ಈ ವರ್ಷವೂ ಸುಮಾರು ೨೦೦ ಜನ ಈ ತರಬೇತಿಯಲ್ಲಿ ಪಾಲ್ಗೊಂಡಿದ್ದು, ನಿಮ್ಮ ಭವಿಷ್ಯವನ್ನು ರೂಪಿಸಬೇಕೆಂದು ಶಾಸಕರು ಈ ತರಬೇತಿ ನೀಡುತ್ತಿದ್ದು, ಪ್ರತಿವಾರವೂ ಹಾಜರಾಗಿ, ಬೇರೆ ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳಬೇಡಿ.
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಅವಕಾಶ ಸಿಗದೇ ಶಿಕ್ಷಣದಿಂದ ವಂಚಿತರಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲಾಗದಂತಾಗಬಾರದು ಎಂಬ ಉದ್ದೇಶದಿಂದ ಉಚಿತವಾಗಿ ಸಿಇಟಿ, ನೀಟ್ ಹಾಗೂ ಜೆಇಇ ತರಬೇತಿಯನ್ನು ನೀಡಲಾಗುತ್ತಿದ್ದು, ಇದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಎಸ್.ಬಿ.ಚಾರಿಟಬಲ್ ಟ್ರಸ್ಟ್ ವತಿಯಿಂದ ಜ್ಞಾನಕಲ್ಪ ಉಚಿತ ಸಿಇಟಿ, ನೀಟ್ ಹಾಗೂ ಜೆಇಇ ತರಬೇತಿಯ ವಿದ್ಯಾರ್ಥಿಗಳಿಗೆ ಅಗತ್ಯವಾದ ಪಠ್ಯ ಹಾಗೂ ಪರಿಕರಗಳ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳು ತಮ್ಮ ಭವಿಷ್ಯದ ಜೀವನವನ್ನು ಕಟ್ಟಿಕೊಳ್ಳಬೇಕು ಎಂಬ ಉದ್ದೇಶದಿಂದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವರ್ಷ ಪೂರ್ತಿ ಪ್ರತಿ ಭಾನುವಾರ ಈ ತರಬೇತಿ ನಡೆಯುತ್ತಿದೆ. ಇದರಲ್ಲಿ ಸಮಯ ವ್ಯರ್ಥಮಾಡದೇ ವೇಳಾಪಟ್ಟಿಯನ್ನು ನಿಗದಿಪಡಿಸಿಕೊಂಡು ಓದಿ, ನಿಮ್ಮ ಪೋಷಕರು ನಿಮ್ಮ ಮೇಲೆ ಭರವಸೆ ಇಟ್ಟಿರುತ್ತಾರೆ. ನೀವು ಉತ್ತಮವಾಗಿ ಓದಿ ಸರ್ಕಾರಿ ಕೋಟಾದಡಿ ಸೀಟು ಪಡೆದು ಒಂದು ಉತ್ತಮ ಹುದ್ದೆಯನ್ನು ಪಡೆದರೆ ಈ ತಾಲೂಕಿಗೆ, ಪೋಷಕರಿಗೆ ಕೀರ್ತಿ ತಂದಂತಾಗುತ್ತದೆ ಎಂದರು. ಕೇವಲ ಸರ್ಕಾರಿ ಹುದ್ದೆಗಳನ್ನು ಪಡೆಯುವುದೊಂದೇ ಗುರಿಯಾಗದೇ ನಿಮ್ಮಲ್ಲಿರುವಂಥ ಕೌಶಲ್ಯತೆಯಿಂದಲೂ ಕಂಪನಿಗಳಲ್ಲಿ ಉತ್ತಮ ಸ್ಥಾನವನ್ನು ಪಡೆಯಬಹುದು. ಆದ್ದರಿಂದ ಪ್ರತಿಯೊಬ್ಬರೂ ನಿಮ್ಮ ಭವಿಷ್ಯಕ್ಕೆ ಅಧ್ಯಯನ ಮಾಡಿ, ಸಿಕ್ಕಿರುವ ಅವಕಾಶವನ್ನು ಬಳಸಿಕೊಳ್ಳಿ, ನಿಮ್ಮ ವೃತ್ತಿಯಿಂದ, ನೈಪುಣ್ಯತೆಯಿಂದ ಉತ್ತಮ ಹೆಸರನ್ನು