ಹಗರಿಬೊಮ್ಮನಹಳ್ಳಿ: ತಂತ್ರಜ್ಞಾನ ಕ್ಷೇತ್ರದಿಂದ ರಕ್ಷಣಾ ಕೇತ್ರದವರೆಗೂ ಪ್ರತಿ ಕ್ಷೇತ್ರದಲ್ಲೂ ಮಹಿಳೆಯರಿಂದ ಗಮನಾರ್ಹ ಸಾಧನೆಗಳು ವ್ಯಕ್ತವಾಗುತ್ತಿವೆ. ದೇಶದಲ್ಲಿ ಮಹಿಳಾ ಅಸ್ಮಿತೆ ಎಲ್ಲೆಡೆ ಅನುರಣಿಸುತ್ತಿದೆ. ಹೆಣ್ಣು ಅಡುಗೆ ಮನೆಗೆ ಮಾತ್ರ ಸೀಮಿತ ಎನ್ನುವ ಮನುವಾದಿಗಳ ಮೂದಲಿಕೆಗಳು ಇಂದಿನ ದಿನಗಳಲ್ಲಿ ಅಪ್ರಸ್ತುತ ಎಂದು ಹೂವಿನಹಡಗಲಿಯ ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಮುಖ್ಯಸ್ಥೆ ಎಂ.ಪಿ. ವೀಣಾ ಮಹಾಂತೇಶ್ ಪ್ರತಿಪಾದಿಸಿದರು.
ಈ ಹಿಂದೆ ಹೆಣ್ಣು ಮಕ್ಕಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹೋರಾಟ ನೆಡಸುವ ಕಾಲವಿತ್ತು. ಕುಟುಂಬ ಮತ್ತು ಸಮಾಜದೊಂದಿಗೆ ನಿರಂತರವಾಗಿ ಸೆಣಸಾಡಿ ಆಸ್ತಿತ್ವ ಸಾಬೀತು ಪಡಿಸುವ ಅಗತ್ಯವಿತ್ತು. ನಿರಂತರವಾಗಿ ವೈಚಾರಿಕ ನೆಲೆಗಟ್ಟಿನಲ್ಲಿ ಸಂಘರ್ಷ ನಡೆಸಿ ಬದುಕು ಕಟ್ಟಿಕೊಂಡ ಮಹಿಳೆಯರು ನಮ್ಮ ನಡುವೆಯೇ ಉಸಿರಾಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಸ್ವಾತಂತ್ರ್ಯಾನಂತರ ಡಾ.ಅಂಬೇಡ್ಕರ್ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಿ ಹೆಣ್ಣು ಮಕ್ಕಳ ಬದುಕಿಗೆ ನೆರವಾದರು. ಮನುವಾದಿಗಳು ಈಗಲೂ ಹೆಣ್ಣು ಮಕ್ಕಳನ್ನು ಬಸವ ಪೂರ್ವ ಯುಗಕ್ಕೆ ಒಯ್ಯಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಮಹಿಳೆಯರ ಸಬಲೀಕರಣ, ಲಿಂಗ ಸಮಾನತೆ, ಮಹಿಳೆಯರ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಮನುವಾದಿಗಳನ್ನು ಹಿಮ್ಮೆಟ್ಟಿಸಬೇಕಾಗಿದೆ ಎಂದು ಕೋರಿದರು.ಪ್ರತಿ ರಂಗದಲ್ಲೂ ಪುರುಷರಿಗೆ ಸಮಾನವಾಗಿ ದುಡಿಯುವ ಈ ಕಾಲದಲ್ಲೂ ಸಮಾಜದಲ್ಲಿ ಲಿಂಗ ಸಮಾನತೆ, ಮಹಿಳೆಯರ ಮೇಲಿನ ದೌರ್ಜನ್ಯಗಳು ಇನ್ನು ನಡೆಯುತ್ತಿವೆ. ಸುರಕ್ಷಿತ ಪರಿಸರ ಮತ್ತು ಪೂರಕ ಶಿಕ್ಷಣ ಒದಗಿಸುವ ಪ್ರಯತ್ನಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ನಾನಾ ಕ್ಷೇತ್ರಗಳಲ್ಲಿ ಗಮನಾರ್ಹ ಸಾದನೆ ಮಾಡಿರುವ ಮಹಿಳೆಯರನ್ನು ಗೌರವಿಸಲಾಯಿತು. ರಾಮವ್ವ ಜೋಗುತಿ ಅಧ್ಯಕ್ಷತೆ ವಹಿಸಿದ್ದರು.