ಪ್ರತಿ ಗ್ರಾಪಂಗೊಂದು ಪಿಎಸಿಎಸ್ ತೆರೆಯಲು ನಿರ್ಧಾರ

KannadaprabhaNewsNetwork | Published : Mar 25, 2025 12:46 AM

ಸಾರಾಂಶ

ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ತೆರೆಯಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಕನ್ನಡಪ್ರಭವಾರ್ತೆ ತುರುವೇಕೆರೆ

ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ತೆರೆಯಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು. ತಾಲೂಕಿನ ಕೊಡಗೀಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಪಟ್ಟಣದ ತಿಪಟೂರು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಸಹಕಾರಿ ಬ್ಯಾಂಕ್ ಗಳು ರೈತಾಪಿಗಳು ಮತ್ತು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಿವೆ. ರೈತಾಪಿಗಳಿಗೆ ತಮ್ಮ ಸಹಕಾರ ಸಂಘಗಳು ಸಾಕಷ್ಟು ಸಹಕಾರ ಕೊಟ್ಟರೂ ಸಹ ರೈತರು ತಮ್ಮಲ್ಲಿರುವ ಹೆಚ್ಚುವರಿ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಠೇವಣಿ ಇಡುವುದು ಸಾಮಾನ್ಯವಾಗಿದೆ. ಇದರಿಂದ ಸಹಕಾರ ಸಂಘಗಳು ಸುಗಮವಾಗಿ ನಡೆಯಲು ಸಾಧ್ಯವಾಗದು ಎಂದರು. ತಮ್ಮ ಸಹಕಾರ ಸಂಘಗಳಲ್ಲಿ ಸಣ್ಣ ರೈತರು, ಸಣ್ಣಪುಟ್ಟ ವ್ಯಾಪಾರಸ್ಥರಿಗೂ ಸಾಲ ಸೌಲಭ್ಯ ನೀಡಲಾಗುತ್ತಿದೆ. ಇದರಿಂದ ಆರ್ಥಿಕವಾಗಿ ಸಧೃಢರಾಗಲು ಸಾಧ್ಯವಾಗಿದೆ. ಜಿಲ್ಲಾ ಡಿಸಿಸಿ ಬ್ಯಾಂಕ್ ವತಿಯಿಂದ ತಾಲೂಕಿಗೆ ಸುಮಾರು 80 ಕೋಟಿಯಷ್ಟು ಸಾಲ ಸೌಲಭ್ಯ ನೀಡಲಾಗಿದೆ. ಸರ್ಕಾರ ನೀಡಿದ ಸಾಲ ಮನ್ನಾ, ಬಡ್ಡಿ ಮನ್ನಾ ಯೋಜನೆಯಲ್ಲಿ ತಾಲೂಕಿನ ಸಾವಿರಾರು ಮಂದಿ ಇದರ ಪ್ರಯೋಜನವನ್ನು ಪಡೆದುಕೊಂಡರು ಎಂದು ಕೆ.ಎನ್. ರಾಜಣ್ಣ ಹೇಳಿದರು. ಎಲ್ಲಾ ಸಹಕಾರ ಸಂಘಗಳು ಜಾತ್ಯತೀತ, ಪಕ್ಷಾತೀತವಾಗಿರಬೇಕು. ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕು. ರಾಜಕಾರಣಕ್ಕೆ ಅವಕಾಶ ನೀಡಬಾರದು. ರೈತರು ತಾವು ಬೆಳೆದ ಬೆಳೆಗೆ ತಾವೇ ಬೆಲೆಯನ್ನು ನಿಗದಿ ಮಾಡುವ ದಿನ ಬರಬೇಕು. ಆಗಲೇ ರೈತರು ಸಂತೃಪ್ತ ಜೀವನ ನಡೆಸಲು ಸಾಧ್ಯ. ಇದುವರೆಗೂ ಸಾಲವೇ ಇಲ್ಲದ ರೈತರನ್ನು ನಾನು ನೋಡೇ ಇಲ್ಲ. ಪ್ರತಿಯೊಬ್ಬರೂ ಸಾಲದ ಸುಳಿಯಲ್ಲಿ ಸಿಲುಕಿರುವುದು ದುರಂತವೇ ಸರಿ ಎಂದರು.ಯಶಸ್ವಿನಿ ಯೋಜನೆ ಜಾರಿಯಲ್ಲಿರುವುದರಿಂದ ಬಡವರಿಗೆ ಅನುಕೂಲವಾಗುತ್ತಿದೆ. ಮಾರ್ಚ್ 31 ರ ತನಕ ನೊಂದಣಿಗೆ ಅವಕಾಶವಿದೆ. ಸಾರ್ವಜನಿಕರು ಕೂಡಲೇ ಯಶಸ್ವಿನಿ ಯೋಜನೆಯಲ್ಲಿ ತಮ್ಮ ಕುಟುಂಬದ ಹೆಸರನ್ನು ನೊಂದಣಿ ಮಾಡಿಕೊಳ್ಳಬೇಕೆಂದು ಸಚಿವ ಕೆ.ಎನ್.ರಾಜಣ್ಣ ಸೂಚಿಸಿದರು. ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್‌ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿರುವ ಕೆ.ಎನ್.ರಾಜಣ್ಣನವರ ಸೇವೆ ರಾಜ್ಯದಲ್ಲಿ ಅಲ್ಲದೇ ದೇಶದಲ್ಲೂ ಅವರ ಸೇವೆ ಅಗತ್ಯವಿದೆ. ಅವರು ಮಾಡಿರುವ ಸೇವೆಯನ್ನು ಪಕ್ಷಾತೀತವಾಗಿ ಬೆಂಬಲಿಸಬೇಕೆಂದು ಹೇಳಿದರು. ಕೆ.ಎನ್.ರಾಜಣ್ಣನವರು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗುವ ಬದಲು ತುಮಕೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರೆ, ಜಿಲ್ಲೆ ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಣುತ್ತಿತ್ತು ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಬೆಮಲ್ ಕಾಂತರಾಜ್ ಮಾತನಾಡಿ ಕೆ.ಎನ್.ರಾಜಣ್ಣ ಸಹಕಾರ ಸಂಘ ನೇತೃತ್ವವಹಿಸಿಕೊಂಡಿರುವುದರಿಂದ ಎಲ್ಲಾ ಹಣಕಾಸು ಸಂಘ ಸಂಸ್ಥೆಗಳು ಸುಭದ್ರವಾಗಿದೆ. ಸರ್ಕಾರ ನೀಡುವ ಸವಲತ್ತುಗಳನ್ನು ಅಲ್ಲಿನ ಸಿಬ್ಬಂದಿ ದುರುಪಯೋಗಪಡಿಸಿಕೊಳ್ಳದೇ ರೈತಾಪಿಗಳಿಗೆ ನೀಡಬೇಕೆಂದು ಕಿವಿಮಾತು ಹೇಳಿದರು.ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ಮಾತನಾಡಿ ರೈತಾಪಿಗಳು ಖಾಸಗಿ ವ್ಯಕ್ತಿಗಳ ಬಳಿ ಹಣಕಾಸು ವಹಿವಾಟು ನಡೆಸುವ ಬದಲು ಸಹಕಾರ ಸಂಘಗಳಲ್ಲಿ ವ್ಯವಹಾರ ನಡೆಸಿದರೆ ರೈತರಿಗೆ ಲಾಭವಾಗಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಕೊಡಗೀಹಳ್ಳಿ ಸಿದ್ದಲಿಂಗಪ್ಪ ವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಗೈರು ಹಾಜರಾಗಿದ್ದುದು ಚರ್ಚೆಗೆ ಗ್ರಾಸವಾಗಿತ್ತು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸ್ವಪ್ನಾ ನಟೇಶ್, ಉಪಾಧ್ಯಕ್ಷೆ ಭಾಗ್ಯಮ್ಮ, ಸಹಕಾರ ಸಂಘಗಳ ಉಪನಿಬಂಧಕರಾದ ಎಚ್.ಮೂರ್ತಿ, ನಬಾರ್ಡ್ ಅಧಿಕಾರಿ ಕೀರ್ತಿ ಪ್ರಭಾ, ಡಿಸಿಸಿ ಬ್ಯಾಂಕ್ ಸಿಇಒ ಜಂಗಮಪ್ಪ, ನಿರ್ದೇಶಕರಾದ ರವಿ, ಜಿ.ಎನ್.ಮೂರ್ತಿ, ಲಕ್ಷ್ಮೀನಾರಾಯಣ್, ಪ್ರಭಣ್ಣ, ನರಸಿಂಹಣ್ಣ, ಹನುಮಾನ್, ರಾಜಕುಮಾರ, ನಾಗೇಶ್ ಬಾಬು, ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಿರಣ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶ್ರೀನಿವಾಸ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಡಿ.ರಮೇಶ್ ಗೌಡ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

