ಕನ್ನಡಪ್ರಭವಾರ್ತೆ ಪಾವಗಡ
ತುಂಗಭದ್ರಾ ಯೋಜನೆಯ ಕುಡಿಯುವ ನೀರು ಹಾಗೂ ಭದ್ರಾಮೇಲ್ದಂಡೆ ಯೋಜನೆಗಳು ತಾಲೂಕಿನಲ್ಲಿ ಪ್ರಗತಿಯಲ್ಲಿದ್ದು ಈ ಯೋಜನೆಗಳ ಅನುಷ್ಠಾನಕ್ಕೆ ಶ್ರಮಸಿದ ತಾಲೂಕಿನ ಹೋರಾಟಗಾರರಿಗೆ ಸನ್ಮಾನಿಸಲು ಇಲ್ಲಿನ ನೀರಾವರಿ ಹೋರಾಟ ವೇದಿಕೆಯಿಂದ ತೀರ್ಮಾನ ಕೈಗೊಳ್ಳಲಾಯಿತು.ತಾಲೂಕು ನೀರಾವರಿ ಹೋರಾಟ ವೇದಿಕೆ ವತಿಯಿಂದ ನಗರದ ಶ್ರೀ ಶನಿಮಹಾತ್ಮ ಸ್ವಾಮಿ ದೇವಸ್ಥಾನದ ಹಳೆ ಛತ್ರದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಕುಡಿಯುವ ನೀರು ಹಾಗೂ ನೀರಾವರಿ ಯೋಜನೆ ಮಂಜೂರಾತಿಗೆ ಶ್ರಮಿಸಿದ ಹಿರಿಯ ಹೋರಾಟಗಾರ ಶ್ರಮದ ಕುರಿತು ಗುಣಗಾನ ಮಾಡಿದರು. ತುಂಗಭದ್ರಾ ಹಾಗೂ ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆ ಅನುಷ್ಠಾನ ಹಾಗೂ ಫಲಪ್ರದವಾಗಲು ಕಾರಣೀಭೂತರಾದ ಹೋರಾಟಗಾರರಿಗೆ ಅಭಿನಂದಿಸಿ ಗೌರವಿಸಲು ತೀರ್ಮಾನಿಸಿದ್ದು ಏಪ್ರಿಲ್ ಮೊದಲು ಮತ್ತು ಎರಡನೇ ವಾರದಲ್ಲಿ ಸನ್ಮಾನ ಕಾರ್ಯಕ್ರಮಕ್ಕೆ ಸಿದ್ದತೆ ಕೈಗೊಳ್ಳುವ ತೀರ್ಮಾನ ಕೈಗೊಳ್ಳಲಾಯಿತು.
ಈ ಹಿನ್ನಲೆಯಲ್ಲಿ ಪಾವಗಡ ನಗರ ಸಿಂಗಾರ ಹಾಗೂ ಸುಸಜ್ಜಿತ ವೇದಿಕೆ ಮತ್ತು ನಾಲ್ಕು ಮಂದಿ ಸ್ವಾಮೀಜಿಗಳು, ಹಾಲಿ ಹಾಗೂ ಮಾಜಿ ಸಚಿವರು ಹಾಗೂ ಶಾಸಕರು ಇತರೆ ಸಂಘಸಂಸ್ಥೆಗಳ ಪ್ರತಿನಿಧಿಗಳು ವಿವಿಧ ಕ್ಷೇತ್ರದ ಗಣ್ಯರನ್ನು ಆಹ್ವಾನಿಸಿ ಸನ್ಮಾನ ಹಾಗೂ ಅಭಿನಂದನಾ ಸಮಾರಂಭ ಅಯೋಜಿಸಲು ಉದ್ದೇಶಿಸಿ ತೀರ್ಮಾನಿಸಲಾಯಿತು.ಈ ಸಂಬಂಧ ತಾಲೂಕು ಜೆಡಿಎಸ್ ಹಾಗೂ ವಿವಿಧ ರೈತಪರ ಸಂಘಟನೆಯ ಮುಖಂಡರು ಭಾಗವಹಿಸಿದ್ದು ಅನೇಕ ವಿಚಾರ ಚರ್ಚಿಸುವ ಮೂಲಕ ನಿರ್ಣಯ ಅಂಗೀಕರಿಸಿದರು.
ಇದೇ ವೇಳೆ ತಾಲೂಕು ಜೆಡಿಎಸ್ ಅಧ್ಯಕ್ಷ ಎನ್.ಎ.ಈರಣ್ಣ, ಕಾರ್ಯಾಧ್ಯಕ್ಷ ಸೊಗಡು ವೆಂಕಟೇಶ್, ಹಿರಿಯ ಮುಖಂಡರಾದ ಕೋಟಗುಡ್ಡ ಅಂಜಪ್ಪ, ರೈತ ಸಂಘದ ರಾಜ್ಯಾಧ್ಯಕ್ಷ ವಿ.ನಾಗಭೂಷಣರೆಡ್ಡಿ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪಾವಗಡದ ಪೂಜಾರಪ್ಪ, ರೈತ ಸಂಘದ ತಾಲೂಕು ಅಧ್ಯಕ್ಷ ನರಸಿಂಹರೆಡ್ಡಿ ಹಾಗೂ ನೀರಾವರಿ ಹೋರಾಟ ಸಮಿತಿಯ ಪದಾಧಿಕಾರಿಗಳಿದ್ದರು.