ಖರ್ಗೆ, ಹರಿಪ್ರಸಾದ್ ಆರೆಸ್ಸೆಸ್ ಶಾಖೆಗೆ ಬಂದು ನೋಡಿ ಮಾತನಾಡಲು ಸವಾಲು
ಕನ್ನಡಪ್ರಭ ವಾರ್ತೆ ಉಡುಪಿಆರ್ಎಸ್ಎಸ್ ನಿಷೇಧಿಸುವುದಕ್ಕೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಕೂಡ ಪ್ರಯತ್ನಿಸಿದ್ದರೂ ಆಗಿಲ್ಲ, ಮುಂದೆ ರಾಹುಲ್ ಗಾಂಧಿ ಪ್ರಿಯಾಂಕ ಗಾಂಧಿ ಅವರಿಂದಲೂ ಆಗುವುದಿಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಃ ನೆಹರು ಅವರೂ ಒಮ್ಮೆ ಆರ್‌ಎಸ್‌ಎಸ್‌ನ್ನು ನಿಷೇಧಿಸುವುದಕ್ಕೆ ಪ್ರಯತ್ನಿಸಿದ್ದರು, ಆಗದಿದ್ದಾಗ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆರ್‌ಎಸ್‌ಎಸ್‌ಗೆ ಬನ್ನಿ ಎಂದು ಆಹ್ವಾನ ನೀಡಿದ್ರು, ಅಂಬೇಡ್ಕರ್ ಅವರೇ ಅಸ್ಪೃಶ್ಯತೆ-ಜಾತೀಯತೆ ಇಲ್ಲದ ಸಂಘಟನೆ ಎಂದು ಆರ್‌ಎಸ್‌ಎಸ್ ಬಗ್ಗೆ ಮೆಚ್ಚಿದ್ದರು. ಆಗ ಪ್ರಿಯಾಂಕ್ ಖರ್ಗೆ, ಹರಿಪ್ರಸಾದ್ ಅವರು ಆರ್‌ಎಸ್‌ಎಸ್ ಬಗ್ಗೆ ಲಘುವಾಗಿ ಮಾತನಾಡಿ ಸಮಯ ವ್ಯರ್ಥ ಮಾಡದೆ ತಮ್ಮ ಇಲಾಖೆ ಅಭಿವೃದ್ಧಿ, ಬಡವರ ಕಲ್ಯಾಣದ ಕಡೆಗೆ ಗಮನ ಹರಿಸಲಿ ಎಂದವರು ಸಲಹೆ ಮಾಡಿದರು.ದೇಶದ ಸ್ವಾತಂತ್ರ್ಯಕ್ಕೆ ಮೊದಲು ಕಾಂಗ್ರೆಸ್ ಹಾಗೂ ಆರ್‌ಎಸ್‌ಎಸ್ ಅದರದ್ದೇ ಕೆಲಸ ಮಾಡಿಕೊಂಡು ಬಂದಿವೆ. ಕಾಂಗ್ರೆಸ್ ಇತಿಹಾಸದುದ್ದಕ್ಕೂ ಬೇರೆಯವರನ್ನು ಓಲೈಸಿಕೊಂಡು ಬಂದಿದೆ, ಪಾಕಿಸ್ತಾನಕ್ಕೆ ಜೈಕಾರ ಹಾಕಿದವರನ್ನು ಸಮರ್ಥಿಸುತ್ತಿದೆ. ಆರ್‌ಎಸ್ಎಸ್ ಭಾರತ್ ಮಾತಾಕಿ ಜೈ ಎನ್ನುವವರನ್ನು ಸೃಷ್ಟಿಸಿದೆ ಎಂದ ಕೋಟ, ಖರ್ಗೆ, ಹರಿಪ್ರಸಾದ್ ಸಂಘದ ಶಾಖೆಗೆ ಬರಲಿ, ಅಲ್ಲಿ ಆರ್‌ಎಸ್‌ಎಸ್‌ನ ಆಲೋಚನೆ, ರಾಷ್ಟ್ರೀಯತೆ, ರಾಷ್ಟ್ರ ಭಕ್ತಿಯನ್ನು ತಿಳಿದುಕೊಂಡು ಮಾತನಾಡಲಿ ಎಂದು ಆಹ್ವಾನ ಕೊಟ್ಟರು.
