ಹುಬ್ಬಳ್ಳಿ:
ಜನರಿಗೆ ಹೊರೆಯಾಗುತ್ತಿದ್ದ ಘನತ್ಯಾಜ್ಯ ನಿರ್ವಹಣೆ ಸೇವಾ ಶುಲ್ಕ ಹಾಗೂ ಒಳಚರಂಡಿ ಸೇವಾ ಮತ್ತು ಬಳಕೆ ಶುಲ್ಕವನ್ನು ಶಾಶ್ವತವಾಗಿ ರದ್ದುಪಡಿಸುವಂತೆ ಪಾಲಿಕೆ ಸಾಮಾನ್ಯಸಭೆಯಲ್ಲಿ ಠರಾವು ಪಾಸ್ ಮಾಡಿದ್ದು, ರಾಜ್ಯ ಸರ್ಕಾರಕ್ಕೆ ಈ ಸಂಬಂಧ ಪ್ರಸ್ತಾವ ಕಳುಹಿಸಲು ನಿರ್ಧರಿಸಲಾಯಿತು. ಜತೆಗೆ ಕಸ ವಿಲೇವಾರಿಯ ಟಿಪ್ಪರ್ ಓಡಿಸುವ ಚಾಲಕರ ಕ್ರಿಮಿನಲ್ ಬ್ಯಾಕ್‌ಗ್ರೌಂಡ್ ಚೆಕ್ ಮಾಡಲು ನಿರ್ಣಯ ಕೈಗೊಳ್ಳಲಾಯಿತು.ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಸ್ತಿಕರ ಹೆಚ್ಚಿಸಿತ್ತು. ಎಸ್‌ಆರ್ ವ್ಯಾಲ್ಯೂನಂತೆ ಹೆಚ್ಚಿಸಿರುವ ಆಸ್ತಿಕರ ಸಿಕ್ಕಾಪಟ್ಟೆ ಹೆಚ್ಚಳವಾಗಿತ್ತು. ಇದರಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕೆಸಿಸಿಐ ಕೂಡ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಕಾರಣದಿಂದಾಗಿ ಆಸ್ತಿಕರದೊಂದಿಗೆ ಇದೇ ವರ್ಷದಿಂದ ಸೇರಿಸಲಾಗಿದ್ದ ಯುಜಿಡಿ ಯೂಜರ್ಸ್ ಚಾರ್ಜ್ ಹಾಗೂ ಘನತ್ಯಾಜ್ಯ ಬಳಕೆದಾರರ ಶುಲ್ಕವನ್ನು ರದ್ದುಪಡಿಸಿತ್ತು. ಆದರೆ, ಇದು ತಾತ್ಕಾಲಿಕ ಮತ್ತು ಮುಂದಿನ ವರ್ಷ ಮತ್ತೆ ವಿಧಿಸಬೇಕಾಗುತ್ತದೆ. ಆದಕಾರಣ ಹು-ಧಾ ಮಹಾನಗರ ಶೇ. 60ರಷ್ಟು ಮಾತ್ರ ಒಳಚರಂಡಿ ವ್ಯವಸ್ಥೆ ಹೊಂದಿದೆ. ಹೀಗಿರುವಾಗ ಒಳಚರಂಡಿ ಸೇವಾ ಮತ್ತು ಬಳಕೆ ಶುಲ್ಕ ಹೇರುವುದು ಸಮಂಜಸವಲ್ಲ. ಶೇ.100ರಷ್ಟು ಒಳಚರಂಡಿ ವ್ಯವಸ್ಥೆಯಾದ ಬಳಿಕ ಮಾತ್ರ ಶುಲ್ಕ ಆಕರಣೆ ಮಾಡಲಾಗುವುದು. ಅಲ್ಲಿಯ ವರೆಗೆ ಯಾವುದೇ ಸೇವಾ, ಬಳಕೆ ಶುಲ್ಕ ಪಡೆಯದಂತೆ ಸರ್ಕಾರಕ್ಕೆ ಠರಾವು ಕಳುಹಿಸಲಾಯಿತು.