ಮಾಡಿ ಬದುಕನ್ನು ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಸಮಿತಿಯ ಅಧ್ಯಕ್ಷ ನಾಗರಾಜು ಮಾತನಾಡಿ, ಈ ವರ್ಷವೂ ಸುಮಾರು ೨೦೦ ಜನ ಈ ತರಬೇತಿಯಲ್ಲಿ ಪಾಲ್ಗೊಂಡಿದ್ದು, ನಿಮ್ಮ ಭವಿಷ್ಯವನ್ನು ರೂಪಿಸಬೇಕೆಂದು ಶಾಸಕರು ಈ ತರಬೇತಿ ನೀಡುತ್ತಿದ್ದು, ಪ್ರತಿವಾರವೂ ಹಾಜರಾಗಿ, ಬೇರೆ ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳಬೇಡಿ. ಇದೇ ತರಬೇತಿಯನ್ನು ನೀವು ಬೇರೆಕಡೆ ಪಡೆಯಲು ಲಕ್ಷಾಂತರ ರುಪಾಯಿ ವ್ಯಯಿಸಬೇಕಾಗುತ್ತದೆ. ನಿಮಗೆ ಶೈಕ್ಷಣಿಕವಾಗಿ ಯಾವುದೇ ತೊಂದರೆಗಳಿದ್ದರೂ ನಮ್ಮ ಸಮಿತಿಯ ಯಾವುದೇ ಸದಸ್ಯರ ಗಮನಕ್ಕೆ ತಂದರೂ ನಾವು ಬಗೆಹರಿಸುತ್ತೇವೆ. ನಮ್ಮೊಂದಿಗೆ ಶಾಸಕರು ಇರುತ್ತಾರೆ, ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ನಿಮ್ಮ ಉಜ್ವಲ ಜೀವನಕ್ಕೆ ನಮ್ಮ ಸಮಿತಿ ಸದಾ ಇರುತ್ತದೆ ಎಂದರು.ಬಿಇಒ ಕಾಂತರಾಜು ಮಾತನಾಡಿ, ಈ ತರಬೇತಿಯನ್ನು ಲಘುವಾಗಿ ತೆಗೆದುಕೊಳ್ಳಬೇಡಿ, ಈ ತರಬೇತಿಗಾಗಿಯೇ ಪಠ್ಯಪುಸ್ತಕಗಳನ್ನು ದೆಹಲಿಯಿಂದ ಸಿದ್ಧಪಡಿಸಿ ರಾಜಸ್ಥಾನದ ಕೋಟಾದಲ್ಲಿ ಮುದ್ರಿಸಿ ನೀಡಲಾಗುತ್ತಿದೆ. ಈ ಪುಸ್ತಕಗಳಿಗೆ ಒಂದು ತಿಂಗಳ ಹಿಂದೆಯೇ ಹಣ ಪಾವತಿಸಿದ್ದರೂ ಈಗ ಬಂದಿವೆ. ಇಡೀ ದೇಶದಲ್ಲೇ ಈ ಪುಸ್ತಕಗಳಿಗೆ ಬೇಡಿಕೆ ಇದ್ದು, ಇಂತಹ ಸೌಲಭ್ಯಗಳನ್ನು ಶಾಸಕರು ನಿಮಗಾಗಿ ನೀಡಿದ್ದಾರೆ. ಗ್ರಾಮೀಣ ಭಾಗದ ಮಕ್ಕಳು ಉತ್ತಮ ಫಲಿತಾಂಶ ಪಡೆಯಬೇಕು, ಇಂಜನಿಯರ್, ಡಾಕ್ಟರ್‌ಗಳಾಗಬೇಕು ಎಂಬುದೇ ಇದರ ಉದ್ದೇಶ. ಆದ್ದರಿಂದ ವಿದ್ಯಾರ್ಥಿಗಳು ಈ ತರಬೇತಿಯನ್ನು ಬಳಸಿಕೊಂಡು ಜೀವನ ಕಟ್ಟಿಕೊಳ್ಳಿ ಎಂದರು.
ಉಚಿತ ಸಿಇಟಿ ತರಬೇತಿ ಸಮಿತಿಯ ಸದಸ್ಯರುಗಳಾದ ನಿವೃತ್ತ ತಹಸೀಲ್ದಾರ್ ಲಕ್ಷ್ಮಣಪ್ಪ, ನಿವೃತ್ತ ಬಿಇಒ ನಾಗೇಶ್ ಹಾಗೂ ಸೋಮಶೇಖರ್, ಜಾಕೀರ್, ರವಿಕುಮಾರ್ ಎಂ.ಎಸ್, ಯೋಗೀಶ್, ಸಾಕ್ಯ ಗೌತಮ್, ಸಿ.ಟಿ.ಸುರೇಶ್, ವರಮಹಾಲಕ್ಷ್ಮಿ, ಎಂ.ಎಸ್.ರವಿಕುಮಾರ್,ಲೊಕೇಶ್ ಹಾಗೂ ಇತರರು ಇದ್ದರು.