ಸಿದ್ದು, ಡಿಕೇಶಿ ಚರ್ಚೆ ಮುಗಿಸಿ!:ರಾಜ್ಯದಲ್ಲೀಗ ಸಪ್ಟೆಂಬರ್ ಕ್ರಾಂತಿ, ಸಿದ್ದರಾಮಯ್ಯನ್ನು ಇಳಿಸುವ ಚರ್ಚೆ ನಡೆಯುತ್ತಿದೆ, ಇದರಿಂದ ಆಡಳಿತ ಬಿಗು ಕಳೆದುಕೊಂಡಿದೆ, ಅಧಿಕಾರಿಗಳು ಮುಖ್ಯಮಂತ್ರಿ ಕೆಳಗಿಳಿತ್ತಾರೆ ಎನ್ನುವ ಮಾನಸಿಕತೆಯಲ್ಲಿದ್ದಾರೆ, ಈ ಚರ್ಚೆ ಜನರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರುತ್ತಿದೆ, ಆದ್ದರಿಂದ ಸಿದ್ದರಾಮಯ್ಯ ಹಾಗೂ ಡಿಕೆಶಿ ಆದಷ್ಟು ಬೇಗ ಈ ಚರ್ಟೆಯನ್ನು ಮುಗಿಸುವುದು ಉತ್ತಮ ಎಂದು ಸಲಹೆ ಮಾಡಿದರು.
ಸರ್ಕಾರದ ಕೈಲಿ ಏನೂ ಇಲ್ಲ!:ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಿಗೆ ಶೂ, ಸಾಕ್ಸ್‌ಗಳಿಗಾಗಿ ದಾನಿಗಳನ್ನು ಹುಡುಕುತ್ತಿದ್ದಾರೆ, ಅಂದರೆ ಸರ್ಕಾರದಲ್ಲಿ ಯಾವ ಯೋಜನೆಗೂ ದುಡ್ಡಿಲ್ಲ, ಸರ್ಕಾರದ ಕೈಯಲ್ಲಿ ಏನೂ ಇಲ್ಲ, ಆದರೂ ಸರ್ಕಾರ ತನ್ನ ಬಳಿ ಹಣ ಇದೆ ಎಂಬಂತೆ ವರ್ತಿಸುತ್ತಿದೆ. ಇದು ಆಡಳಿತದ ಸರಿಯಾದ ಮಾರ್ಗವಲ್ಲ ಎಂದು ಕೋಟ ಅಭಿಪ್ರಾಯಪಟ್ಟರು.
ಎಲ್ಲಾ ಆದ ಮೇಲೆ ಶಾಂತಿಸಭೆ !ಮಂಗಳೂರಿನಲ್ಲಿ ಕೇಸು, ವಾದ, ವಿವಾಗ ಆದ ಮೇಲೆ ಈಗ ಗೃಹ ಸಚಿವರ ನೇತೃತ್ವದಲ್ಲಿ ಶಾಂತಿಸಭೆ ನಡೆಯುತ್ತಿದೆ. ಈ ಶಾಂತಿಸಭೆ, ಪೊಲೀಸ್ ಕ್ರಮ, ಕೋಮುಗಲಭೆ ನಿಗ್ರಹ ಪಡೆ ಇದೆಲ್ಲಾ ಹಿಂದೂಗಳ ಮೇಲೆ ಗಧಾ ಪ್ರಹಾರ ಮಾಡಲು ಇರುವ ಸರ್ಕಾರ ಯೋಚನೆಗಳು, ಸರ್ಕಾರ ಹಿಂದೂ ಕಾರ್ಯಕರ್ತರ ಮೇಲೆ ರೌಡಿ ಳೀಟ್ ಹಾಕುವ ಮೂಲಕ ಅವರ ಬದುಕಿನ ಹಕ್ಕನ್ನೇ ಕಸಿದುಕೊಳ್ಳುತ್ತಿದೆ ಎಂದವರು ತೀವ್ರ ಅಸಮನಾಧಾನ ವ್ಯಕ್ತಪಡಿಸಿದರು.ಜನೌಷಧಿ ರದ್ದು ತಡೆಗೆ ಸ್ವಾಗತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಡವರಿಗೆ ಕಡಿಮೆ ಬೆಲೆಯಲ್ಲಿ ಔಷಧಿ ಪೂರೈಸುತ್ತಿದ್ದ ಜನೌಷಧಿ ಕೇಂದ್ರಗಳನ್ನು ರದ್ದು ಮಾಡುವ ಆದೇಶವನ್ನು ಹೈಕೋರ್ಟ್ ತಡೆಹಿಡಿದಿರುವ ಆದೇಶವನ್ನು ಸ್ವಾಗತಿಸುತ್ತೇನೆ, ಇನ್ನಾದರೂ ಸಿದ್ದರಾಮಯ್ಯ ಸರ್ಕಾರ ಕೇಂದ್ರ ಸರ್ಕಾರ ಯೋಜನೆಗಳನ್ನು ತಡೆಯುವ ಕೆಲಸ ಮಾಡಬಾರದು ಎಂದರು.