ಮಹದೇವಪ್ಪ ಎಂ. ಸ್ವಾಮಿ
ಮಕ್ಕಳಂತೂ ಬಿಸಿಲಿಗೆ ಬೆದರಿ ಮನೆ ಸೇರಿದರೆ ಹಿರಿಯರು, ವೃದ್ಧರು, ಅನಾರೋಗ್ಯ ಪೀಡಿತರ ಸಮಸ್ಯೆಯಂತೂ ಕೇಳುವವರೇ ಇಲ್ಲದಂತಾಗಿದೆ. ಊಟ, ತಿಂಡಿ ಏನೇ ತಿಂದರೂ ಅರಗಿಸಿಕೊಳ್ಳಲು ಸಾಕಷ್ಟು ವೇಳೆ ಹಿಡಿಯುತ್ತದೆ. ದೇಹ ತಂಪಾಗಿಸಲು ತಂಪು ಪಾನೀಯ, ಕಲ್ಲಂಗಡಿ, ಕಬ್ಬಿನ ಹಾಲು, ಎಳನೀರಿಗೆ ಸಾರ್ವಜನಿಕರು ಮುಗಿ ಬೀಳುತ್ತಿದ್ದಾರೆ.
ಮಾಹಿತಿ ಪ್ರಕಾರ ಈಗಾಗಲೇ ಗರಿಷ್ಠ ೩೫ ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನವಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಡಿಕೆಯಂತೆ ಮಾರ್ಚ್ ಕೊನೆಯಲ್ಲಿ ಬೇಸಿಗೆ ಕಾಲ ಆರಂಭವಾಗಿ ಬಿಸಿಲಿನ ತೀವ್ರತೆ ಹೆಚ್ಚಾಗುವುದು ಸಾಮಾನ್ಯ.ಶಿವರಾತ್ರಿ ನಂತರದ ದಿನಗಳಲ್ಲಿ ದಿನೇ ದಿನೇ ಬಿಸಿಲಿನ ಝಳ ಮತ್ತಷ್ಟು ಪ್ರಖರತೆ ಪಡೆದುಕೊಂಡಿದ್ದು, ಜನರು ರೋಸಿ ಹೋಗಿದ್ದಾರೆ. ತಾಲೂಕು ಕಾದ ಕಾವಲಿಯಂತಾಗಿದ್ದು, ನಗರವಾಸಿಗಳು ಹಗಲು ರಾತ್ರಿ ಎನ್ನದೆ ಫ್ಯಾನ್, ಕೂಲರ್‌ಗಳ ಮೊರೆ ಹೋಗಿದ್ದಾರೆ. ಹವಾಮಾನ ಬದಲಾವಣೆಯಿಂದ ಪರಿಸರದಲ್ಲಿ ಉಷ್ಣಾಂಶದ ಪ್ರಖರತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
ತಾಲೂಕಿನಲ್ಲಿ ದಾಖಲೆ ಪ್ರಮಾಣದಲ್ಲಿ ಉಷ್ಣಾಂಶ ಕಂಡುಬರುತ್ತಿದೆ. ತಂಗಾಳಿ ಮರೀಚಿಕೆಯಾಗಿದೆ. ಮುಂಜಾನೆ ೮ರಿಂದಲೇ ಬಿಸಿಲಿನ ಪ್ರಖರತೆ ಹೆಚ್ಚುತ್ತಲಿದೆ. ಮಧ್ಯಾಹ್ನದ ಹೊತ್ತಿಗೆ ಬೆಂಕಿಯ ಎದುರು ಕುಳಿತಂತೆ ಭಾಸವಾಗುತ್ತದೆ. ಗ್ರಾಮಗಳಲ್ಲಿ ಗಿಡ, ಮರ, ತೋಟಗಳನ್ನು ತಾತ್ಕಾಲಿಕವಾಗಿ ಆಶ್ರಯ ತಾಣಗಳನ್ನಾಗಿ ಮಾಡಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಕಡಕೋಳ ಗ್ರಾಮದ ರೈತ ತೋಟಪ್ಪ ಸೊನ್ನದ.