ಕುಂದಗೋಳ:
ತಾಲೂಕಿನ ಕುಂದಗೋಳ, ಯಲಿವಾಳ, ಸಂಶಿ ಹಾಗೂ ಯರಗುಪ್ಪಿ ಖರೀದಿ ಕೇಂದ್ರಗಳಿಗೆ ರೈತರು ಸಾಲ-ಸೋಲ ಮಾಡಿ ಟ್ರ್ಯಾಕ್ಟರ್‌ಗಳಲ್ಲಿ ಕಡಲೆ ಹೊತ್ತು ತರುತ್ತಿದ್ದಾರೆ. ಆದರೆ, ಅಲ್ಲಿ ಚೀಲಗಳಿಲ್ಲ ಎಂಬ ಹಾರಿಕೆ ಉತ್ತರ ಕೇಳಿ ರೈತರು ಕಂಗಾಲಾಗಿದ್ದಾರೆ. ಪ್ರತಿ ದಿನದ ಟ್ರ್ಯಾಕ್ಟರ್ ಬಾಡಿಗೆ ಒಂದು ಕಡೆಯಾದರೆ, ಬಿರು ಬಿಸಿಲಿನಲ್ಲಿ ಸರದಿಯಲ್ಲಿ ನಿಂತು ರೈತರ ದೇಹ ಬಳಲುತ್ತಿದೆ. ಅತ್ತ ಮಳೆಯ ಆತಂಕವೂ ಕಾಡುತ್ತಿದ್ದು, ರಾಶಿ ಮಾಡಿಟ್ಟ ಕಡಲೆ ಏನಾಗುವುದೋ ಎಂಬ ಭೀತಿ ಆವರಿಸಿದೆ.
ಕೇಂದ್ರಗಳು ಬಂದ್!:ಯಲಿವಾಳ ಮತ್ತು ಸಂಶಿ ಕೇಂದ್ರಗಳಲ್ಲಿ ಖಾಲಿ ಚೀಲಗಳ ದಾಸ್ತಾನು ಶೂನ್ಯಕ್ಕೆ ತಲುಪಿದೆ. ಇದರಿಂದ ಬೇಸತ್ತ ಅಧಿಕಾರಿಗಳು ಖರೀದಿಯನ್ನೇ ನಿಲ್ಲಿಸಿದ್ದಾರೆ. “ನಾವು ಹುಬ್ಬಳ್ಳಿಗೆ ಪತ್ರ ಬರೆದಿದ್ದೇವೆ, ಅವರು ಚೀಲ ಕಳಿಸಿಲ್ಲ” ಎಂದು ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ನಾವು ಕಡಲೆ ರಾಶಿಯನ್ನು ಖರೀದಿ ಕೇಂದ್ರದ ಮುಂದೆಯೇ ಸುರಿದು ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರೈತ ಯಲ್ಲಪ್ಪ ಬಾರಕೇರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಡಲೆ ಖರೀದಿ ಕೇಂದ್ರಗಳಲ್ಲಿ ಖಾಲಿ ಚೀಲದ ಸಮಸ್ಯೆ ಇರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಚೀಲಗಳ ಕೊರತೆಯಾಗದಂತೆ ಕೂಡಲೇ ಪೂರೈಕೆ ಮಾಡಲು ಸೂಚಿಸಿದ್ದು, ಶೀಘ್ರವೇ ಸಮಸ್ಯೆ ಸರಿಪಡಿಸಲಾಗುವುದು.