ಕಾಸಗರೋಡು ಬೇಕಲ್ ಗೋಕುಲಂ ಗೋಶಾಲೆಯ 2026ರ ‘ಪರಂಪರಾ ಪ್ರಶಸ್ತಿ’ಗಳನ್ನು ಘೋಷಿಸಲಾಗಿದೆ. ಪ್ರಸಿದ್ಧ ಸಂಗೀತಜ್ಞರೂ ಹರಿಕಥಾಕಾರರೂ ಪದ್ಮಭೂಷಣ ಪ್ರಶಸ್ತಿ ವಿಜೇತರೂ ಆದ ಟಿ. ಎನ್. ಶೇಷ ಗೋಪಾಲ್ ಅವರಿಗೆ ಈ ವರ್ಷದ ‘ಪರಂಪರಾ ವಿಭೂಷಣ’ ಪುರಸ್ಕಾರ ಲಭಿಸಿದೆ.

ಮಂಗಳೂರು: ಕಾಸಗರೋಡು ಬೇಕಲ್ ಗೋಕುಲಂ ಗೋಶಾಲೆಯ 2026ರ ‘ಪರಂಪರಾ ಪ್ರಶಸ್ತಿ’ಗಳನ್ನು ಘೋಷಿಸಲಾಗಿದೆ. ಪ್ರಸಿದ್ಧ ಸಂಗೀತಜ್ಞರೂ ಹರಿಕಥಾಕಾರರೂ ಪದ್ಮಭೂಷಣ ಪ್ರಶಸ್ತಿ ವಿಜೇತರೂ ಆದ ಟಿ. ಎನ್. ಶೇಷ ಗೋಪಾಲ್ ಅವರಿಗೆ ಈ ವರ್ಷದ ‘ಪರಂಪರಾ ವಿಭೂಷಣ’ ಪುರಸ್ಕಾರ ಲಭಿಸಿದೆ. ಇದು 61,000 ರುಪಾಯಿ ನಗದು ಮತ್ತು ತಾಮ್ರ ಫಲಕ ಒಳಗೊಂಡಿದೆ. ಕೇರಳದ ಅತ್ಯಂತ ಹಿರಿಯ ಪಿಟೀಲು ವಿದ್ವಾಂಸರಾದ ನೆದುಮಂಗಾಡ್ ಶಿವಾನಂದನ್ ಅವರು ‘ಪರಂಪರಾ ಭೂಷಣ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 51,000 ರುಪಾಯಿ ಮತ್ತು ತಾಮ್ರ ಫಲಕ ಒಳಗೊಂಡಿದೆ. ಪ್ರಸಿದ್ಧ ಮೃದಂಗ ವಿದ್ವಾಂಸ, ಬೆಂಗಳೂರಿನ ಆನೂರ್ ಅನಂತಕೃಷ್ಣ ಶರ್ಮಾ ಅವರಿಗೆ 41,000 ರುಪಾಯಿ ಮತ್ತು ತಾಮ್ರ ಫಲಕ ಒಳಗೊಂಡಿರುವ ‘ಪರಂಪರಾ ಶ್ರೀ’ ಪ್ರಶಸ್ತಿ ಲಭಿಸಲಿದೆ.

ಗಂಗಾ ಶಶಿಧರನ್‌ಗೆ ಬಾಲಪ್ರತಿಭಾ ಪುರಸ್ಕಾರ: ಪ್ರಸಿದ್ಧ ಗಾಯಕಿಯಾದ ಬಿಹಾರದ ಮೈಥಿಲಿ ಠಾಕೂರ್‌ಗೆ ‘ಪರಂಪರಾ ಯುವ ಪುರಸ್ಕಾರ’, ಪಿಟೀಲಿನಲ್ಲಿ ವಿಸ್ಮಯ ಸೃಷ್ಟಿಸುವ ಗಂಗಾ ಶಶಿಧರನ್ ‘ಬಾಲಪ್ರತಿಭಾ ಪುರಸ್ಕಾರ’ಕ್ಕೆ ಆಯ್ಕೆಯಾಗಿದ್ದಾರೆ. ಇವರಿಬ್ಬರಿಗೂ 25,000 ರು. ಮತ್ತು ತಾಮ್ರ ಫಲಕ ನೀಡಿ ಗೌರವಿಸಲಾಗುವುದು. ನವೆಂಬರ್ 10ರಿಂದ 22ರವ ರೆಗೆ ನಡೆಯಲಿರುವ ‘ದೀಪಾವಳಿ ಸಂಗೀತೋತ್ಸವ’ದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಗೋಶಾಲೆಯ ಸ್ಥಾಪಕ ವಿಷ್ಣುಪ್ರಸಾದ್ ಹೆಬ್ಬಾರ್ ತಿಳಿಸಿದ್ದಾರೆ.