ದೇವರಹಿಪ್ಪರಗಿ ತಾಲೂಕಿನ ವಿವಿಧ ಸಮುದಾಯಗಳ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮ ನಡೆಸಲು ಅನುಕೂಲವಾಗುವಂತೆ ಸುಸಜ್ಜಿತ ಡಾ.ಅಂಬೇಡ್ಕರ್ ಭವನ ನಿರ್ಮಿಸಬೇಕೆಂಬುದು ಸಾರ್ವಜನಿಕರ ದಶಕಗಳ ಕನಸು ಕನಸಾಗಿಯೇ ಉಳಿದಿದ್ದು, ₹2 ಕೋಟಿ ಅನುದಾನದಲ್ಲಿ ಭವನ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದ್ದು, ಹೆಚ್ಚಿನ ಅನುದಾನಕ್ಕೆ ಸ್ಥಳೀಯ ಮುಖಂಡರು ಪಟ್ಟುಹಿಡಿದಿರುವುದರಿಂದ ಕಟ್ಟಡ ನಿರ್ಮಾಣ ನನೆಗುದಿಗೆ ಬಿದ್ದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮಲ್ಲಿಕಾರ್ಜುನ ಪಟ್ಟಣಶೆಟ್ಟಿ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿತಾಲೂಕಿನ ವಿವಿಧ ಸಮುದಾಯಗಳ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮ ನಡೆಸಲು ಅನುಕೂಲವಾಗುವಂತೆ ಸುಸಜ್ಜಿತ ಡಾ.ಅಂಬೇಡ್ಕರ್ ಭವನ ನಿರ್ಮಿಸಬೇಕೆಂಬುದು ಸಾರ್ವಜನಿಕರ ದಶಕಗಳ ಕನಸು ಕನಸಾಗಿಯೇ ಉಳಿದಿದ್ದು, ₹2 ಕೋಟಿ ಅನುದಾನದಲ್ಲಿ ಭವನ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದ್ದು, ಹೆಚ್ಚಿನ ಅನುದಾನಕ್ಕೆ ಸ್ಥಳೀಯ ಮುಖಂಡರು ಪಟ್ಟುಹಿಡಿದಿರುವುದರಿಂದ ಕಟ್ಟಡ ನಿರ್ಮಾಣ ನನೆಗುದಿಗೆ ಬಿದ್ದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.ಈಗಾಗಲೇ ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ವಿಷಯ ತಂದಿದ್ದರೂ ಭವನ ನಿರ್ಮಾಣ ಕಾಮಗಾರಿ ಆರಂಭವಾಗಿಲ್ಲ. ಹೆಚ್ಚುವರಿ ಅನುದಾನ ಮಂಜೂರು ಮಾಡಿ ಅಡ್ಡಿಯಾಗಿರುವ ಸಮಸ್ಯೆಗಳನ್ನು ಪರಿಹರಿಸಿ ಕಾಮಗಾರಿ ಕೂಡಲೇ ಆರಂಭಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
₹2 ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣ:ಡಾ.ಅಂಬೇಡ್ಕರ್ ಭವನವನ್ನು ಸುಮಾರು ₹2 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಯೋಜನೆಯಿದ್ದು, ಸರ್ಕಾರ ₹66 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಆದರೆ ಸುಸಜ್ಜಿತ ಭವನ ನಿರ್ಮಾಣಕ್ಕೆ ₹4-5 ಕೋಟಿ ಅನುದಾನದ ಬೇಡಿಕೆಯಿದ್ದು, ಭವನ ನಿರ್ಮಾಣ ಕಾರ್ಯ ಹಲವು ತಿಂಗಳಿಂದ ನನೆಗುದಿಗೆ ಬಿದ್ದಿದೆ. ಭವನ ನಿರ್ಮಾಣಕ್ಕೆ ಬಿಡುಗಡೆಯಾದ ₹66 ಲಕ್ಷ ಖಜಾನೆಯಲ್ಲಿ ಕೊಳೆಯುತ್ತಿದೆ. ಸದ್ಯಕ್ಕೆ ಭವನ ನಿರ್ಮಾಣ ಆಗುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಭವನದಲ್ಲಿ ಏನೇನು ಇರಲಿದೆ?₹2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಟ್ಟಡದಲ್ಲಿ ನೆಲ ಮಹಡಿಯಲ್ಲಿ ಊಟದ ಸಭಾಂಗಣ, ಕಚೇರಿ ಕೊಠಡಿ, ಪ್ರವೇಶಲಾಬಿ, ವಾಹನ ನಿಲುಗಡೆ ವ್ಯವಸ್ಥೆ, ಅಡುಗೆ ಮನೆ ಹಾಗೂ ಸಾಮಗ್ರಿ ಇಡುವ ಸ್ಥಳ, ಕೈ ತೊಳೆಯುವ ಸ್ಥಳ, ಕಚೇರಿ ಕೊಠಡಿ ಜತೆಗೆ ಎರಡು ಬದಿಯಲ್ಲಿ ಮೆಟ್ಟಿಲು ಹಾಗೂ ವಿಕಲಚೇತನರ ಪ್ರವೇಶ ಮೆಟ್ಟಿಲು, ಮೊದಲ ಮಹಡಿಯಲ್ಲಿ ಸಭಾಂಗಣ ನಿರ್ಮಾಣವಾಗಬೇಕಿದೆ. ಇದರಲ್ಲಿ ಸುಸಜ್ಜಿತ ವೇದಿಕೆ, ಸಾವಿರ ಮಂದಿ ಕುಳಿತುಕೊಳ್ಳುವ ಸ್ಥಳಾವಕಾಶದ ಸಭಾಭವನ, ಪಾಕಶಾಲೆ, ಊಟದ ಹಾಲ್, ಸ್ನಾನಗೃಹ, ಪುರುಷ ಹಾಗೂ ಮಹಿಳಾ ಡ್ರೆಸ್ಸಿಂಗ್ ರೂಮ್ ಮತ್ತು ಶೌಚಾಲಯ, ಛಾವಣಿ ಸಹಿತ ಅತ್ಯಾಧುನಿಕ ವ್ಯವಸ್ಥೆಗಳು ಇರಲಿವೆ. ಸುಸಜ್ಜಿತ ಭವನ ನಿರ್ಮಾಣ ನಮ್ಮ ಕನಸಾಗಿದ್ದು, ಆದಷ್ಟು ಶೀಘ್ರ ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ತಿಳಿಸಿದ್ದಾರೆಬಹುವರ್ಷಗಳ ನಂತರ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಅವರ ನೇತೃತ್ವದಲ್ಲಿ ತಾಲೂಕು ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಆಗುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಆದಷ್ಟು ಬೇಗ ಅಂಬೇಡ್ಕರ್ ಭವನ ನಿರ್ಮಿಸಿ, ಶುಭ ಸಮಾರಂಭಗಳು ಸೇರಿ ಎಲ್ಲ ಕಾರ್ಯಕ್ರಮಗಳು ನಡೆಯುವಂತೆ ಸಕಲ ವ್ಯವಸ್ಥೆ ಕಲ್ಪಿಸಬೇಕಿದೆ. ಯಾರ ಒತ್ತಾಯಕ್ಕೆ ಮಣಿಯದೆ ಸರ್ಕಾರ ಆದಷ್ಟು ಬೇಗ ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕು
-ರಾಘವೇಂದ್ರ ಗುಡಿಮನಿ ಅಧ್ಯಕ್ಷರು. ಜೆಡಿಎಸ್ ಎಸ್ಸಿ, ಎಸ್ಟಿ ತಾಲೂಕು ಘಟಕ ದೇವರಹಿಪ್ಪರಗಿ----- ಕೋಟ್ 2ಪಟ್ಟಣದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಗತ್ಯ ಜಾಗ ಲಭ್ಯವಿದ್ದು, ಭವನ ನಿರ್ಮಾಣಕ್ಕೆ ಸರ್ಕಾರ ₹2 ಕೋಟಿ ವೆಚ್ಚದ ಯೋಜನೆಗೆ ಸರ್ಕಾರ ಅನುಮತಿ ನೀಡಿದೆ. ಇನ್ನೂ ಹೆಚ್ಚಿನ ಅನುದಾನ ನೀಡಬೇಕೆಂಬುದು ಸಮುದಾಯದ ಜನರ ಒತ್ತಾಯವಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಮ್ಮ ಬೇಡಿಕೆಗೆ ಸ್ಪಂದಿಸಿ ಹೆಚ್ಚಿನ ಅನುದಾನ ನೀಡಲು ಸರ್ಕಾರದ ಮೇಲೆ ಒತ್ತಡ ಹೇರಬೇಕು.
- ಪ್ರಕಾಶ ಗುಡಿಮನಿ ಜಿಲ್ಲಾ ಸಂಚಾಲಕರು ಕ.ದ.ಸಂ.ಸ ದೇವರಹಿಪ್ಪರಗಿಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಬೇಕಿರುವ ₹2 ಕೋಟಿ ಪೈಕಿ, ₹66 ಲಕ್ಷ ಅನುದಾನ ಬಿಡುಗಡೆ ಆಗಿದೆ. ಉಳಿದ ಅನುದಾನ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಬೇಕಿದೆ. ಸ್ಥಳೀಯ ಜನರ ಒತ್ತಾಯದ ಮೇರೆಗೆ ಇನ್ನೂ ₹2 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ.
-ಮಹೇಶ ಪೋತದಾರ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ವಿಜಯಪುರಜನರ ಬಹುದಿನದ ಬೇಡಿಕೆಯಾದ ಡಾ.ಬಿ.ಆರ್.ಅಂಬೇಡ್ಕರ್ ಭವನ ಕೇವಲ ಕಟ್ಟಡ ಆಗಿರದೆ ಸಂವಿಧಾನ ಶಿಲ್ಪಿಯ ಚಿಂತನೆ, ಆದರ್ಶಗಳು, ಅಭಿವೃದ್ಧಿಪರ, ಪ್ರಗತಿಪರ ಚಟುವಟಿಕೆಗಳು ನಡೆಯುವ ಪವಿತ್ರ ಸ್ಥಳ ಆಗಲಿದೆ. ಅದನ್ನು ಪಟ್ಟಣದಲ್ಲಿ ನಿರ್ಮಿಸುವುದರಿಂದ ಜನ ಸಾಮಾನ್ಯರಿಗೆ ಹತ್ತಿರ ಆಗಲಿದೆ. ತಾಲೂಕು ಭವನ ನಿರ್ಮಾಣಕ್ಕೆ ಸರ್ಕಾರದ ಮಾರ್ಗ ಸೂಚಿಯಂತೆ ₹2 ಕೋಟಿ ಅನುದಾನ ಮೀಸಲಿದ್ದು, ಇನ್ನೂ ಹೆಚ್ಚಿನ ಅನುದಾನ ತಂದು ಸುಸಜ್ಜಿತ ಭವನ ನಿರ್ಮಿಸಲಾಗುವುದು.
- ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ಶಾಸಕರು ದೇವರಹಿಪ್ಪರಗಿ