ತುಂಗಭದ್ರಾ ಜಲಾಶಯದಲ್ಲಿ 80 ಟಿಎಂಸಿ ನೀರು ಸಂಗ್ರಹಕ್ಕೆ ನಿರ್ಧಾರ

KannadaprabhaNewsNetwork |  
Published : Jun 23, 2025, 11:49 PM ISTUpdated : Jun 24, 2025, 12:02 PM IST
23ಎಚ್‌ಪಿಟಿ1- ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲಿ46.290 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. | Kannada Prabha

ಸಾರಾಂಶ

ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳು ಮುಕ್ಕಾಗಿವೆ ಎಂಬ ವರದಿ ಮತ್ತು ಪರಿಣಿತ ಕನ್ನಯ್ಯ ನಾಯ್ಡು ಸಲಹೆ ಮೇರೆಗೆ ತುಂಗಭದ್ರಾ ಮಂಡಳಿ ಈ ಬಾರಿ ಜಲಾಶಯದಲ್ಲಿ 80 ಟಿಎಂಸಿ ನೀರು ಮಾತ್ರ ಸಂಗ್ರಹ ಮಾಡಲು ನಿರ್ಧಾರ ಕೈಗೊಂಡಿದೆ.

 ಕೃಷ್ಣ ಲಮಾಣಿ

 ಹೊಸಪೇಟೆ :  ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳು ಮುಕ್ಕಾಗಿವೆ ಎಂಬ ವರದಿ ಮತ್ತು ಪರಿಣಿತ ಕನ್ನಯ್ಯ ನಾಯ್ಡು ಸಲಹೆ ಮೇರೆಗೆ ತುಂಗಭದ್ರಾ ಮಂಡಳಿ ಈ ಬಾರಿ ಜಲಾಶಯದಲ್ಲಿ 80 ಟಿಎಂಸಿ ನೀರು ಮಾತ್ರ ಸಂಗ್ರಹ ಮಾಡಲು ನಿರ್ಧಾರ ಕೈಗೊಂಡಿದೆ.

ಜೂ. 3ರಂದು ನಡೆದ ತುಂಗಭದ್ರಾ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ವಿಶ್ವಸನೀಯ ಮೂಲಗಳು ''''ಕನ್ನಡಪ್ರಭ''''ಕ್ಕೆ ತಿಳಿಸಿವೆ. ಈ ಮಧ್ಯೆ ಜಲಾಶಯದ ಕಾಲುವೆಗಳಲ್ಲಿ ಮಂಡಳಿಯಿಂದ ಕಾಮಗಾರಿ ಕೂಡ ಕೈಗೊಳ್ಳಲಾಗಿದೆ. ಈಗ ಐಸಿಸಿ ಸಭೆ ನಿಗದಿಯಾಗಿದ್ದು, ರೈತರಿಗೆ ನೀರು ಹಂಚಿಕೆ ಮಾಡಿದರೆ ಈ ಕಾಮಗಾರಿಗಳನ್ನು ಕೂಡ ನಿಲ್ಲಿಸಬೇಕಾಗುತ್ತದೆ. ಆದರೆ, ರೈತರಿಗೆ ನೀರಿನ ಹಂಚಿಕೆಯೇ ಮುಖ್ಯವಾಗಿದ್ದು, ಈ ಕಾಮಗಾರಿಗಳನ್ನು ಮತ್ತೆ ಕೈಗೆತ್ತಿಕೊಳ್ಳಬಹುದು ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಜೂ. 27ರಂದು ಬೆಂಗಳೂರಿನಲ್ಲಿ 124ನೇ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ನಿಗದಿಯಾಗಿದ್ದು, ಈ ಸಭೆಯತ್ತ ರೈತರ ಚಿತ್ತ ನೆಟ್ಟಿದೆ.

ತುಂಗಭದ್ರಾ ಜಲಾಶಯ ರಾಜ್ಯದ ವಿಜಯನಗರ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ 10 ಲಕ್ಷ ಎಕರೆ ಪ್ರದೇಶಕ್ಕೆ ನೀರು ಒದಗಿಸುತ್ತದೆ. ಇನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ 3 ಲಕ್ಷ ಎಕರೆ ಪ್ರದೇಶಕ್ಕೂ ನೀರು ಒದಗಿಸುತ್ತದೆ. ಜಲಾಶಯದಲ್ಲಿ ಮುಂಗಾರು ಹಂಗಾಮಿಗೆ ಲಭ್ಯ ಇರುವ ನೀರಿನ ಹಂಚಿಕೆಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಕೊಠಡಿ ಸಂಖ್ಯೆ 334ರ ಸಮ್ಮೇಳನ ಸಭಾಂಗಣದಲ್ಲಿ ಜೂ. 27ರ ಮಧ್ಯಾಹ್ನ 3 ಗಂಟೆಗೆ 124ನೇ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ನಿಗದಿಯಾಗಿದೆ. ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಮತ್ತು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಮುಂಗಾರು ಚುರುಕು:

