ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯನ್ನು ವಕೀಲರ ಸಂಘದಿಂದ ಬಹಳ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಆರ್.ಮಹೇಶ್ ಮಾತನಾಡಿ, ಈ ನಾಡಿಗೆ ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರ. ಬೆಂಗಳೂರನ್ನು ವಾಣಿಜ್ಯ ನಗರವನ್ನಾಗಿಸಲು ಸಾಕಷ್ಟು ಶ್ರಮವಹಿಸಿದ್ದಾರೆ ಎಂದರು.
500 ವರ್ಷಗಳ ಹಿಂದೆಯೇ ಆಲೋಚನೆ ಮಾಡಿ ಬೆಂಗಳೂರು ನಗರವನ್ನು ಇಡೀ ವಿಶ್ವ ತಿರುಗಿ ನೋಡುವ ರೀತಿ ಮಾಡಿದ್ದಾರೆ. ಎಲ್ಲಾ ವರ್ಗದ ಜನರಿಗೆ ಅನುಕೂಲವಾಗಲು ಪೇಟೆಗಳನ್ನು ನಿರ್ಮಿಸಿ ಮಾರುಕಟ್ಟೆ ವ್ಯವಸ್ಥೆ ಮಾಡಿದ್ದಾರೆ ಎಂದು ಕೆಂಪೇಗೌಡರ ಸಾಧನೆ ಸ್ಮರಿಸಿದರು.ಇತಿಹಾಸಕಾರ ಆರೇನಹಳ್ಳಿ ಧರ್ಮೇಂದ್ರ ಕುಮಾರ್ ಮಾತನಾಡಿ, ಕೆಂಪೇಗೌಡರು ತಮ್ಮ ತಂದೆ ನಂಜೇಗೌಡರ ಒಡಗೂಡಿ ಹಂಪಿಗೆ ಪ್ರತಿ ವರ್ಷ ದಸರಾ ಮಹೋತ್ಸವಕ್ಕೆ ಹೋಗುತ್ತಿದ್ದಾಗ ಅಂತಹದ್ದೆ ಗ್ರಾಮವನ್ನು ಬೆಂಗಳೂರಿನಲ್ಲಿ ನಿರ್ಮಾಣ ಮಾಡುವ ಕನಸನ್ನು ಹೊಂದಿದ್ದರು ಎಂದರು.
ಹಂಪಿಯ ವಿರೂಪಾಕ್ಷ ಬಜಾರ್, ವಿಠ್ಠಲ ಬಜಾರ್, ವರದರಾಜಮ್ಮನ ಬಜಾರ್ ಗಳಂತಹ ಬಜಾರಗಳನ್ನು ನಿರ್ಮಿಸಲು ಕನಸನ್ನು ಹೊಂದಿದ್ದರು. ಅಂತೆಯೇ 66 ಕುಲಕಸುಬುಗಳ ಪೇಟೆಯನ್ನಾಗಿ ಬೆಂಗಳೂರನ್ನು ಕಟ್ಟಿದರು ಎಂದು ತಿಳಿಸಿದರು.ಶಿವಗಂಗೆಯಿಂದ ಪೂಜೆ ಮಾಡಿಸಿ ತಂದ ಪ್ರಸಾದವನ್ನು ಕೆಂಪೇಗೌಡರಿಗೆ ಕೊಟ್ಟ ಮೇಲೆ ಅದನ್ನು ಸ್ವೀಕಾರ ಮಾಡಿ ಮುಂದಿನ ಕೆಲಸ ನಿರ್ವಹಿಸುತ್ತಿದ್ದರು. ಕೆಂಪೇಗೌಡರ ಕಾಲದಲ್ಲಿ ಸ್ಥಾಪನೆಯಾದ ಕಾಡು ಮಲ್ಲೇಶ್ವರ ದೇವಾಲಯ, ಗವಿ ಗಂಗಾಧರೇಶ್ವರ ದೇವಾಲಯಗಳು ಈಗಲೂ ನಾವು ನೋಡಬಹುದು ಎಂದು ವಿಸ್ತಾರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎನ್.ಬಾಬು, ಜೆಎಂಎಫ್ ಸಿ ಸಿವಿಲ್ ನ್ಯಾಯಾಧೀಶರಾದ ಬಿ. ಪಾರ್ವತಮ್ಮ, ವಕೀಲ ಸಂಘದ ಅಧ್ಯಕ್ಷ ಗಂಗರಾಜು, ಕಾರ್ಯದರ್ಶಿ ಮೋಹನ್, ಸಂಘದ ಕಾರ್ಯಕಾರಿ ಮಂಡಳಿ ಸದಸ್ಯೆ ಪುಷ್ಪಲತಾ ಹಾಗೂ ಇತರರಿದ್ದರು.