ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆ ಮಾಡುವ ಕುರಿತು ಶುಕ್ರವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಮ್ಮ ತಾಲೂಕು ಬರ ಪೀಡಿತ ತಾಲೂಕುಗಳ ಪಟ್ಟಿಗೆ ಸೇರುವುದು ಶೇ.200ರಷ್ಟು ಖಚಿತ ಎಂದು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆ ಮಾಡುವ ಕುರಿತು ಶುಕ್ರವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಮ್ಮ ತಾಲೂಕು ಬರ ಪೀಡಿತ ತಾಲೂಕುಗಳ ಪಟ್ಟಿಗೆ ಸೇರುವುದು ಶೇ.200ರಷ್ಟು ಖಚಿತ ಎಂದು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈ ಹಿಂದೆ ಜನತೆಗೆ ನೀಡಿದ ಭರವಸೆಯಂತೆ ಮುದ್ದೇಬಿಹಾಳ ಕ್ಷೇತ್ರದಲ್ಲಿನ ಬರ ಪರಿಸ್ಥಿತಿಯ ಸಮಗ್ರ ಮಾಹಿತಿಯನ್ನು ಮುಖ್ಯಮಂತ್ರಿಗಳನ್ನು ನೇರವಾಗಿ ಭೇಟಿ ಮಾಡಿ ನೀಡಲಾಗಿದೆ. ಈ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿ ಕ್ಷೇತ್ರದ ಬರ ಪರಿಸ್ಥಿತಿ ಹಾಗೂ ಸಲ್ಲಿಸಿರುವ ವರದಿ ಕುರಿತು ಮುಖ್ಯಮಂತ್ರಿಗಳು ಮಾಹಿತಿ ಪಡೆದಿದ್ದು, ಅಧಿಕಾರಿಗಳು ಕೂಡ ವರದಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ರೈತರ ಹೆಸರಿನಲ್ಲಿ ರಾಜಕೀಯ ಮಾಡಬೇಡಿ:
ತಾಲೂಕಿನಲ್ಲಿ ಕೆಲವರು ರೈತರ ಹೆಸರಿನಲ್ಲಿ ಹಸಿರು ಶಾಲು ಧರಿಸಿಕೊಂಡು ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಳ್ಳುವ ಷಡ್ಯಂತ್ರ ನಡೆಸುತ್ತಿದ್ದಾರೆ. ಇಂತಹವರ ಮಾತಿಗೆ ರೈತರು ಕಿವಿಗೊಡಬಾರದು ಎಂದು ನಾಡಗೌಡ ಹೇಳಿದರು.
ರೈತ ನಾಯಕ ಎಂಬ ಸ್ವಯಂಘೋಷಿತ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಕೆಲವರು ತಮ್ಮ ವೈಯಕ್ತಿಕ ಸಂಕಷ್ಟಗಳಿಗೆ ರೈತರ ಹೆಸರನ್ನು ಬಳಸಿಕೊಂಡು ಪರಿಹಾರ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಈ ಹಿಂದೆ ಸಾಕಷ್ಟು ಉದಾಹರಣೆಗಳಿವೆ. ಹೀಗಾಗಿ ರೈತರ ಹಿತದ ಹೆಸರಿನಲ್ಲಿ ನಡೆಯುವ ರಾಜಕೀಯ ಹೋರಾಟಗಳನ್ನು ರೈತರು ಎಚ್ಚರಿಕೆಯಿಂದ ಗಮನಿಸಬೇಕು ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರ ಹೋರಾಟದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ರೈತ ಕುಟುಂಬಗಳಿಗೆ ಸರ್ಕಾರದ ಪರಿಹಾರ ತಲುಪಿಸಲು ಪ್ರಯತ್ನ:
ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲೂಕು ವ್ಯಾಪ್ತಿಯಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರು ಹಾಗೂ ಹಾವು ಕಡಿತ, ವಿದ್ಯುತ್ ಆಘಾತದಿಂದ ಮೃತಪಟ್ಟ ಕೃಷಿಕರು ಮತ್ತು ಕಾರ್ಮಿಕರ ಕುಟುಂಬಗಳಿಗೆ ಸರ್ಕಾರದಿಂದ ದೊರೆಯಬೇಕಾದ ಪರಿಹಾರ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿ, ಫಲಾನುಭವಿಗಳಿಗೆ ಪರಿಹಾರ ದೊರಕುವಂತೆ ಮಾಡಲಾಗಿದೆ ಎಂದು ನಾಡಗೌಡ ತಿಳಿಸಿದರು.