ಸದಸ್ಯರಾದ ವೀರಣ್ಣ ಸವಡಿ, ತಿಪ್ಪಣ್ಣ ಮಜ್ಜಗಿ ಈ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ವಿರೋಧ ಪಕ್ಷದ ಸದಸ್ಯರಾದ ಇಮ್ರಾನ್ ಎಲಿಗಾರ, ರಾಜಶೇಖರ ಕಮತಿ ಸೇರಿದಂತೆ ಹಲವರು ಧ್ವನಿಗೂಡಿಸಿದರು. ಎಐಎಂಐಎಂನ ನಜೀರ್ ಹೊನ್ಯಾಳ ಅವರು, ಸೆಸ್ ಕಡಿತ ಮಾಡುವಾಗ ಎಲ್ಲ ಪಕ್ಷಗಳ ಸದಸ್ಯರನ್ನು ಕರೆಯಬೇಕಿತ್ತು. ನಮ್ಮ ಪಕ್ಷವನ್ನೇಕೆ ಕರೆಯಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಂದೆ ಏನೇ ಇದ್ದರೂ ನಿಮ್ಮ ಪಕ್ಷವನ್ನು ಆಹ್ವಾನಿಸಲಾಗುವುದು ಎಂದು ಮೇಯರ್ ರಾಮಪ್ಪ ಬಡಿಗೇರ್ ಹೇಳುವ ಮೂಲಕ ಸಮಾಧಾನ ಪಡಿಸಿದರು.ಕೈಬಿಟ್ಟಿರುವ ಅಧಿಕಾರಿ ಸಭೆಗೆ!:
ಈ ನಡುವೆ ಪಶುವೈದ್ಯಾಧಿಕಾರಿ ಆರ್.ಜೆ. ಕುಲಕರ್ಣಿ ಎನ್ನುವವರನ್ನು 3 ತಿಂಗಳ ಹಿಂದೆ ನಡೆದ ಸಭೆಯಲ್ಲಿ ಕರ್ತವ್ಯದಿಂದ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಸೂಚಿಸಲಾಗಿತ್ತು. ಆದರೆ, ಅದೇ ಅಧಿಕಾರಿ ಮತ್ತೆ ಸಭೆಗೆ ಆಗಮಿಸಿ ಅದೇ ಹುದ್ದೆಯಲ್ಲೇ ಮುಂದುವರಿದಿದ್ದರು. ಅದಕ್ಕೆ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.ಸದಸ್ಯ ಶಿವಕುಮಾರ ಮೆಣಸಿನಕಾಯಿ, ಬಿಡಾಡಿ ದನಗಳ ಬಗ್ಗೆ ವಿಷಯ ಪ್ರಸ್ತಾಪಿಸಿದರು. ಪೂರ್ವ ಕ್ಷೇತ್ರದ ವಾರ್ಡ್‌ಗಳಲ್ಲಿ ಮಾರುಕಟ್ಟೆಗಳು ಬರುತ್ತವೆ. ಅಲ್ಲಿ ಬಿಡಾಡಿ ದನಗಳು ಸಿಕ್ಕಾಪಟ್ಟೆಯಾಗಿವೆ. ರಸ್ತೆಗೆ ಬಾರದಂತೆ ಏನಾದರೂ ವ್ಯವಸ್ಥೆ ಮಾಡಬೇಕು. ಪಂಜರಪೋಳದಲ್ಲಾದರೂ ಬಿಡುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಆಗ ಪಶುವೈದ್ಯಾಧಿಕಾರಿ ಕುಲಕರ್ಣಿ ಅವರು, ಉತ್ತರ ನೀಡಲು ಮುಂದಾದರು. ಆದಕ್ಕೆ ಸದಸ್ಯ ತಿಪ್ಪಣ್ಣ ಮಜ್ಜಗಿ ಆಕ್ಷೇಪಿಸಿದರು. ಇದೇ ಅಧಿಕಾರಿಗೆ ಆ ಇಲಾಖೆ ನಿಭಾಯಿಸಲು ಆಗುತ್ತಿಲ್ಲ ಎಂಬ ಕಾರಣದಿಂದಲೇ ಅವರನ್ನು ಆ ಹುದ್ದೆಯಿಂದ ಬಿಡುಗಡೆಗೊಳಿಸಿ ಅವರ ಮಾತೃ ಇಲಾಖೆಗೆ ಕಳುಹಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಅದೇ ಅಧಿಕಾರಿ ಮತ್ತೆ ಸಭೆಗೆ ಬರುತ್ತಾರೆ. ಉತ್ತರ ಕೊಡುತ್ತಾರೆ ಎಂದರೆ ಹೇಗೆ? ಅವರನ್ನು ಇನ್ನು ಅವರ ಹುದ್ದೆಯಿಂದ ಮುಕ್ತಿಗೊಳಿಸಿಲ್ಲವೇ? ಎಂದು ಪ್ರಶ್ನಿಸಿದರು.ಅದಕ್ಕೆ ಆಯುಕ್ತ ರುದ್ರೇಶ ಘಾಳಿ ಮಾತನಾಡಿ, ಸಿಬ್ಬಂದಿ ಇಲ್ಲದ ಕಾರಣ ಅವರನ್ನು ಆ ಹುದ್ದೆಯಿಂದ ಕೈಬಿಟ್ಟಿಲ್ಲ ಎಂದು ಸಬೂಬು ಹೇಳಲು ಮುಂದಾದರು. ಆದರೆ, ಅದಕ್ಕೆ ಕೆಂಡಮಂಡಲವಾದ ತಿಪ್ಪಣ್ಣ ಮಜ್ಜಗಿ, ಸಭೆಗೆ ಅಗೌರವ ತೋರಿದಂತೆ ಆಗುವುದಿಲ್ಲವಾ? ಕೂಡಲೇ ಈ ಸಂಬಂಧ ಆಯುಕ್ತರು ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು. ಆಗ ಮೇಯರ್ ರಾಮಪ್ಪ ಬಡಿಗೇರ ಮಧ್ಯಪ್ರವೇಶಿಸಿ, ಈ ಕ್ಷಣವೇ ಅವರನ್ನು ಕೈಬಿಡಲಾಗುವುದು ಎಂದು ಭರವಸೆ ನೀಡಿದರು. ಜತೆಗೆ ಸಭೆಯಿಂದ ಹೊರನಡೆಯುವಂತೆ ಸೂಚಿಸಿದರು. ಇದರಿಂದ ತೀವ್ರ ಮುಜುಗರಕ್ಕೊಳಗಾದ ಅಧಿಕಾರಿ ಕುಲಕರ್ಣಿ ಅಲ್ಲಿಂದ ತೆರಳಿದರು.
ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ ವ್ಯವಸ್ಥೆ ಹಾಗೂ ಉಣಕಲ್ಲ ಭಾಗದಲ್ಲಿ ರಸ್ತೆ ಅಗಲೀಕರಣಕ್ಕಾಗಿ ಭೂಮಿ ವಶಪಡಿಸಿಕೊಂಡವರಿಗೆ ಪರಿಹಾರ ನೀಡದ ವಿಷಯಗಳು ಶೂನ್ಯ ವೇಳೆಯಲ್ಲಿ ಚರ್ಚೆಗೆ ಬಂದವು. ಎಲ್ಲವನ್ನೂ ಆದ್ಯತೆಯ ಮೇರೆಗೆ ಪರಿಹರಿಸುವುದಾಗಿ ಮೇಯರ್ ರಾಮಪ್ಪ ಬಡಿಗೇರ ಭರವಸೆ ನೀಡಿದರು. ವಲಯ ಆಯುಕ್ತರು, ಅಧಿಕಾರಿಗಳು, ಎಲ್ ಆ್ಯಂಡ್ ಟಿ ಅಧಿಕಾರಿಗಳು ಹಾಜರಿದ್ದರು.ಚಾಲಕರ ಕ್ರಿಮಿನಲ್ ಬ್ಯಾಕ್‌ಗ್ರೌಂಡ್ !