ಗ್ಯಾರಂಟಿ ಯೋಜನೆಯ ಅಧ್ಯಕ್ಷ ಪ್ರಸನ್ನ ಕುಮಾರ್ ಸ್ವಾಗತಿಸಿದರು. ಉಪನ್ಯಾಸಕಿ ರೂಪ ಶ್ರೀ ನಿರೂಪಿಸಿ ವಂದಿಸಿದರು. ಕೋಟ್‌

ಮುಂಬರುವ ದಿನಗಳಲ್ಲಿ ಎಲ್ಲಾ ಸಹಕಾರಿ ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ತರಲು ಸರ್ಕಾರ ನಿರ್ಧರಿಸಿದೆ. ಗ್ರಾಮ ಪಂಚಾಯಿಗಳಲ್ಲಿ ಇರುವಂತೆ ಸಹಕಾರಿ ಕ್ಷೇತ್ರದಲ್ಲೂ ಮೀಸಲಾತಿ ತಂದರೆ ಪ್ರತಿಯೊಬ್ಬರಿಗೂ ಸಮಾನತೆಯನ್ನು ಸಾರಿದಂತಾಗುತ್ತದೆ. ಅದು ಗಾಂಧೀಜಿಯವರ ಕನಸೂ ಆಗಿತ್ತು. ರಾಮರಾಜ್ಯದ ಕಲ್ಪನೆಯೂ ಆಗಿದೆ ಎಂದರು. ಎಲ್ಲಾ ಸಂಘಗಳು ಆಸ್ತಿಗಳನ್ನು ಸೃಷ್ಠಿಸಬೇಕು. ಅಲ್ಲಿನ ಸಿಬ್ಬಂದಿ ಸಾರ್ವಜನಿಕರ ಹಣವನ್ನು ಬಹಳ ಪ್ರಾಮಾಣಿಕತೆಯಿಂದ ಕಾಪಾಡಿಕೊಂಡು ಜನರ ನಂಬಿಕೆಯನ್ನು ಗಳಿಸಬೇಕು. - ಕೆ.ಎನ್‌.ರಾಜಣ್ಣ, ಸಹಕಾರ ಸಚಿವ.

Share this article