2025ರ ಏಪ್ರಿಲ್ 1ರಿಂದ 2026ರ ಮಾರ್ಚ್ 31ರವರೆಗೆ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕುಗಳಲ್ಲಿ ಸಾಲಬಾಧೆಯಿಂದ ಒಟ್ಟು 9 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುಟುಂಬಗಳಿಗೆ ಸರ್ಕಾರದ ನಿಯಮಾನುಸಾರ ದೊರೆಯಬೇಕಾದ ಪರಿಹಾರ ಒದಗಿಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಿರಂತರವಾಗಿ ಪ್ರಯತ್ನಿಸಲಾಗಿದೆ ಎಂದರು.
ಹಾವು ಕಡಿತ, ವಿದ್ಯುತ್ ಆಘಾತದ ಪ್ರಕರಣಗಳಲ್ಲೂ ಸ್ಪಂದನೆ:
ಇದೇ ಅವಧಿಯಲ್ಲಿ ಆಕಸ್ಮಿಕವಾಗಿ ಮೃತಪಟ್ಟ ಕೃಷಿಕರು ಹಾಗೂ ಕಾರ್ಮಿಕರ ಕುಟುಂಬಗಳಿಗೂ ಸರ್ಕಾರದ ಪರಿಹಾರ ದೊರಕಿಸಲು ಪ್ರಯತ್ನಿಸಲಾಗಿದೆ. ತಮದಡ್ಡಿಯ ಹಣಮಂತ್ರಾಯ ಕುಂಟರೆಡ್ಡಿ ಅವರು ವಿದ್ಯುತ್ ಮೋಟಾರ್ ಚಾಲನೆ ಮಾಡುವ ಸಂದರ್ಭದಲ್ಲಿ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.
ಹಾವು ಕಡಿತದಿಂದ ಜಕ್ಕೇರಾಳ ಗ್ರಾಮದ ರವಿ ಹಂದ್ರ್ಯಾಳ, ಕಾಳಗಿ ಗ್ರಾಮದ ಸಾಯಬೀ ನಾಯ್ಕೋಡಿ ಹಾಗೂ ಸಿದ್ದಾಪುರ ಗ್ರಾಮದ ಗಂಗಪ್ಪ ಗುರಿಕಾರ ಮೃತಪಟ್ಟಿದ್ದಾರೆ. ಈ ಎಲ್ಲ ಪ್ರಕರಣಗಳಲ್ಲಿಯೂ ಮೃತರ ಕುಟುಂಬಗಳಿಗೆ ಸರ್ಕಾರದಿಂದ ದೊರೆಯಬೇಕಾದ ಪರಿಹಾರ ಒದಗಿಸಲು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗಿದೆ. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸರ್ಕಾರದ ನೆರವು ತಲುಪಿಸುವುದು ತಮ್ಮ ಜವಾಬ್ದಾರಿಯಾಗಿದ್ದು, ಮುಂದೆಯೂ ಇಂತಹ ಪ್ರಕರಣಗಳಲ್ಲಿ ಕುಟುಂಬಗಳ ಪರವಾಗಿ ನಿರಂತರವಾಗಿ ಸ್ಪಂದಿಸುವುದಾಗಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಭರವಸೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.