ಇಲ್ಲಿನ ಸೋನಿಯಾಗಾಂಧಿ ನಗರದಲ್ಲಿ ಕಸವಿಲೇವಾರಿ ಮಾಡುವ ಆಟೋ ಟಿಪ್ಪರ್ ಹರಿದು 5 ವರ್ಷದ ಬಾಲಕಿ ಮೃತಪಟ್ಟಿದ್ದರ ವಿಷಯ ಸಭೆಯಲ್ಲಿ ಕಾವೇರಿದ ಚರ್ಚೆಗೆ ನಾಂದಿ ಹಾಡಿತು.ಸದಸ್ಯ ಸೆಂಥಿಲಕುಮಾರ ಈ ವಿಷಯವನ್ನು ಗಮನ ಸೆಳೆದರು. ಆಟೋ ಟಿಪ್ಪರ್ ಚಾಲಕರು ಹೇಗೆ ಇರುತ್ತಾರೋ ಗೊತ್ತಿಲ್ಲ. ಬೆಳಗ್ಗೆಯೇ ಮದ್ಯಸೇವನೆ ಮಾಡಿರುತ್ತಾರೋ? ಗಾಂಜಾ ಹೊಡೆದಿರುತ್ತಾರೋ ಯಾರಿಗೂ ಗೊತ್ತಾಗಲ್ಲ. ಆದಕಾರಣ ಆಟೋ ಟಿಪ್ಪರ್ ಚಾಲಕರ ಬಗ್ಗೆ ನಿಗಾ ವಹಿಸಬೇಕು. ಮೃತ ಬಾಲಕಿ ಹಮೀದಾಬಾನು ಕಬಾಡೆ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪಕ್ಷಾತೀತವಾಗಿ ಎಲ್ಲ ಸದಸ್ಯರು ಧ್ವನಿ ಗೂಡಿಸಿದರು. ಕೊನೆಗೆ ಮೇಯರ್ ರಾಮಪ್ಪ ಬಡಿಗೇರ್, ಮೃತ ಬಾಲಕಿ ಕುಟುಂಬಕ್ಕೆ ಪಾಲಿಕೆಯಿಂದ ₹5 ಲಕ್ಷ ಪರಿಹಾರ, ಪೊಲೀಸರು ಮದ್ಯ ಸೇವನೆ ಮಾಡಿದ ವಾಹನ ಸವಾರರನ್ನು ತಪಾಸಣೆ ಮಾಡುವಂತೆ ಪ್ರತಿನಿತ್ಯ ಬೆಳಗ್ಗೆ ಆರೋಗ್ಯ ನಿರೀಕ್ಷಕರು ಟಿಪ್ಪರ್ ಚಾಲಕರನ್ನು ತಪಾಸಣೆ ಮಾಡಬೇಕು. ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿ ಆದೇಶಿಸಿದರು. ಜತೆಗೆ ಆಟೋಟಿಪ್ಪರ್ ಚಾಲಕರ ಕ್ರಿಮಿನಲ್ ಬ್ಯಾಕ್‌ಗ್ರೌಂಡ್‌ನ್ನು ಚೆಕ್ ಮಾಡಬೇಕು ಎಂದು ಸೂಚಿಸಿದರು.
ಉಗ್ರರ ದಾಳಿಗೆ ಖಂಡನೆ:ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಉಗ್ರರ ದಾಳಿಯನ್ನು ಸಭೆಯಲ್ಲಿ ತೀವ್ರವಾಗಿ ಖಂಡಿಸಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು. ಬಳಿಕ ಅಲ್ಲಿ ಮೃತಪಟ್ಟ 26 ಜನರ ಆತ್ಮಕ್ಕೆ ಹಾಗೂ ಇತ್ತೀಚಿಗೆ ನಿಧನರಾದ ವಿಜ್ಞಾನಿ ಕಸ್ತೂರಿ ರಂಗನ್ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು. ಈ ಮೂಲಕ ಗೌರವ ಸಲ್ಲಿಸಲಾಯಿತು.