ಕನ್ನಡಪ್ರಭ ವಾರ್ತೆ ಮಳವಳ್ಳಿ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೋಷ್ಠಿಗಳಲ್ಲಿನ ಚರ್ಚೆ ಮೌಖಿಕ ಹಾಗೂ ಮೌಲ್ಯಾಧಾರಿತವಾಗಿರಬೇಕು ಎಂಬುವುದರ ಬಗ್ಗೆ ತೀರ್ಮಾನ ಮಾಡಲಾಗಿದೆ ಎಂದು ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ ತಿಳಿಸಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಂಡ್ಯದಲ್ಲಿ ಡಿಸೆಂಬರ್ ನಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಸಮ್ಮೇಳನದಲ್ಲಿ ಜಿಲ್ಲೆಯಲ್ಲಿ ಲಿಂಗ ತಾರತಮ್ಯ, ಹೆಣ್ಣು ಭ್ರೂಣ ಹತ್ಯೆ, ಬಾಲ್ಯವಿವಾಹ ಹೆಚ್ಚಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಸಮಸ್ಯೆಗಳಿಗೆ ಬೆಳಕು ಚೆಲ್ಲುವ ಮಹಿಳೆಯರ ವಿಷಯವಾಗಿ ಗೋಷ್ಠಿಗಳನ್ನು ಆಯೋಜಿಸಬೇಕೆಂಬ ಬೇಡಿಕೆ ಬಂದಿದೆ. ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು.
ಕರ್ನಾಟಕದ ಹೆಸರು ನಾಮಕರಣಗೊಂಡು 50 ವರ್ಷ ತುಂಬಿರುವ ಸುವರ್ಣ ಸಂಭ್ರಮದಲ್ಲಿ ಸಮ್ಮೇಳನ ಮಂಡ್ಯದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ. ನುಡಿ ಹಬ್ಬದ ಹಿನ್ನೆಲೆಯಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಮತ್ತು ತಮ್ಮ ವಾಹನಗಳಲ್ಲಿ ಮೂರು ದಿನಗಳ ಕಾಲ ಕನ್ನಡ ಬಾವುಟ ಹಾರಿಸುವ ಜೊತೆಗೆ ಸಮ್ಮೇಳನದಲ್ಲಿ ಭಾಗವಹಿಸಬೇಕೆಂದು ಹೇಳಿದರು.ಕಲೆ, ಸಾಹಿತ್ಯವನ್ನು ಒಳಗೊಂಡಿರುವ ಮಳವಳ್ಳಿ ತಾಲೂಕು ತನ್ನದೇ ಆದ ಇತಿಹಾಸ ಹೊಂದಿದೆ. ಈ ನಾಡಿಗೆ ವಿದ್ಯುತ್ ಕೊಟ್ಟಿದೆ. ಡಾ.ರಾಜ್‌ಕುಮಾರ್ ಅವರನ್ನು ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದವರು ಮಳವಳ್ಳಿ ಸಮೀಪದ ಮಾರೇಹಳ್ಳಿಯ ಎಚ್.ಎಲ್.ಎನ್ ಸಿಂಹ ಅವರು. ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ ಸಾಧು ಸಂತರು ನಡೆದಾಡಿದ ಪುಣ್ಯ ಭೂಮಿ. ಹಿರಿಯ ಕವಿ ಷಡಕ್ಷರ ದೇವ ಅವರು ಇಲ್ಲಿಯವರೇ ಎನ್ನುವುದು ವಿಶೇಷ ಎಂದರು.
