ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಪ್ರಯುಕ್ತ ವಿವಿಧ ಕಾರ್ಯಕ್ರಮ

KannadaprabhaNewsNetwork |  
Published : Apr 05, 2026, 02:30 AM IST
ಸಭೆಯಲ್ಲಿ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ, ನೂತನ ರಥ ಲೋಕಾರ್ಪಣೆ ಸಮಾರಂಭದ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷ ಎಸ್.ಎಂ.ಮಾರನಬಸರಿ ಅವರನ್ನು ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಸನ್ಮಾನಿಸಿ ಆಶೀರ್ವದಿಸಿದರು. | Kannada Prabha

ಸಾರಾಂಶ

ಜಿಲ್ಲೆಯೇ ಸೂಡಿ ಗ್ರಾಮದಲ್ಲಿ ಪ್ರಪ್ರಥಮ ಬಾರಿಗೆ ಪಂಚ ಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಮೇ 6ರಿಂದ 10ರ ವರೆಗೆ ಬೃಹತ್ ಪ್ರಮಾಣದಲ್ಲಿ ಸೂಡಿ ಜುಕ್ತಿಹಿರೇಮಠ ಆಯೋಜಿಸುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದರು.

ಗದಗ: ಜಿಲ್ಲೆಯೇ ಸೂಡಿ ಗ್ರಾಮದಲ್ಲಿ ಪ್ರಪ್ರಥಮ ಬಾರಿಗೆ ಪಂಚ ಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ, 50ನೇ ವರ್ಷದ ರಥೋತ್ಸವದ ನಿಮಿತ್ತ ನೂತನ ರಥ ಲೋಕಾರ್ಪಣೆ ಹಾಗೂ ಧರ್ಮ ಸಮಾರಂಭವನ್ನು ಮೇ 6ರಿಂದ 10ರ ವರೆಗೆ ಬೃಹತ್ ಪ್ರಮಾಣದಲ್ಲಿ ಸೂಡಿ ಜುಕ್ತಿಹಿರೇಮಠ ಆಯೋಜಿಸುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದರು.

ನಗರದ ಎಪಿಎಂಸಿ ಬಳಿಯ ಶರಣಬಸವ(ರಾಜು) ಗುಡಿಮನಿ ಅವರ ಕಚೇರಿಯಲ್ಲಿ ನಡೆದ ಭಕ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ವೀರಶೈವ ಧರ್ಮ ಪರಂಪರೆಯ ಮೂಲ ಆಚಾರ್ಯರೇ ಪಂಚಪೀಠದ ಪರಮಾಚಾರ್ಯರು. ಕಾಶಿ ಪೀಠದ ಶಾಖಾ ಮಠವೇ ಸೂಡಿಯ ಶ್ರೀಜುಕ್ತಿಹಿರೇಮಠ ಎಂದರು.

ಪ್ರಸ್ತುತ ಮಠಾಧ್ಯಕ್ಷರಾದ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು 14ನೇಯವರು. ಇವರ ಅವಧಿಯಲ್ಲಿ ಅಂದರೆ, 2017ರಲ್ಲಿ ನೂತನ ಮಠ ಲೋಕಾರ್ಪಣೆಗೊಂಡಿದೆ. ಈಗ ನೂತನ ರಥ ಲೋಕಾರ್ಪಣೆಯ ಕಾರ್ಯ ನಡೆಯುತ್ತಿರುವುದು ಸಂತಸದ ಸಂಗತಿ. ಘಟದಿಂದ ಮಠ ಎಂಬುದಕ್ಕೆ ನಮ್ಮ ಜುಕ್ತಿಹಿರೇಮಠವೇ ಸಾಕ್ಷಿ ಎಂದರು.

