ಸ್ಕ್ಯಾನಿಂಗ್ ಕೇಂದ್ರಗಳಿಗೆ ದಿಢೀರ್ ಭೇಟಿಗೆ ತೀರ್ಮಾನ: ಡಾ.ಎಂ.ಸತೀಶ್ ಕುಮಾರ್

KannadaprabhaNewsNetwork |  
Published : Apr 05, 2026, 02:30 AM IST
ಚಿತ್ರ :  4ಎಂಡಿಕೆ2 : ಪ್ರಸವ ಪೂರ್ವ ಲಿಂಗ ಪತ್ತೆ ಮತ್ತು ಹತ್ಯೆ ಕಾಯ್ದೆ ಸಲಹಾ ಸಮಿತಿ ಸಭೆ ನಡೆಯಿತು.  | Kannada Prabha

ಸಾರಾಂಶ

ಪ್ರಸವ ಪೂರ್ವ ಲಿಂಗ ಪತ್ತೆ ಶಿಕ್ಷಾರ್ಹ ಅಪರಾಧವಾಗಿದ್ದು, ಈ ಸಂಬಂಧ ದೂರುಗಳು ಕೇಳಿ ಬಂದಲ್ಲಿ ನಿಯಮಾನುಸಾರ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸತೀಶ್ ಕುಮಾರ್ ಎಚ್ಚರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪ್ರಸವ ಪೂರ್ವ ಲಿಂಗ ಪತ್ತೆ ಶಿಕ್ಷಾರ್ಹ ಅಪರಾಧವಾಗಿದ್ದು, ಈ ಸಂಬಂಧ ದೂರುಗಳು ಕೇಳಿ ಬಂದಲ್ಲಿ ನಿಯಮಾನುಸಾರ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸತೀಶ್ ಕುಮಾರ್ ಎಚ್ಚರಿಸಿದ್ದಾರೆ. ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರ ಕಚೇರಿಯಲ್ಲಿ ಶನಿವಾರ ನಡೆದ ಪಿಸಿ ಮತ್ತು ಪಿಎನ್‌ಡಿಟಿ (ಪ್ರಸವ ಪೂರ್ವ ಲಿಂಗ ಪತ್ತೆ ಮತ್ತು ಹತ್ಯೆ ಕಾಯ್ದೆ) ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಪ್ರಸವ ಪೂರ್ವ ಲಿಂಗ ಪತ್ತೆ ಮಾಡಬಾರದು. ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಸಮತೋಲನವಾಗಿರಬೇಕು. ಆ ನಿಟ್ಟಿನಲ್ಲಿ ಗರ್ಭಿಣಿಯರು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಇದರಿಂದ ಶಿಶುವಿನ ಬೆಳವಣಿಗೆ ಮತ್ತು ತಾಯಿಯ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಎನ್‌ಪೋರ್ಸ್ಮೆಂಟ್ ಅಧಿಕಾರಿ ಡಾ.ಎನ್.