ಕಸಾಪ ಜಿಲ್ಲಾ ಸಂಚಾಲಕಿ ಮೀರಾ ಶಿವಲಿಂಗಯ್ಯ ಮಾತನಾಡಿ, ಮೂರು ದಶಕಗಳ ನಂತರ ಮಂಡ್ಯದಲ್ಲಿ ಸಮ್ಮೇಳನ ನಡೆಯುತ್ತಿರುವುದು ಮಂಡ್ಯ ಜಿಲ್ಲೆಗೆ ಕೀರ್ತಿ ತಂದಿದೆ. ಕನ್ನಡ ಭಾಷೆ ಬೆಳೆವಣಿಗೆಗೆ ಜಿಲ್ಲೆಯ ಕೊಡುಗೆ ಏನು ಎನ್ನುವುದನ್ನು ತೋರಿಸುವ ಸಮಯ ಇದಾಗಿದೆ. ಸಮ್ಮೇಳನದ ಯಶ್ವಸ್ಸಿಗೆ ಬೇಕಾದ ಅಗತ್ಯ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದರು.ತಹಸೀಲ್ದಾರ್ ಬಿ.ವಿ.ಕುಮಾರ್ ಮಾತನಾಡಿ, ಮಂಡ್ಯದಲ್ಲಿ ನಡೆಯುವ ಸಮ್ಮೇಳನದಲ್ಲಿ ತಾಲೂಕಿನಿಂದ ಹೆಚ್ಚಿನ ಮಂದಿ ಭಾಗಿಯಾಗುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಬಯಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಡಾ.ರಾಜ್ ಕುಮಾರ್ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ಡಾ.ರಾಜ್ ಕುಮಾರ್ ಅವರ ಬೇಡರಕಣ್ಣಪ್ಪ ಚಿತ್ರ ನಿರ್ಮಿಸಿದ್ದ ನಮ್ಮ ತಾಲೂಕಿನವರೇ ಆದ ಎಸ್.ಎಲ್.ಎನ್.ಸಿಂಹ ಅವರ ಹೆಸರನ್ನು ಸಮ್ಮೇಳನದ ಗೋಷ್ಠಿಯಲ್ಲಿ ಹಾಕಬೇಕು ಎಂದರು.ಕೆಆರ್‌ಎಸ್ ಜಲಾಶಯ ನಿರ್ಮಾತೃ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಸಮ್ಮೇಳನದಲ್ಲಿ ಇಡಬೇಕು, ಶಾಸಕರಾಗಿದ್ದ ಕನ್ನಡ ಚಳುವಳಿಗಾರ ದಾಸನದೊಡ್ಡಿ ನಾರಾಯಣ್ ಕುಮಾರ್ ಅವರ ಹೆಸರನ್ನು ಉಳಿಸುವ ನಿಟ್ಟಿನಲ್ಲಿ ಸಮ್ಮೇಳನದಲ್ಲಿ ಬಳಸಬೇಕೆಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ.ಉಮಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ, ತಾಪಂ ಯೋಜನಾಧಿಕಾರಿ ದೀಪು, ಕಸಾಪ ತಾಲೂಕು ಘಟಕದ ಅಧ್ಯಕ್ಷ ಚೇತನ್ ಕುಮಾರ್, ರಾಜ್ಯ ಗೌರವ ಕಾರ್ಯದರ್ಶಿ ಪದ್ಮನಿ ನಾಗರಾಜು, ಜಿಲ್ಲಾ ಗೌರವ ಕಾರ್ಯದರ್ಶಿ ಹುಸ್ಕೂರು ಕೃಷ್ಣೇಗೌಡ, ಜಿಲ್ಲಾ ಉಪಾಧ್ಯಕ್ಷ ದೇವರಾಜು ಕೊದೇನಕೊಪ್ಪಲು, ಸಮ್ಮೇಳನದ ಜಿಲ್ಲಾ ಮಾಧ್ಯಮ ಸಂಯೋಜಕ ಎಲ್.ಕೃಷ್ಣ, ಪ್ರಮುಖರಾದ ಪಟೇಲ್ ಪಾಂಡು, ಶಿವಮಾದೇಗೌಡ, ಅಪ್ಪಾಜಪ್ಪ, ಹರ್ಷ ಪಣ್ಣೇದೊಡ್ಡಿ, ಶಿವಮಾದೇಗೌಡ, ಮಲ್ಲಿಕಾರ್ಜುನಯ್ಯ, ಎನ್.ಎಲ್.ಭರತ್ ರಾಜ್, ಡಿ.ರಾಮು, ಬಸಪ್ಪ ನೆಲಮಾಕನಹಳ್ಳಿ, ಮ.ಸಿ.ನಾರಾಯಣ, ಮರಿಸ್ವಾಮಿ, ಪುಟ್ಟಸ್ವಾಮಿ, ಸಿದ್ದರಾಜು, ಸುರೇಶ್, ಭಕ್ತವತ್ಸಲ, ಕೃಷ್ಣ, ಚಿಕ್ಕಮರಿಗೌಡ, ಎಂ.ಎಚ್.ಕೆಂಪಯ್ಯ ಸೇರಿದಂತೆ ಇತರರು ಇದ್ದರು.