ಜಾನುವಾರುಗಳ ಸಂರಕ್ಷಣೆಗೆ ಸರ್ಕಾರಕ್ಕೆ ಪತ್ರ ಬರೆಯಲು ತೀರ್ಮಾನ

KannadaprabhaNewsNetwork |  
Published : Sep 10, 2025, 01:04 AM IST
ಪ್ರಾಣಿ ದಯಾಸಂಘ ಮಹಾಸಭೆ | Kannada Prabha

ಸಾರಾಂಶ

ತಾಲೂಕಿನ ಕೆ. ನಿಡುಗಣೆ ಬಳಿ ಸರ್ಕಾರಿ ಗೋ ಶಾಲೆಯಲ್ಲಿ 37 ಜಾನುವಾರುಗಳ ಸಂರಕ್ಷಣೆಗೆ ಮಾತ್ರ ಅವಕಾಶವಿದ್ದು ಇನ್ನೂ ಹೆಚ್ಚಿನ ಜಾನುವಾರುಗಳ ಸಂರಕ್ಷಣೆಗೆ ಒತ್ತು ನೀಡುವಲ್ಲಿ ಸರ್ಕಾರಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ತಾಲೂಕಿನ ಕೆ.ನಿಡುಗಣೆ ಬಳಿ ಸರ್ಕಾರಿ ಗೋಶಾಲೆಯಲ್ಲಿ 37 ಜಾನುವಾರುಗಳ ಸಂರಕ್ಷಣೆಗೆ ಮಾತ್ರ ಅವಕಾಶವಿದ್ದು, ಇನ್ನೂ ಹೆಚ್ಚಿನ ಜಾನುವಾರುಗಳ ಸಂರಕ್ಷಣೆಗೆ ಒತ್ತು ನೀಡುವಲ್ಲಿ ಸರ್ಕಾರಕ್ಕೆ ಪತ್ರ ಬರೆಯಲು ಪ್ರಾಣಿ ದಯಾಸಂಘ ಮಹಾಸಭೆಯಲ್ಲಿ ತೀರ್ಮಾನಿಸಲಾಯಿತು. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಾಣಿ ದಯಾಸಂಘ ಮಹಾಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.ಈ ಕುರಿತು ವಿಷಯ ಪ್ರಸ್ತಾಪಿಸಿದ ಪ್ರಾಣಿ ದಯಾ ಸಂಘದ ಸಮಿತಿ ಸದಸ್ಯರಾದ ಹರೀಶ್ ಆಚಾರ್ಯ ಅವರು ಕೆ.ನಿಡುಗಣೆ ಬಳಿಯ ಸರ್ಕಾರಿ ಗೋಶಾಲೆಯಲ್ಲಿ 37 ಜಾನುವಾರುಗಳ ಸಂರಕ್ಷಣೆಗೆ ಅವಕಾಶವಿದ್ದು, ಈಗಾಗಲೇ 2 ಎಕರೆಯಲ್ಲಿ ಮಾತ್ರ ಗೋಶಾಲೆ ಮಾಡಲಾಗಿದೆ. ಉಳಿದ 6 ಎಕರೆಯಲ್ಲಿಯೂ ಸಹ ತಂತಿ ಬೇಲಿ ನಿರ್ಮಾಣ ಮಾಡಿ ಹೆಚ್ಚಿನ ಗೋ ಸಾಕಾಣಿಕೆಗೆ ಅವಕಾಶ ಮಾಡಬೇಕು ಎಂದು ಅವರು ಮನವಿ ಮಾಡಿದರು.ರಾಷ್ಟ್ರೀಯ ಹೆದ್ದಾರಿಯ ಜೋಡುಪಾಲ, ದೇವರಕೊಲ್ಲಿ, ಕೊಯನಾಡು ಕಡೆಗಳಲ್ಲಿ ಬಿಡಾಡಿ ಜಾನುವಾರುಗಳು ಇದ್ದು, ಅವುಗಳನ್ನು ಗೋಶಾಲೆಗೆ ಸ್ಥಳಾಂತರಿಸಬೇಕಿದೆ. ಹೀಗೆ ಜಿಲ್ಲೆಯಾದ್ಯಂತ ಬಿಡಾಡಿ ಜಾನುವಾರುಗಳನ್ನು ಗೋಶಾಲೆಗೆ ಸ್ಥಳಾಂತರಿಸಿ ಮೇವು, ನೀರು ಒದಗಿಸಬೇಕಿದೆ ಎಂದು ಹರೀಶ್ ಆಚಾರ್ಯ ಅವರು ಕೋರಿದರು.

