ಹಾವೇರಿ ಜಿಲ್ಲೆಯಲ್ಲಿರುವ 12 ನೇ ಶತಮಾನದ ಪ್ರಗತಿಪರ ಚಿಂತನೆಗಳ ಅಂಬಿಗರ ಚೌಡಯ್ಯನವರ ನೆಲೆ ನಿಂತ ಚೌಡ ದಾನಾಪೂರ ಪ್ರವಾಸಿ ತಾಣವನ್ನಾಗಿ ಪ್ರಗತಿಪಡಿಸಬೇಕು, ಕಾಗಿನೆಲೆ, ಕೂಡಲ ಸಂಗಮ ಮಾದರಿಯಲ್ಲಿ ಚೌಡಯ್ಯನವರ ಹೆಸರಲ್ಲಿ ಅಭಿವೃದ್ಧಿ ಪ್ರಾಧಿಕಾರ ಘೋಷಿಸಬೇಕು, ಅದಕ್ಕೆ ₹100 ಕೋಟಿ ಅನುದಾನ ನೀಡಬೇಕು ಎಂದು ಕೋಲಿ, ಕಬ್ಬಲಿಗ ಸಮಾಜದ ಹಿರಿಯ ಮುಖಂಡರು, ಎಂಎಲ್‌ಸಿ ತಿಪ್ಪಣ್ಣ ಕಮಕನೂರ್ ಸದನದಲ್ಲಿಂದು ಆಗ್ರಹಿಸಿದ್ದಾರೆ.
ಕಾಗಿನೆಲೆ ಕನಕ ಗುರುಪೀಠದ ಪ್ರಾಧಿಕಾರ, ಕೂಡಲ ಸಂಗಮ ಬಸವಣ್ಣನರ ಐಕ್ಯಸ್ಥಳ ಅಭಿವೃದ್ಧಿ ಪಡಿಸಿದಂತೆ ಅದೇ ಮಾದರಿಯಲ್ಲಿ ಚೌಡದಾನಾಪೂರ ಅಭಿವೃದ್ಧಿಪಡಿಸಬೇಕು, ಪ್ರಾಧಿಕಾರಕ್ಕೆ 100 ಕೋಟಿ ಅನುದಾನ ಸರ್ಕಾರ ಘೋಷಿಸಬೇಕೆಂದು ತಿಪ್ಪಣ್ಣ ಸದನದಲ್ಲಿ ಗಮನ ಸೆಳೆದರು.
ಹಾವೇರಿ ಜಿಲ್ಲೆಯಲ್ಲಿರೋ ಚೌಡದಾನಾಪುರವನ್ನೂ ಪ್ರಗತಿಪಡಿಸಿ, ಚೌಡಯ್ಯನವರ ಐಕ್ಯ ಗದ್ದುಗೆ ಇಲ್ಲಿದೆ. ಈ ಕ್ಷೇತ್ರವನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಬೇಕಿದೆ ಎಂದರು.
ಕಾಗಿನೆಲೆ, ಕೂಡಲ ಸಂಗಮ ಸಮ್ಮಿಳಿತಗೊಳಿಸಿ ಬೃಹತ್ ಪ್ರಗತಿ ಕಾರ್ಯ ಕೈಗೊಳ್ಳುವ ಅಗತ್ಯವಿದೆ. ಹಾವೇರಿಯಲ್ಲಿ ಕಾಗಿನೆಲೆ, ಚೌಡದಾನಾಪುರ ಬರುತ್ತವೆ. ಕೂಗಳತೆಯಲ್ಲೇ ಅಂಬಿಗರ ಚೌಡಯ್ಯನವರ ಐಕ್ಯಪೀಠವಿದೆ. ಇಲ್ಲಿ ಪ್ರಗತಿ ಆಗಬೇಕೆಂದು ಆಗ್ರಹಿಸಿದರು.
ತುಂಗಭದ್ರಾ ಪ್ರವಾಹದಿಂದಾಗಿ ಚೌಡಯ್ಯನವರ ಗದ್ದಗೆ ಹಾನಿಯಾಗದಂತೆ ಕೂಡಲ ಸಂಗಮ ಐಕ್ಯ ಮಂಟಪದ ಮಾದರಿಯಲ್ಲಿ ಪ್ರಗತಿಪಡಿಸಬೇಕು. ಚೌಡಯ್ಯದಾನಪೂರದಲ್ಲಿಯೂ ವಿಶೇಷ ಮಂಟಪ ಹಾಗೂ ಪ್ರಾಧಿಕಾರ ರಚಿಸಬೇಕು, ಚೌಡಯ್ಯನವರ ಕುರಿತು ಅಧ್ಯಯನ ನಡೆಸಲು ಶರಣರ ಸಾಹಿತ್ಯ ಸಂಶೋಧನೆ ಕೇಂದ್ರ ಮ್ಯೂಸಿಯಮ್ ಸ್ಥಾಪಿಸಬೇಕು. ಬಂಕಾಪೂರ, ಕಾಗಿನೆಲೆ, ಚೌಡಾನಾಪೂರ ಪ್ರವಾಸೋದ್ಯಮವಾಗಬೇಕು, ದಾಸೋಹ ಭವನ, ಯಾತ್ರಿ ನಿವಾಸವನ್ನು ಚೌಡದಾನಾಪೂರದಲ್ಲಿ ನಿರ್ಮಿಸಬೇಕೆಂದು ತಿಪ್ಪಣ್ಣ ಕಮಕನೂರ್ ಸದನದಲ್ಲಿ ಸರ್ಕಾರದ ಗಮನ ಸೆಳೆದಿದ್ದಾರೆ.