ಸಾನ್ನಿಧ್ಯ ವಹಿಸಿದ್ದ ಡಾ.ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಮಾತನಾಡಿ, ಮೇ 6ರಂದು ಬೆಳಗ್ಗೆ 11ಕ್ಕೆ ಸೂಡಿ ಜುಕ್ತಿಹಿರೇಮಠದಲ್ಲಿ ಆರೋಗ್ಯ ಸಂವರ್ಧನೆಗಾಗಿ ಉಚಿತ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ, ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಸಂಜೆ 6.30ಕ್ಕೆ ಹುಬ್ಬಳ್ಳಿಯ ಜಿ.ವಿ. ಕಲಾ ಬಳಗದವರಿಂದ ರೇವಣಸಿದ್ಧೇಶ್ವರ ಮಹಾತ್ಮೆ ನಾಟಕ ಪ್ರದರ್ಶನಗೊಳ್ಳಲಿದೆ. ಮೇ 7ರಂದು ಬೆಳಗ್ಗೆ 11ಕ್ಕೆ ಕೃಷಿ ಋಷಿಯ ನೆನಹು ಕಾರ್ಯಕ್ರಮದಡಿ ಸಾವಯವ ಕೃಷಿ, ಹೈನುಗಾರಿಕೆ ಅಭಿವೃದ್ಧಿ, ಪರಿಸರ ಜಾಗೃತಿಯ ಅರಿವು ಕಾರ್ಯಕ್ರಮ ಜರುಗಲಿದೆ.

ಸಂಜೆ 6.30ಕ್ಕೆ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಕಲಾವಿದರಿಂದ ಜನಪದ ನೃತ್ಯ, ಕಲಾಪ್ರದರ್ಶನ ನಡೆಯಲಿದೆ. ಮೇ 8ರಂದು ಬೆಳಗ್ಗೆ 11ಕ್ಕೆ ಮಹಿಳಾ ಜಾಗೃತಿ ಸಮಾರಂಭ ಜರುಗಲಿದೆ. ಮೇ 9ರಂದು ಬೆಳಗ್ಗೆ 11ಕ್ಕೆ ಯುವಕರಿಗಾಗಿ ವ್ಯಸನಮುಕ್ತ ಸಮಾಜದ ಅರಿವು, ಯುವಕರಿಗೆ ಪ್ರೇರಣೆಯ ಶಕ್ತಿ ವರ್ಧನೆಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಸಂಜೆ 6.30ಕ್ಕೆ ಗಂಗಾವತಿ ಪ್ರಾಣೇಶ ಹಾಗೂ ಸಂಗಡಿಗರಿಂದ ಹಾಸ್ಯೋತ್ಸವ ಜರುಗಲಿದೆ ಎಂದರು.

ಮೇ 10ರಂದು ಬೆಳಗ್ಗೆ 9ಕ್ಕೆ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಲಿದೆ. ಮಧ್ಯಾಹ್ನ 12ಕ್ಕೆ ಧರ್ಮ ಸಂರಕ್ಷಣೆಯ ಸಮಾರಂಭ ಶ್ರೀಮಠದ ಪ್ರಶಸ್ತಿ ಮತ್ತು ನೂತನ ರಥ ಲೋಕಾರ್ಪಣೆ ಜರುಗಲಿದೆ. ಸಂಜೆ 6.30ಕ್ಕೆ ಬೆಂಗಳೂರಿನ ಕಲಾ ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದರು.

ಸಭೆಯಲ್ಲಿ ಹಿರಿಯ ಉದ್ಯಮಿದಾರರಾದ ಎಸ್.ಪಿ. ಸಂಶಿಮಠ, ಸಿದ್ದಣ್ಣ ಮಾರನಬಸರಿ, ಎಚ್.ಎಸ್. ಶಿವನಗೌಡರ, ರಾಜು ಕುರಡಗಿ, ಶರಣಪ್ಪ ಕುರಡಗಿ, ಸದಾಶಿವಯ್ಯ ಮದರಿಮಠ, ರಾಜು ಗುಡಿಮನಿ, ಚಂದ್ರು ಬಾಳಿಹಳ್ಳಿಮಠ, ಮಲ್ಲಿಕಾರ್ಜುನ ಸಂತೋಜಿ, ವಿಜಯಲಕ್ಷ್ಮೀ ಮಾನ್ವಿ, ಜಯಶ್ರೀ ತಾತನಗೌಡ ಸೇರಿದಂತೆ ಮಹಿಳೆಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ರಾಹ್ಮಣ ಸಮುದಾಯಕ್ಕೆ ಯೋಜನೆಗಳಿದ್ದರೂ ಅರ್ಜಿ ಕುಂಠಿತ: ಪಿ.ಎಂ. ಮಾಲತೇಶ
ಚಾರಣಕ್ಕೆ ತೆರಳಿದ್ದ ಯುವತಿಯ ಸುಳಿವು ಅಲಭ್ಯ