₹ ೧೫ ಲಕ್ಷ ಬೆಲೆಬಾಳುವ ಬಸವೇಶ್ವರ ಕಂಚಿನ ಮೂರ್ತಿ ಪ್ರತಿಷ್ಠಾಪನೆಗೆ ತೀರ್ಮಾನ

KannadaprabhaNewsNetwork | Updated : Jul 01 2025, 12:49 AM IST

ಶಿರಹಟ್ಟಿ ಪಟ್ಟಣದ ಹೃದಯ ಭಾಗದಲ್ಲಿರುವ ಬೃಹತ್ತಾದ ಬಸವೇಶ್ವರ ಮೂರ್ತಿ ಶಿಥಿಲಗೊಂಡಿದ್ದರಿಂದ ನೂತನವಾಗಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪಿಸಲು ಸರ್ವ ಸಮಾಜದ ವತಿಯಿಂದ ಕರೆಯಲಾಗಿದ್ದ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಯಿತು.

ಶಿರಹಟ್ಟಿ: ಪಟ್ಟಣದ ಹೃದಯ ಭಾಗದಲ್ಲಿರುವ ಬೃಹತ್ತಾದ ಬಸವೇಶ್ವರ ಮೂರ್ತಿ ಶಿಥಿಲಗೊಂಡಿದ್ದರಿಂದ ನೂತನವಾಗಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪಿಸಲು ಸರ್ವ ಸಮಾಜದ ವತಿಯಿಂದ ಕರೆಯಲಾಗಿದ್ದ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಯಿತು. ಪಟ್ಟಣದ ಶಿಕ್ಷಕರ ಸಭಾಂಗಣದಲ್ಲಿ ಕರೆಯಲಾಗಿದ್ದ ಸ್ಥಳೀಯ ಬಸವ ಸಮಿತಿ ಸಭೆಯಲ್ಲಿ ಈ ಕುರಿತು ನಿರ್ಣಯಿಸಲಾಯಿತು. ಈ ವೇಳೆ ಸರ್ವ ಸಮಾಜ ಬಾಂಧವರ ಚರ್ಚೆ ಬಳಿಕ ಬಸವ ಸಮಿತಿ ಅಧ್ಯಕ್ಷ ಬಸವರಾಜ ತುಳಿ ಮಾತನಾಡಿ, ಕಳೆದ ಐದು ದಶಕಗಳ ಹಿಂದೆ ೧೯೭೦ರಲ್ಲಿ ದಿ. ಜೋಗೆಪ್ಪ ಹಲಸೂರ ಅವರು ಬಸವೇಶ್ವರ ಮೂರ್ತಿಯನ್ನು ಕೊಡುಗೆಯಾಗಿ ನೀಡಿದ್ದರು. ಮಾರುಕಟ್ಟಯ ಹೃದಯ ಭಾಗದಲ್ಲಿ ಬಸವೇಶ್ವರ ವೃತ್ತ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು ಎಂದರು. ಪ್ರಸ್ತುತ ಸಂದರ್ಭದಲ್ಲಿ ಬಸವೇಶ್ವರ ಮೂರ್ತಿ ಶಿಥಿಲಗೊಂಡಿರುವದರಿಂದ ೧೫ ಲಕ್ಷ ಬೆಲೆ ಬಾಳುವ ಹೊಸ ಕಂಚಿನ ಮೂರ್ತಿಯನ್ನು ಅವರ ಮೊಮ್ಮಕ್ಕಳಾದ ಬಸವರಾಜ ಹಾಗೂ ಪ್ರಭುಲಿಂಗ ಹಲಸೂರ ಕುಟುಂಬದ ಸದಸ್ಯರು ಕೊಡಿಸುವುದಾಗಿ ವಾಗ್ದಾನ ಮಾಡಿರುವುದು ಸಂತಸಕರ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು. ಪಟ್ಟಣದ ಎಲ್ಲ ಸಾರ್ವಜನಿಕರ ಪರವಾಗಿ ಹಾಗೂ ಬಸವ ವೇದಿಕೆ ಅಡಿ ಅವರಿಗೆ ಧನ್ಯವಾದಗಳನ್ನು ತಿಳಿಸುವುದರ ಜೊತೆಗೆ ಬಸವೇಶ್ವರ ರಚನಾತ್ಮಕ ಕಾರ್ಯಚಟುಚಟಿಕೆಗಳು ಹೀಗೆ ನಿರಂತರವಾಗಿ ಸಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಬಸವ ಸಮಿತಿ ಕಾರ್ಯದರ್ಶಿ ಸಂತೋಷ ಕುರಿ ಮಾತನಾಡಿ, ಸದ್ಯದ ಸಂದರ್ಭದಲ್ಲಿ ಶರಣರ ಅನುಭಾವ ಹಾಗೂ ಅವರ ಹಿತವಚನಗಳು ಎಲ್ಲರಿಗೂ ಅತ್ಯವಶ್ಯಕವಾಗಿವೆ. ಇತ್ತೀಚೆಗೆ ವಾತಾವರಣ ಕಲುಷಿತಗೊಳ್ಳುತ್ತಿದೆ. ಅದನ್ನು ಸ್ವಚ್ಛಗೊಳಿಸಲು ಶರಣರ ಸಂತರ ಆದರ್ಶಗಳನ್ನು ಪಾಲಿಸುವ, ಆಲಿಸುವ ಅಗತ್ಯವಿದೆ ಎಂದು ಹೇಳಿದರು. ಅಸಮಾನತೆ, ಮೌಢ್ಯತೆ, ಶೋಷಣೆಯಿಂದ ನಲುಗಿದ್ದ ಸಮಾಜಕ್ಕೆ ಬೆಳಕಾಗಿ ಬಂದವರು ಬಸವೇಶ್ವರರು. ೧೨ನೇ ಶತಮಾನದಲ್ಲಿ ಜಾತಿ, ವರ್ಣ, ವರ್ಗ ರಹಿತ ಹೊಸ ಸಮಾಜ ಕಟ್ಟುವ ಮೂಲಕ ಅಸಮಾನತೆ ಅಳಿಸಲು ಶ್ರಮಿಸಿದ್ದರು. ಭಾವೈಕ್ಯತೆಗೆ ಹೆಸರಾದ ಶಿರಹಟ್ಟಿ ಪಟ್ಟಣದಲ್ಲಿ ಬಸವೇಶ್ವರರ ಕಂಚಿನ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಿರುವುದು ಎಲ್ಲರಲ್ಲೂ ಸಂತಸ ತಂದಿದೆ ಎಂದರು. ಪಟ್ಟಣದ ಎಲ್ಲ ಬಸವಾಭಿಮಾನಿಗಳಿಗೆ ಇದು ಸಂಭ್ರಮದ, ಸಂತಸದ ಸುದ್ದಿಯಾಗಿದೆ. ಮಹಾನ್ ದಾರ್ಶನಿಕ ಬಸವೇಶ್ವರ ಮೂರ್ತಿ ಆದಷ್ಟು ಬೇಗನೆ ಪ್ರತಿಷ್ಠಾಪನೆಯಾಗಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಎಚ್.ಎಂ. ದೇವಗಿರಿ ಅವರ ೮೫ನೇ ವರ್ಷದ ಜನ್ಮದಿನಾಚರಣೆ ನಡೆಯಿತು. ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಕೊಡುಗೆ ನೀಡಿದ ಅವರ ಸೇವೆಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಚಂದ್ರಕಾಂತ ನೂರಶೆಟ್ಟರ, ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಎಚ್.ಡಿ. ಮಾಗಡಿ, ಬಿಜೆಪಿ ಯುವ ಮುಖಂಡ ನಾಗರಾಜ ಲಕ್ಕುಂಡಿ, ಶರಣ ಸಾಹಿತ್ಯ ಪರಿಷತ್ತ ಜಿಲ್ಲಾ ಅಧ್ಯಕ್ಷ ಕೆ.ಎ. ಬಳಿಗೇರ, ಸುರೇಶ ಅಕ್ಕಿ, ಅಕ್ಬರಸಾಬ ಯಾದಗಿರಿ, ರವಿ ಗುಡಿಮನಿ, ನಿವೃತ್ತ ಶಿಕ್ಷಕ ಎಂ.ಕೆ. ಲಮಾಣಿ, ಸುರೇಶ ಹವಳದ, ಬಣಜಿಗ ಸಮಾಜದ ಅಧ್ಯಕ್ಷ ಮುತ್ತಣ್ಣ ಮಜ್ಜಗಿ, ಪುನೀತ ಓಲೇಕಾರ, ಬಸವರಾಜ ಬೋರಶೆಟ್ಟರ, ಮುತ್ತುರಾಜ ಭಾವಿಮನಿ, ಶಿವು ಪಟ್ಟಣಶೆಟ್ಟಿ, ಅಶೋಕ ವರವಿ, ಶಿವಾನಂದ ಮುಳಗುಂದ, ಕೆ.ಎಫ್. ರಮಜಾನವರ, ಶಶಿಧರ ದೇಗಾವಿ, ಶಶಿಧರ ಪೂಜಾರ ಮತ್ತಿತರರು ಉಪಸ್ಥಿತರಿದ್ದರು.