ಕನ್ನಡಪ್ರಭ ವಾರ್ತೆ ಉಡುಪಿಪ್ರತಿಯೊಬ್ಬರು ತಂತಮ್ಮ ಕ್ಷೇತ್ರದಲ್ಲಿ ಗರಿಷ್ಟ ಸಾಧನೆ ಮಾಡಬೇಕು. ಅದನ್ನು ಮಾಡದೇ ಕರ್ತವ್ಯಲೋಪ ಮಾಡಿದರೇ ಅದು ಅಧರ್ಮವಾಗುತ್ತದೆ. ಅವನತಿಗೆ ಕಾರಣವಾಗುತ್ತದೆ ಎಂದು ಗೀತೆಯ ಅಂತಿಮ ಸಂದೇಶವಾಗಿದೆ ಎಂದು ಪರ್ಯಾಯ ಪೀಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.ಅವರು ಗುರುವಾರ ಸಂಜೆ ರಾಜಾಂಗಣದಲ್ಲಿ ಸಂಧ್ಯಾ ದರ್ಬಾರ್‌ನಲ್ಲಿ ಸಾಧಕರಿಗೆ ದರ್ಬಾರ್ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಸಂದೇಶ ನೀಡಿದರು.ಪ್ರತಿಯೊಂದು ಕ್ಷೇತ್ರದ ಪ್ರತಿಯೊಬ್ಬ ಸಾಧಕನ ಹಿಂದೆ ನಾನಿದ್ದೇನೆ ಎಂದು ಕೃಷ್ಣ ಗೀತೆಯಲ್ಲಿ ಹೇಳಿದ್ದಾನೆ. ಗೀತೆ ಉದ್ಯಮಿ, ರಾಜಕಾರಣಿ, ಸಾಹಿತ್ಯ, ಕಲೆ, ಕ್ರೀಡೆ, ವೈದ್ಯಕೀಯ, ತಂತ್ರಜ್ಞಾನ ಹೀಗೆ ಪ್ರತಿಯೊಂದು ಕ್ಷೇತ್ರಕ್ಕೂ ಸಹಾಯ ಮಾಡುತ್ತದೆ. ಅದನ್ನು ಜ್ಞಾಪನೆ ಮಾಡುವುದಕ್ಕಾಗಿಯೇ ತಾವು ಎಲ್ಲ ಕ್ಷೇತ್ರಗಳ ಸಾಧಕರನ್ನು ಈ ದರ್ಬಾರ್ ವೇದಿಕೆಗೆ ಕರೆದಿದ್ದೇವೆ ಎಂದವರು ಹೇಳಿದರು.ಮುಖ್ಯ ಅತಿಥಿಯಾಗಿ ಶಾಸಕ ಬಸವಗೌಡ ಯತ್ನಾಳ್, ಮಾಜಿ ಸಚಿವ ಜನಾರ್ದನ ರೆಡ್ಡಿ, ಮುಂಬೈಯ ಶಾಸಕ ಹಿತೇಂದ್ರ ಠಾಕೂರ್, ಮುಂಬೈ ಇಸ್ಕಾನ್ ಅಧ್ಯಕ್ಷ ಕಮಲಲೋಚನ ಪ್ರಭು, ಉದ್ಯಮಿ ವಿರಾರ್ ಶಂಕರ ಶೆಟ್ಟಿ, ಸಂತೋಷ್ ಶೆಟ್ಟಿ ಪೂನಾ, ಆಸ್ಟ್ರೇಲಿಯಾದ ಮಾಜಿ ಸಚಿವ ಡ್ಯೂಕ್ ಡನಲೆನ್, ದ.ಕ. ಜಿಲ್ಲಾ ಮೀನುಗಾರ ಮಹಾಸಭಾದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಬ್ಯಾಂಕ್ ಆಫ್ ಬರೋಡದ ಅಧಿಕಾರಿ ಗಾಯತ್ರಿದೇವಿ, ಸಿನಿಮಾ ಕಲಾವಿದೆ ರೂಪಾ ಗುರುರಾಜ್ ಆಗಮಿಸಿದ್ದರು.* ಪ್ರಶಸ್ತಿ ಪ್ರದಾನಮಣಿಪಾಲ ಮಿಡಿಯಾ ನೆಟ್ ವರ್ಕ್ ಆಡಳಿತ ನಿರ್ದೇಶಕ ಸತೀಶ್ ಟಿ. ಪೈ ಮತ್ತು ಸಂಧ್ಯಾ ಪೈ, ದೆಹಲಿಯ ಶ್ರೀನಿವಾಸ ವಿವಿಯ ಕುಲಪತಿ ಸಿ.