ರೀಕ್ಷೇತ್ರ ಮಾಡುತ್ತಿರುವುದನ್ನು ನೋಡಿದರೆ ಪವಾಡ ಎನಿಸುತ್ತದೆ. ಆದಿಚುಂಚನಗಿರಿ ಮಠ ನಮ್ಮ ರಾಜ್ಯದಲ್ಲಿ ಕಾಮಧೇನು ಇದ್ದಂತೆ ಎಂದು ಬಣ್ಣಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜಮುಖಿ ಸೇವೆ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಿ: ಮೋಹನ್ ದಾಸ್
ಬಿಜಿಎಸ್ ಶಾಲೆಯಲ್ಲಿ ಶ್ರೀಬಾಲಗಂಗಾಧರನಾಥ ಸ್ವಾಮೀಜಿಗಳ ರಥೋತ್ಸವ