ಹಿಂದಿನ ಪ್ರವಾಸೋದ್ಮಯ ಸಚಿವರಾಗಿದ್ದ ಎಚ್‌ಕೆ ಪಾಟೀಲ, ಚೌಡದಾನಾಪೂರವನ್ನು ಪ್ರಗತಿಪಡಿಸುವ ಕೆಲಸಕ್ಕೆ ಸಂಕಲ್ಪ ಮಾಡಿದ್ದರು. ಈಗ ಬದಲಾದ ಸ್ಥಿತಿಯಲ್ಲಿ ಕೆಜೆ ಜಾರ್ಜ್ ಇದ್ದಾರೆ. ಇವರೂ ಚೌಡದಾನಾಪೂರವನ್ನು ಪ್ರಗತಿಪಡಿಸಬೇಕೆಂದು ಕಮಕನೂರ್ ಗಮನ ಸೆಳೆದರು.
ಸಚಿವ ಬಸವರಾಜ ರಾಯರೆಡ್ಡಿ, ಕಮಕನೂರ್ ಅವರ ಪ್ರಶ್ನೆಗೆ, ಗಮನ ಸೆಳೆವ ಗೊತ್ತುವಳಿಗೆ ಸ್ಪಂದಿಸಿದರಲ್ಲದೆ, ಹಾವೇರಿಯಲ್ಲಿ ತುಂಗಭದ್ರಾ ನದಿ ಚೌಡದಾನಾಪೂದಲ್ಲಿ ಮುಕ್ತಿನಾಥ ಶಿವನ ದೇವಾಲಯ ರಾಷ್ಟ್ರೀಯ ಸಂರಕ್ಷಿತ ಸ್ಮಾರಕವಾಗಿದೆ. ಅಲ್ಲಿಂದ 300 ಕಿಮೀ ದೂರದಲ್ಲಿ ಐಕ್ಯಸ್ಥಳವಿದೆ. ಅಲ್ಲಿ ಏನಾದರೂ ಕೆಲಸ ಮಾಡಬೇಕಾದಲ್ಲಿ ಭಾರತೀಯ ಪುರಾತತ್ವ ಇಲಾಖೆ ಪರವಾನಿಗೆ ಪಡೆಯಬೇಕಾಗುತ್ತದೆ. ಅದಕ್ಕಾಗಿ ಸರ್ಕಾರದಿಂದ ಪ್ರಕ್ರಿಯೆ ನಡೆಯಬೇಕು. ಭಾರತೀಯ ಪುರಾತತ್ವ ಇಲಾಖೆಯಿಂದ ಅನುಮತಿ ಪಡೆದು ಚೌಡಯ್ಯನವರ ಸಮಾಧಿ ಪ್ರಗತಿಗೆ ಸೂಕ್ತ ಸಲಹೆ ಸೂಚನೆಗೆ ಸರ್ಕಾರ ಮುಂದಾಗುತ್ತದೆ ಎಂದು ಭರವಸೆ ನೀಡಿದರು.
ಹಿಂದಿನ ಸಚಿವರೂ ಭಾರತೀಯ ಪುರಾತತ್ವ ಇಲಾಖೆ ಅನುಮತಿ ಪಡೆಯಬೇಕು, ಅದಕ್ಕಾಗಿ ಅಗತ್ಯ ಕ್ರಮದ ಭರವಸೆ ನೀಡಿದ್ದರು. ಈಗಲೂ ಅದೇ ಉತ್ತರ ಕೇಳಬೇಕಾಗಿರೋದು ವಿಷಾದಕರವೆಂದು ತಿಪ್ಪಣ್ಣ ಕಮಕನೂರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸಭಾಪತಿಗಳ ಮುಂದೆ ತಮ್ಮ ಅಸಮಾಧಾನ ತೋಡಿಕೊಂಡರು. ಸಭಾಪತಿಗಳು ತಾವು ಸಹ ಅಂಬಿಗರ ಚೌಡಯ್ಯನವರ ಪರವಾಗಿರೋದಾಗಿ ಕಮಕನೂರ್ ಗೆ ಹೇಳಿದರು.
ಫಟೋ-
ಕಮಕನೂರ್ 1 ಮತ್ತು ಕಮಕನೂರ್ 2
ಮೇಲ್ಮನೆಯಲ್ಲಿ ಬುಧವಾರ ಎಂಎಲ್‌ಸಿ ತಿಪ್ಪಣ್ಣ ಕಮಕನೂರ್ ಅವರು ಅಂಬಿಗರ ಚೌಡಯ್ಯನವರ ಐಕ್ಯಸ್ಥಳ ಪ್ರವಾಸಿ ತಾಣವಾಗಬೇಕು, ಅಭಿವೃದ್ಧಿ ಪ್ರಾಧಿಕಾರ ರೂಪಿಸಬೇಕು ಎಂದು ಆಗ್ರಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.