ಪಾಲಿಕೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಿ

KannadaprabhaNewsNetwork |  
Published : Jul 10, 2025, 12:45 AM ISTUpdated : Jul 10, 2025, 12:46 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ರಾಜ್ಯದ ಎಲ್ಲ ಪಾಲಿಕೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಾವಣಗೆರೆ ಮಹಾನಗರ ಪಾಲಿಕೆ ನೌಕರರ ಸಂಘದಿಂದ ನಗರದಲ್ಲಿ ಬುಧವಾರ ಪ್ರತಿಭಟಿಸಲಾಯಿತು.

- ದಾವಣಗೆರೆ ಪಾಲಿಕೆ ಬಳಿ ಪ್ರತಿಭಟನೆ । ಜಿಲ್ಲಾ ಸಚಿವ, ಸಂಸದೆ, ಶಾಸಕರ ಮೂಲಕ ಸರ್ಕಾರಕ್ಕೆ ಮನವಿ - - - * (ಮುಖ್ಯಾಂಶಗಳು)

- 7ನೇ ವೇತನ ಆಯೋಗದ ಸೌಲಭ್ಯಗಳನ್ನು ಪಾಲಿಕೆ ಅಧಿಕಾರಿ, ನೌಕರರಿಗೂ ಜಾರಿಗೊಳಿಸಬೇಕು. - ವೃಂದ, ನೇಮಕಾತಿ ನಿಯಮ-2011ಕ್ಕೆ ತಕ್ಷಣ ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಬೇಕು.

- ಕಚೇರಿ ವ್ಯವಸ್ಥಾಪಕರು, ಸಹಾಯಕ ಕಂದಾಯ ಅಧಿಕಾರಿಗಳಿಗೆ ಕೆಎಂಎಎಸ್ ಮುಖ್ಯಾಧಿಕಾರಿ ಶ್ರೇಣಿ-1ಕ್ಕೆ ಮುಂಬಡ್ತಿ ನೀಡಬೇಕು

- ವೃಂದವಾರು ಮುಂಬಡ್ತಿ ನೀಡಬೇಕು, ಕೆಜೆಐಡಿ-ಜಿಐಎಸ್ ಸೌಲಭ್ಯಗಳನ್ನು ನೀಡಬೇಕು.

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದ ಎಲ್ಲ ಪಾಲಿಕೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಾವಣಗೆರೆ ಮಹಾನಗರ ಪಾಲಿಕೆ ನೌಕರರ ಸಂಘದಿಂದ ನಗರದಲ್ಲಿ ಬುಧವಾರ ಪ್ರತಿಭಟಿಸಲಾಯಿತು.

ಪಾಲಿಕೆ ಆವರಣದಲ್ಲಿ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ಕೆ.ಎಸ್. ಪಾಂಡುರಾಜ್, ಕಾರ್ಯದರ್ಶಿ ಡಿ.ಸಿ. ಬಸವರಾಜಯ್ಯ ಇತರರ ನೇತೃತ್ವದಲ್ಲಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಯುಕ್ತೆ ರೇಣುಕಾ ಹಾಗೂ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.

ಕೆ.ಎಸ್.ಗೋವಿಂದರಾಜು ಮಾತನಾಡಿ, ರಾಜ್ಯದ ಪಾಲಿಕೆಗಳ ಎಲ್ಲ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. 7ನೇ ವೇತನ ಆಯೋಗದ ಸೌಲಭ್ಯಗಳನ್ನು ರಾಜ್ಯ ಸರ್ಕಾರಿ ನೌಕರರಿಗೆ ನೀಡಿದಂತೆ ಪಾಲಿಕೆ ಅಧಿಕಾರಿ, ನೌಕರರಿಗೂ ಯಥಾವತ್ ಜಾರಿಗೊಳಿಸಬೇಕು. ಸರ್ಕಾರವು ಆರ್ಥಿಕ ಇಲಾಖೆಯಿಂದಲೇ ಪೂರ್ಣ ಅನುದಾನ ಬಿಡುಗಡೆ ಮಾಡಬೇಕು ಎಂದರು.