ಈ ವರ್ಷ ಬೇಗನೆ ಮುಂಗಾರು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ಈಗಾಗಲೇ 46.290 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಜಲಾಶಯದ ಒಳಹರಿವು ಕೂಡ ಉತ್ತಮವಾಗಿದೆ. ಜಲಾಶಯದ ಸಂಗ್ರಹ ಸಾಮರ್ಥ್ಯ 105.788 ಟಿಎಂಸಿ ಇದ್ದರೂ ಈ ವರ್ಷ 80 ಟಿಎಂಸಿ ನೀರು ಮಾತ್ರ ಸಂಗ್ರಹ ಮಾಡಲಾಗುತ್ತಿದೆ. ಜಲಾಶಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಳೆ ಇದ್ದರೂ ಸಂಗ್ರಹ ಸಾಮರ್ಥ್ಯ ಕುಗ್ಗಿಸಲಾಗಿದೆ. ಹಾಗಾಗಿ ರೈತರಿಗೆ 25 ಟಿಎಂಸಿ ನೀರು ಕೊರತೆ ಉಂಟಾಗಲಿದೆ. ಈಗ ಮುಂಗಾರು ಹಂಗಾಮಿನಲ್ಲಿ ಒಳಹರಿವು ಯಾವ ರೀತಿ ಇರಲಿದೆ ಮತ್ತು ಈಗ ಸಂಗ್ರಹವಾಗಿರುವ ನೀರಿನ ಲಭ್ಯತೆ ಆಧರಿಸಿ ಜಲಾಶಯದ ಎಡದಂಡೆ, ಬಲದಂಡೆ ಮತ್ತು ವಿಜಯನಗರ ಕಾಲದ ಕಾಲುವೆಗಳು, ಕುಡಿಯುವ ನೀರು, ಕೈಗಾರಿಕೆಗಳಿಗೆ ನೀರು ಹಂಚಿಕೆ ಮಾಡಲಾಗುತ್ತದೆ.

ಕ್ರಸ್ಟ್‌ಗೇಟ್‌ಗಳ ಬದಲಾವಣೆ:

ಜಲಾಶಯದ 33 ಕ್ರಸ್ಟ್‌ಗೇಟ್‌ಗಳು ಮುಕ್ಕಾಗಿವೆ ಎಂದು ತಜ್ಞರು ವರದಿ ನೀಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಜಲಾಶಯದ 33 ಗೇಟ್‌ಗಳನ್ನು ಬದಲಿಸಲು ಗುಜರಾತ್‌ ಮೂಲದ ಹಾರ್ಡ್‌ವೇರ್‌ ಟೂಲ್ಸ್‌ ಆ್ಯಂಡ್‌ ಮಷಿನರಿ ಕಂಪನಿಗೆ ಟೆಂಡರ್‌ ನೀಡಲಾಗಿದೆ. ಈಗಾಗಲೇ 19ನೇ ಕ್ರಸ್ಟ್‌ಗೇಟ್‌ ಅನ್ನು ಕಂಪನಿ ಗದಗದಲ್ಲಿ ತಯಾರಿಸಿ ತುಂಗಭದ್ರಾ ಜಲಾಶಯಕ್ಕೆ ತಂದಿದೆ. ಈಗ ಜಲಾಶಯದ ಒಳಹರಿವು ಉತ್ತಮವಾಗಿದ್ದು, 46.290 ಟಿಎಂಸಿಯಷ್ಟು ನೀರು ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ 19ನೇ ಗೇಟ್ಅನ್ನು ನೀರು ತಗ್ಗಿದ ಬಳಿಕ ಅಕ್ಟೋಬರ್‌ ಇಲ್ಲವೇ ನವೆಂಬರ್‌ನಲ್ಲಿ ಅಳವಡಿಕೆ ಮಾಡಲು ತುಂಗಭದ್ರಾ ಮಂಡಳಿ ನಿರ್ಧರಿಸಿದೆ.

ತುಂಗಭದ್ರಾ ಜಲಾಶಯದಲ್ಲಿ ಕಳೆದ ವರ್ಷ 5.462 ಟಿಎಂಸಿ ಮಾತ್ರ ನೀರು ಸಂಗ್ರಹವಾಗಿತ್ತು. ಈ ವರ್ಷ 46.290 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ 10 ವರ್ಷಗಳ ಸರಾಸರಿ ತೆಗೆದುಕೊಂಡರೆ 16.615 ಟಿಎಂಸಿ ನೀರು ಸಂಗ್ರಹವಾಗಿತ್ತು. ಆದರೆ, ಈ ವರ್ಷ ದಾಖಲೆ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಈ ಮಧ್ಯೆ ಜಲಾಶಯದ ಗೇಟ್‌ಗಳು ಮುಕ್ಕಾಗಿರುವ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಒಳ ಹರಿವು ಏರಿದರೆ, ಅನಿವಾರ್ಯವಾಗಿ ನದಿಗೆ ನೀರು ಹರಿಸಬೇಕಾಗುತ್ತದೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ.

ತುಂಗಭದ್ರಾ ಜಲಾಶಯದ ಗೇಟ್‌ಗಳು ಮುಕ್ಕಾಗಿವೆ ಎಂಬ ವರದಿ ಮತ್ತು ಪರಿಣಿತರ ಸಲಹೆ ಮೇರೆಗೆ ಈ ಬಾರಿ ಜಲಾಶಯದಲ್ಲಿ 80 ಟಿಎಂಸಿಯಷ್ಟು ನೀರು ಮಾತ್ರ ಸಂಗ್ರಹ ಮಾಡಲಾಗುತ್ತದೆ. ಈ ಸಂಬಂಧ ಜೂ. 3ರಂದು ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತುಂಗಭದ್ರಾ ಮಂಡಳಿಯ ಅಧೀಕ್ಷಕ ಎಂಜಿನಿಯರ್‌ ನಾರಾಯಣ ನಾಯ್ಕ ತಿಳಿಸಿದ್ದಾರೆ.

PREV
Read more Articles on

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