ಸಿಎಂ ವಿರುದ್ಧ ಕಪ್ಪು ಬಾವುಟ ಪ್ರದರ್ಶನಕ್ಕೆ ನಿರ್ಧಾರ

KannadaprabhaNewsNetwork | Published : Nov 27, 2024 1:05 AM

ಸಾರಾಂಶ

ಜಿಲ್ಲೆಯ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಮಾತ್ರ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಿ, ವಿರೋಧ ಪಕ್ಷಗಳ ಶಾಸಕರಿಗೆ ಕ್ಷೇತ್ರಗಳಿಗೆ ಅನುದಾನ ನೀಡದೆ ತಾರತಮ್ಯ ನೀತಿ ಅನುಸರಿಸುವುದನ್ನು ಖಂಡಿಸಿ ಡಿ. 2 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಗೋ ಬ್ಯಾಕ್ ಸಿದ್ದರಾಮಯ್ಯ ಘೋಷಣೆ ಕೂಗುವ ಮೂಲಕ ಹೋರಾಟ ನಡೆಸಲು ಜಿಲ್ಲೆಯ ಎನ್‌ಡಿಎ ಶಾಸಕರು ನಿರ್ಧರಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಯ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಮಾತ್ರ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಿ, ವಿರೋಧ ಪಕ್ಷಗಳ ಶಾಸಕರಿಗೆ ಕ್ಷೇತ್ರಗಳಿಗೆ ಅನುದಾನ ನೀಡದೆ ತಾರತಮ್ಯ ನೀತಿ ಅನುಸರಿಸುವುದನ್ನು ಖಂಡಿಸಿ ಡಿ. 2 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಗೋ ಬ್ಯಾಕ್ ಸಿದ್ದರಾಮಯ್ಯ ಘೋಷಣೆ ಕೂಗುವ ಮೂಲಕ ಹೋರಾಟ ನಡೆಸಲು ಜಿಲ್ಲೆಯ ಎನ್‌ಡಿಎ ಶಾಸಕರು ನಿರ್ಧರಿಸಿದ್ದಾರೆ. ಡಿ. 2 ರಂದು ತುಮಕೂರಿಗೆ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸುತ್ತಿದ್ದು, ಅಂದು ಜಾಸ್‌ಟೋಲ್ ಬಳಿ ಮುಖ್ಯಮಂತ್ರಿಗಳ ಕಾರಿಗೆ ಅಡ್ಡಲಾಗಿ ಮಲಗಿ ಸರ್ಕಾರದ ತಾರತಮ್ಯ ನೀತಿ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎನ್‌ಡಿಎ ಶಾಸಕರಾದ ಎಂ.ಟಿ. ಕೃಷ್ಣಪ್ಪ, ಬಿ. ಸುರೇಶ್‌ಗೌಡ ಹಾಗೂ ಜ್ಯೋತಿಗಣೇಶ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು. ಡಿ. 2 ರಂದು ಎನ್‌ಡಿಎ ಶಾಸಕರುಗಳ ಕ್ಷೇತ್ರಗಳಿಂದ ಸಾವಿರಾರು ಕಾರ್ಯಕರ್ತರು ತುಮಕೂರಿಗೆ ಆಗಮಿಸಿ ಮುಖ್ಯಮಂತ್ರಿಗಳ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಹೋರಾಟ ನಡೆಸಲಾಗುವುದು. ನಮ್ಮ ಹೋರಾಟವನ್ನು ಹತ್ತಿಕ್ಕಲು ಪೊಲೀಸ್ ಬಲ ಬಳಸಿದರೂ ಜಗ್ಗುವುದಿಲ್ಲ. ನಮ್ಮ ಜೈಲಿಗೆ ಬೇಕಾದರೂ ಹಾಕಲಿ, ಅವರ ಮನೆಗೆ ಬೇಕಾದರೂ ಕರೆದೊಯ್ಯಲಿ. ನಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಶಾಸಕರು ಹೇಳಿದರು.ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ 8 ತಿಂಗಳು ಕಳೆದಿದೆ. ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಎಲ್ಲ ಶಾಸಕರ ಕ್ಷೇತ್ರಗಳಿಗೆ 25 ಕೋಟಿ ಅನುದಾನ ನೀಡುವುದಾಗಿ ಹೇಳಿದ್ದರು. ಆದರೆ ಈಗ ಕೇವಲ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಮಾತ್ರ ಅನುದಾನ ನೀಡಿ, ಬಿಜೆಪಿ ಹಾಗೂ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಒಂದು ಬಿಡಿಗಾಸನ್ನು ನೀಡದೆ ತಾರತಮ್ಯ ಎಸಗಿದ್ದಾರೆ ಎಂದು ಗ್ರಾಮಾಂತರ ಶಾಸಕ ಬಿ. ಸುರೇಶ್‌ಗೌಡ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯ ಕಾಂಗ್ರೆಸ್ ಶಾಸಕರು ಇರುವ ಸಿರಾ ಕ್ಷೇತ್ರಕ್ಕೆ 8 ಕೋಟಿ, ಕೊರಟಗೆರೆಗೆ 10 ಕೋಟಿ, ಪಾವಗಡಕ್ಕೆ 12 ಕೋಟಿ, ಗುಬ್ಬಿಗೆ 5 ಕೋಟಿ, ತಿಪಟೂರಿಗೆ 10 ಕೋಟಿ, ಕುಣಿಗಲ್ ಕ್ಷೇತ್ರಕ್ಕೆ 43 ಕೋಟಿ ಹಾಗೂ ಮಧುಗಿರಿ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಕೋಟ್ಯಂತರ ರೂ. ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಡುಗಡೆ ಮಾಡಿದ್ದಾರೆ. ಆದರೆ ಎನ್‌ಡಿಎ ಶಾಸಕರಿರುವ ತುಮಕೂರು ಗ್ರಾಮಾಂತರ, ತುಮಕೂರು ನಗರ, ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಗಳಿಗೆ ಇದುವರೆಗೂ ಒಂದು ಬಿಡಿಗಾಸು ಅನುದಾನವನ್ನು ನೀಡಿಲ್ಲ. ರಸ್ತೆ ಗುಂಡಿ ಮುಚ್ಚಲು ಸಹ ಹಣ ಇಲ್ಲ ಎಂದು ದೂರಿದರು. ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಅವರ ಕ್ಷೇತ್ರಕ್ಕೆ 8 ಕೋಟಿ ನೀಡಿ, ಕುಣಿಗಲ್ ಕ್ಷೇತ್ರದ ಡಾ. ರಂಗನಾಥ್ ಅವರಿಗೆ 43 ಕೋಟಿ ನೀಡಿದ್ದಾರೆ. ಹಾಗೆಯೇ ಗುಬ್ಬಿ ಶಾಸಕ ಶ್ರೀನಿವಾಸ್ ರವರ ಕ್ಷೇತ್ರಕ್ಕೆ ಕೇವಲ 5 ಕೋಟಿ ನೀಡಿದ್ದಾರೆ. ಇದನ್ನು ಗಮನಿಸಿದರೆ ಅವರಲ್ಲೇ ತಾರತಮ್ಯ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದರು.ಬಿಟ್ಟಿ ಭಾಗ್ಯಗಳಿಂದ ಕಾಂಗ್ರೆಸ್ ಸರ್ಕಾರ ಹಣ ಇಲ್ಲದೆ ದಿವಾಳಿಯಾಗಿದೆ. 3 ಕ್ಷೇತ್ರಗಳ ಉಪಚುನಾವಣೆಯನ್ನು ಗೆದ್ದು ಇಡೀ ಭೂ ಮಂಡಲವನ್ನೇ ಗೆದ್ದಂತೆ ಬೀಗುತ್ತಿದ್ದಾರೆ. ಈ ಗೆಲುವು ಶಾಶ್ವತವಾಗಿ ಉಳಿಯುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದವರು. ಆದರೂ ಈ ರೀತಿಯ ತಾರತಮ್ಯ ಮಾಡುತ್ತಿರುವುದು ಅವರಿಗೆ ಶೋಭ ತರುವುದಿಲ್ಲ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಈ ತಾರತಮ್ಯ ಧೋರಣೆಯನ್ನು ವಿರೋಧಿಸಿ ಕಪ್ಪು ಬಾವುಟ ಪ್ರದರ್ಶಿಸಿ ಗೋಬ್ಯಾಕ್ ಸಿದ್ದರಾಮಯ್ಯ ಘೋಷಣೆ ಕೂಗಲಾಗುವುದು ಎಂದರು.ನಗರ ಶಾಸಕ ಜ್ಯೋತಿಗಣೇಶ್ ಮಾತನಾಡಿ, ಡಿ. 2 ರಂದು ತುಮಕೂರಿಗೆ ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಂದು ನಮ್ಮಗೆ ಅನುದಾನ ನೀಡಿಕೆಯಲ್ಲಿ ಆಗಿರುವ ತಾರತಮ್ಯದ ವಿರುದ್ಧ ಹೋರಾಟ ನಡೆಸುತ್ತೇವೆ. ಅಷ್ಟರೊಳಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ಮುಖ್ಯಮಂತ್ರಿಗಳ ಗಮನ ಸೆಳೆದು ಅನುದಾನು ಬಿಡುಗಡೆ ಮಾಡಿಸಿದರೆ ಹೋರಾಟವನ್ನು ಸ್ಥಗಿತಗೊಳಿಸುತ್ತೇವೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್, ಗುಬ್ಬಿ ನಾಗರಾಜು, ದಿಲೀಪ್‌ಕುಮಾರ್, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

Share this article