ಎಲ್ಲ ಪಾಲಿಕೆಗಳ ವೃಂದ ಮತ್ತು ನೇಮಕಾತಿ ನಿಯಮ-2011ಕ್ಕೆ ಕಳೆದ 14 ವರ್ಷಗಳಿಂದ ತಿದ್ದುಪಡಿ ಮಾಡಿಲ್ಲ. ತಕ್ಷಣ ತಿದ್ದುಪಡಿ ಮಾಡಿ, ಅಧಿಸೂಚನೆ ಹೊರಡಿಸಬೇಕು. ನಗರಸಭೆ, ಪುರಸಭೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ವ್ಯವಸ್ಥಾಪಕರು ಮತ್ತು ಕಂದಾಯ ಅಧಿಕಾರಿಗಳಿಗೆ ಕೆಎಂಎಎಸ್‌ ಮುಖ್ಯಾಧಿಕಾರಿ ಶ್ರೇಣಿ-1ಕ್ಕೆ ಮುಂಬಡ್ತಿ ನೀಡುತ್ತಿದ್ದು, ಅದರಂತೆ ಪಾಲಿಕೆ ಕಚೇರಿ ವ್ಯವಸ್ಥಾಪಕರು, ಸಹಾಯಕ ಕಂದಾಯ ಅಧಿಕಾರಿಗಳಿಗೆ ಕೆಎಂಎಎಸ್ ಮುಖ್ಯಾಧಿಕಾರಿ ಶ್ರೇಣಿ-1ಕ್ಕೆ ಮುಂಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಎಲ್ಲ ಪಾಲಿಕೆ ಅಧಿಕಾರಿ, ನೌಕರರು ಸುಮಾರು ವರ್ಷಗಳಿಂದ ವಿವಿಧ ವೃಂದದ ಹುದ್ದೆಗಳನ್ನು ಮುಂಬಡ್ತಿ ಪಡೆಯಲು ವಂಚಿತರಾಗಿ ಇರುವುದರಿಂದ ತಕ್ಷಣವೇ ವೃಂದವಾರು ಮುಂಬಡ್ತಿ ನೀಡಬೇಕು. ರಾಜ್ಯ ಸರ್ಕಾರಿ ನೌಕರರಿಗೆ ಜಾರಿಯಲ್ಲಿ ಇರುವಂತೆ ಕೆಜೆಐಡಿ ಮತ್ತು ಜಿಐಎಸ್ ಸೌಲಭ್ಯವನ್ನು ಪಾಲಿಕೆ ಅಧಿಕಾರಿ, ನೌಕರರಿಗೂ ನೀಡಬೇಕು. ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ವರ್ಷ ಆಯೋಜಿಸುವ ಕ್ರೀಡೆಯನ್ನು ರಾಜ್ಯದ ಮಹಾನಗರ ಪಾಲಿಕೆ ಅಧಿಕಾರಿ, ನೌಕರರಿಗೂ ಆಯೋಜಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರಿ ನೌಕರರಿಗೆ ಜಾರಿಗೊಳಿಸಿದ ನಗದುರಹಿತ ಆರೋಗ್ಯ ಸೌಲಭ್ಯದ ಜ್ಯೋತಿ ಸಂಜೀವಿನಿ ಅಥವಾ ಆರೋಗ್ಯ ಸಂಜೀವಿನಿ ಯೋಜನೆಯನ್ನು ಮಹಾ ನಗರ ಪಾಲಿಕೆ ಅಧಿಕಾರಿ, ನೌಕರರು, ಪೌರ ಕಾರ್ಮಿಕರನ್ನು ಒಳಗೊಂಡಂತೆ ಇತರೆ ಎಲ್ಲ ನೌಕರರು ಮತ್ತು ಅವಲಂಬಿತರಿಗೂ ಜಾರಿಗೊಳಿಸಬೇಕು. ಪಾಲಿಕೆಗಳಲ್ಲಿ ಹೊರಗುತ್ತಿಗೆ ಆಧಾರಿತ ವಾಹನ ಚಾಲಕರು, ಯುಜಿಡಿ ಹೆಲ್ಪರ್ಸ್‌, ಲೋಡರ್ಸ್‌, ಹೆಲ್ಪರ್ಸ್‌, ಗಾರ್ಡನರ್ಸ್‌, ಡೇಟಾ ಎಂಟ್ರಿ ಆಪರೇಟರ್ಸ್‌, ವಾಲ್ವ್‌ಮನ್‌, ಸ್ಮಶಾನ ಕಾವಲುಗಾರರು ಇತರೆ ನೌಕರರನ್ನು ನೇರ ಪಾವತಿಗೆ ಒಳಪಡಿಸಿ, ಸಂಪೂರ್ಣವಾಗಿ ಶೇ.100ರಷ್ಟು ಸರ್ಕಾರದಿಂದಲೇ ವೇತನ ನೀಡಬೇಕು ಎಂದು ಮನವಿ ಮಾಡಿದರು.

ಸಂಘದ ಉಪಾಧ್ಯಕ್ಷೆ ಎನ್.ನಾಗರತ್ನಮ್ಮ, ಸಹ ಕಾರ್ಯದರ್ಶಿ ನಾಮದೇವ, ಖಜಾಂಚಿ ಎಂ.ಅಸ್ಲಾಂ, ಪೌರ ಕಾರ್ಮಿಕರ ಸಂಘದ ಎಲ್.ಎಂ. ಹನುಮಂತಪ್ಪ, ಎನ್.ನೀಲಗಿರಿಯಪ್ಪ, ಎಲ್.ಎಂ.ಎಚ್‌. ಸಾಗರ್, ಚಾಲಕರ ಸಂಘದ ಅಧ್ಯಕ್ಷ ವೀರೇಶ, ಸುರೇಶ ಪಾಟೀಲ, ಎಇಇ ಜಗದೀಶ, ಚೌಹಾಣ್, ಮಂಜುಳಾ ದೇವಿ, ದಿಲ್ಷಾದ್ ಬೇಗ್, ಶ್ರೇಯಾಂಕ, ಮಂಜಪ್ಪ ನಾಯ್ಕ, ಬಸವಣ್ಣ, ಸುನೀಲ್‌, ಪ್ರಶಾಂತ, ಮದನ್‌, ಪ್ರಕಾಶ, ಹರೀಶ ಇತರರು ಇದ್ದರು. ಅನಂತರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರಿಗೆ ಮನವಿ ಅರ್ಪಿಸಿದರು.

- - -

-(ಫೋಟೋ ಇದೆ)

PREV