ಶೆಡ್ ನಿರ್ಮಾಣ ಮಾಡಬೇಕು:

ಜೊತೆಗೆ 37 ಜಾನುವಾರುಗಳಿಗೆ ಮಾತ್ರ ಶೆಡ್ ನಿರ್ಮಾಣ ಮಾಡಲಾಗಿದ್ದು, ಇನ್ನೂ ಹೆಚ್ಚಿನ ಜಾನುವಾರುಗಳ ಸಾಕಾಣಿಕೆಗೆ ಶೆಡ್ ನಿರ್ಮಾಣ ಮಾಡಬೇಕು ಎಂದು ಹರೀಶ್ ಆಚಾರ್ಯ ಅವರು ಕೋರಿದರು. ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಕೆ.ನಿಡುಗಣೆಯ ಸರ್ಕಾರಿ ಗೋಶಾಲೆಯಲ್ಲಿ 8 ಎಕರೆ ಜಾಗ ನಿಗದಿಯಾಗಿದ್ದು, ಈ ಎಲ್ಲಾ ಜಾಗವನ್ನು ಬಳಸಿಕೊಳ್ಳಲು ತಂತಿ ಬೇಲಿ ನಿರ್ಮಾಣ ಹಾಗೂ ಶೆಡ್ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅವರು ನಿರ್ದೇಶನ ನೀಡಿದರು. 8 ಎಕರೆ ಜಾಗದಲ್ಲಿ ತಂತಿ ಬೇಲಿ ಅಳವಡಿಸುವ ಕಾರ್ಯವು ಒಂದು ತಿಂಗಳಲ್ಲಿ ಆಗಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಜಾನುವಾರುಗಳ ಸಂರಕ್ಷಣೆ ಅತ್ಯಗತ್ಯ:

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಬಿಡಾಡಿ ಜಾನುವಾರುಗಳು ಇದ್ದು, ಎಲ್ಲೆಂದರಲ್ಲಿ ಓಡಾಡುವುದರಿಂದ ಅಪಘಾತಗಳು ಸಂಭವಿಸುತ್ತವೆ. ಆದ್ದರಿಂದ ಜಾನುವಾರುಗಳ ಸಂರಕ್ಷಣೆ ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಕಾಳಜಿ ವಹಿಸಬೇಕು ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದ್ದು, ಇವುಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸುವಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದರು. ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರಿಗೆ ಓಡಾಡುವುದು ಕಷ್ಟಸಾಧ್ಯವಾಗಿದೆ. ಇವುಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಬೇಕು. ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಬೀದಿನಾಯಿಗಳಿಗೆ ರೇಬಿಸ್ ಲಸಿಕೆ ಹಾಕಿಸಲು ಕ್ರಮವಹಿಸುವಂತೆ ಪಶುಪಾಲನಾ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು. ಬೀದಿನಾಯಿಗಳ ಹಾವಳಿ ನಿಯಂತ್ರಣ ಸಂಬಂಧ ಸ್ಥಳೀಯ ಸಂಸ್ಥೆಗಳಲ್ಲೂ ಸಹ ಅವಕಾಶವಿದ್ದು, ಈ ಸಂಬಂಧ ಸ್ಥಳೀಯ ಸಂಸ್ಥೆಗಳು ಮತ್ತು ಇಲಾಖೆ ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ನಿರ್ದೇಶನ ನೀಡಿದರು. 21 ಸಾವಿರ ರೇಬಿಸ್ ಲಸಿಕೆ ಪೂರೈಕೆ:

ಈ ಸಂದರ್ಭದಲ್ಲಿ ಮಾತನಾಡಿದ ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಡಾ.ಲಿಂಗರಾಜ ದೊಡ್ಡಮನಿ ಅವರು ಜಿಲ್ಲೆಯಾದ್ಯಂತ ಸೆಪ್ಟೆಂಬರ್, 28 ರಿಂದ ಅಕ್ಟೋಬರ್, 28 ರವರೆಗೆ ಒಂದು ತಿಂಗಳ ಕಾಲ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಲಾಗುತ್ತದೆ. ಈ ಸಂಬಂಧ ಜಿಲ್ಲೆಗೆ 21 ಸಾವಿರ ರೇಬಿಸ್ ಲಸಿಕೆ ಪೂರೈಕೆಯಾಗಿದೆ ಎಂದು ತಿಳಿಸಿದರು. . ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಒಳಪಡಿಸುವ ಸಂಬಂಧ 5 ಬಾರಿ ಟೆಂಡರ್ ಕರೆಯಲಾಗಿದ್ದು, ಯಾರೂ ಸಹ ಭಾಗವಹಿಸುತ್ತಿಲ್ಲ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕರು ಸಭೆಯ ಗಮನಕ್ಕೆ ತಂದರು. ಸ್ಥಳೀಯ ಸಂಸ್ಥೆಗಳಲ್ಲೂ ಸಹ ಮ್ಯಾಚಿಂಗ್ ಫಂಡ್ ಇದ್ದು, ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಮುಂದಾಗುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು. ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ಕೃಷ್ಣಪ್ಪ ಅವರು ಮಾತನಾಡಿ, ಕಾಲೇಜು ರಸ್ತೆ ಬಳಿ ಜಾನುವಾರುಗಳು ಉಪಯೋಗಿಸುವ ಬಾಳೆಕಾಯಿಗೆ ಸೊಳ್ಳೆ ಉತ್ಪತ್ತಿ ಆಗುತ್ತಿದೆ ಎಂದು ಬಾಳೆಕಾಯಿಗೆ ಮಣ್ಣು ಹಾಕುತ್ತಾರೆ. ಈ ಬಗ್ಗೆ ಗಮನಹರಿಸಬೇಕು ಎಂದು ಸಭೆಯ ಗಮನಕ್ಕೆ ತಂದರು. ಸಮಿತಿ ಸದಸ್ಯರಾದ ರೇಗನ್ ಮಾತನಾಡಿ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೀದಿನಾಯಿಗಳನ್ನು ಹಿಡಿದು ನಾಗರಹೊಳೆ ವ್ಯಾಪ್ತಿಗೆ ಬಿಡುವುದು ಎಷ್ಟು ಸರಿ ಎಂದು ಗಮನ ಸೆಳೆದರು. ಪ್ರಾಣಿ ದಯಾಸಂಘದ ಸದಸ್ಯರಾದ ಶಿವಶಂಕರ ಅವರು ಜಾನುವಾರುಗಳಿಗೆ ಸ್ಥಳೀಯವಾಗಿಯೇ ಮೇವು ಖರೀದಿಸಲು ಮುಂದಾಗಬೇಕು ಎಂದು ಸಲಹೆ ಮಾಡಿದರು. ಸಮಿತಿ ಸದಸ್ಯರಾದ ಗಿರೀಶ್ ತಾಳತ್ತ್ಮನೆ, ಡಾ.ಕೆ.ಪಿ.ಅಯ್ಯಪ್ಪ ಅವರು ಬೀದಿನಾಯಿಗಳ ಹಾವಳಿ ನಿಯಂತ್ರಣ ಹಾಗೂ ಜಾನುವಾರುಗಳಿಗೆ ಮೇವು ಪೂರೈಕೆ ಮತ್ತಿತರ ಬಗ್ಗೆ ಹಲವು ಸಲಹೆ ನೀಡಿದರು. ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಪ್ರಸನ್ನ, ಡಾ.ನವೀನ್, ಡಾ.ಗಿರೀಶ್, ಡಾ.ಸಂಜೀವ್ ಕುಮಾರ್ ಸಿಂಧೆ, ಡಾ.ರಾಜಾಶೇಖರ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