ಆನಂದ್ ಅವರು ಜಿಲ್ಲೆಯಲ್ಲಿ 28 ಸ್ಕ್ಯಾನಿಂಗ್‌ ಕೇಂದ್ರಗಳಿದ್ದು, ಅಧಿಕಾರಿಗಳು ಅಲ್ಲಿಗೆ ಆಗಾಗ ಭೇಟಿ ನೀಡಿ ತಪಾಸಣೆ ನಡೆಸುತ್ತಾರೆ ಎಂದರು. ಹೊಸದಾಗಿ ಸ್ಕ್ಯಾನಿಂಗ್‌ ಕೇಂದ್ರ ಆರಂಭಿಸಲು ಎರಡು ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಬಗ್ಗೆ ಖುದ್ದು ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದು ಹೇಳಿದರು. ಹಾಗೆಯೇ ಸ್ಕ್ಯಾನಿಂಗ್‌ ಕೇಂದ್ರ ಮರು ನೋಂದಣಿಗಾಗಿ ಅರ್ಜಿ ಸಲ್ಲಿಸಿರುವ ಕೇಂದ್ರಗಳಿಗೆ ಪಿಸಿ ಮತ್ತು ಪಿಎನ್‌ಡಿಟಿ ಸಲಹಾ ಸಮಿತಿ ಸದಸ್ಯರ ತಂಡವು ಭೇಟಿ ನೀಡಿ ಪರಿಶೀಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾದ ಡಾ.ಸೋಮಶೇಖರ್ ಅವರು ಮಾತನಾಡಿ ಸ್ಕ್ಯಾನಿಂಗ್‌ ಕೇಂದ್ರಗಳಿಗೆ ಆಗಾಗ ದಿಢೀರ್ ಭೇಟಿ ನೀಡಿ ತಪಾಸಣೆ ಕೈಗೊಳ್ಳಬೇಕು. ತಾಯಿ ಆರೋಗ್ಯ ಮತ್ತು ಶಿಶುವಿನ ಬೆಳವಣಿಗೆ ಸಂಬಂಧ ತಜ್ಞ ವೈದ್ಯರೇ ಸ್ಕ್ಯಾನಿಂಗ್ ಮಾಡಬೇಕು. ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಸಲಹೆ ಮಾಡಿದರು. ಸ್ಕ್ಯಾನಿಂಗ್ ಕೇಂದ್ರಕ್ಕೆ ಬರುವವರ ಹೆಸರು, ವಿಳಾಸ ಮತ್ತು ಸಮಯ ಎಲ್ಲವನ್ನು ನಿಖರವಾಗಿ ದಾಖಲಿಸಬೇಕು. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆಯೇ ಎಂಬ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು ಎಂದು ಡಾ.ಸೋಮಶೇಖರ್ ಅವರು ತಿಳಿಸಿದರು. ಸಮಿತಿ ಸದಸ್ಯರಾದ ಕೆ.ಎನ್.ನಳಿನೀ ಕುಮಾರ್ ಅವರು ಮಾತನಾಡಿ ಸ್ಕ್ಯಾನಿಂಗ್ ಕೇಂದ್ರಗಳಿಗೆ ಆಗಾಗ ದಿಢೀರ್ ಭೇಟಿ ನೀಡುವುದರ ಜೊತೆಗೆ ಹೊಸ ಸ್ಕ್ಯಾನಿಂಗ್ ಕೇಂದ್ರ ಆರಂಭಕ್ಕೆ ಅರ್ಜಿ ಸಲ್ಲಿಸಿರುವ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲಿಸುವಂತಾಗಬೇಕು ಎಂದು ಸಲಹೆ ಮಾಡಿದರು. ಸಮಿತಿ ಸದಸ್ಯರಾದ ಗೌರಮ್ಮ ಮಾದಮ್ಮಯ್ಯ, ಜಾಯ್ಸ್ ಮೆನೇಜಸ್ ಅವರು ಪಿಸಿ ಮತ್ತು ಪಿಎನ್‌ಡಿಟಿ ಹಾಗೂ ಸ್ಕ್ಯಾನಿಂಗ್ ಕೇಂದ್ರಗಳು ಹಾಗೂ ಹೊಸದಾಗಿ ಆರಂಭಿಸುವ ಸ್ಕ್ಯಾನಿಂಗ್ ಕೇಂದ್ರ ಸಂಬಂಧ ಹಲವು ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ರಾಹ್ಮಣ ಸಮುದಾಯಕ್ಕೆ ಯೋಜನೆಗಳಿದ್ದರೂ ಅರ್ಜಿ ಕುಂಠಿತ: ಪಿ.ಎಂ. ಮಾಲತೇಶ
ಚಾರಣಕ್ಕೆ ತೆರಳಿದ್ದ ಯುವತಿಯ ಸುಳಿವು ಅಲಭ್ಯ