ಎ.ರಾಘವೇಂದ್ರ ರಾವ್, ವಿದ್ವಾನ್ ಮಧ್ವರಮಣ ಆಚಾರ್ಯ, ವಿದ್ವಾನ್ ಪಂಜ ಭಾಸ್ಕರ ಭಟ್, ವಿದ್ವಾನ್ ಮಧ್ವೇಶ ಭಟ್, ವಿಶ್ವ ಧರ್ಮ ಮತ್ತು ಶಾಂತಿ ಸಂಯೋಜಕಿ ಡಾ.ವಿನೂ ಆರಾಮ್ ಕೊಯಮುತ್ತೂರು ಅವರಿಗೆ ದರ್ಬಾರ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್, ಕಾರ್ಯಾಧ್ಯಕ್ಷ ರಘುಪತಿ ಭಟ್, ಪ್ರ.ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಬೆಳಪು, ಕೋಶಾಧಿಕಾರಿ ರಂಜನ್ ಕಲ್ಕೂರ ವೇದಿಕೆಯಲ್ಲಿದ್ದರು. ವಿದ್ವಾನ್ ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.ಕೃಷ್ಣನಿಗೆ ‘ಸುವರ್ಣ ಪಾರ್ಥಸಾರಥಿ ರಥ’ ದರ್ಬಾರ್ ಘೋಷಣೆಈ ಬಾರಿ ತಮ್ಮ ಸಂನ್ಯಾಸಾಶ್ರಮದ ಸುವರ್ಣ ವರ್ಷಾಚರಣೆಯ ಹಿನ್ನೆಲೆಯಲ್ಲಿ ಉಡುಪಿ ಬಾಲಕೃಷ್ಣನಿಗೆ ಸುವರ್ಣ ರಥವನ್ನು ಅರ್ಪಿಸುವುದಾಗಿ ಪುತ್ತಿಗೆ ಶ್ರೀಗಳು ದರ್ಬಾರ್ ನಲ್ಲಿ ಘೋಷಿಸಿದರು.ಕೃಷ್ಣ ರಥದಲ್ಲಿ ಕುಳಿತು ಅರ್ಜುನನಿಗೆ ಗೀತೋಪದೇಶ ಮಾಡುವಂತಹ, ಮಠದೊಳಗೆ ಎಳೆಯುವುದಕ್ಕೆ ಸಾಧ್ಯವಾಗುವಂತಹ ಚಿನ್ನದ ರಥ ಇದಾಗಿರುತ್ತದೆ ಎಂದವರು ಹೇಳಿದರು.ಜೊತೆಗೆ ಈಗಾಗಲೇ ಕೋಟಿ ಗೀತಾ ಲೇಖನ ಯಜ್ಞ ಆರಂಭವಾಗಿದ್ದು, ಜಗತ್ತಿನಾದ್ಯಂತ ಕೋಟ್ಯಾಂತರ ಮಂದಿ ಇದರಲ್ಲಿ ಭಾಗವಹಿಸಿದ್ದಾರೆ. ಅದಕ್ಕೆ ಪೂರಕವಾಗಿ 2 ವರ್ಷಗಲ ಕಾಲ ಅಖಂಡ ಗೀತಾ ಪಾರಾಯಣ, ಗೀತಾ ಮಹಾಯಾಗ ಮತ್ತು ಅಂತಾರಾಷ್ಟ್ರೀಯ ಗೀತಾ ಸಮ್ಮೇಳನವನ್ನೂ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಶ್ರೀಗಳು ಘೋಷಿಸಿದರು.ಮೇರೆ ಮೀರಿದ ಜನರ ಉತ್ಸಾಹ: ವೈಭವದ ಪುತ್ತಿಗೆ ಪರ್ಯಾಯ ಮೆರವಣಿಗೆಉಡುಪಿಯ ಪರ್ಯಾಯೋತ್ಸವದ ಮೆರವಣಿಗೆಯು ವರ್ಷದಿಂದ ವರ್ಷಕ್ಕೆ ಹೆಚ್ಚು ಜನಾಕರ್ಷಣೀಯವೂ ವೈಭವೋಪೇತವೂ ಆಗುತ್ತಿದ್ದು, ಇದಕ್ಕೆ ಗುರುವಾರ ಮುಂಜಾನೆಯ ಪುತ್ತಿಗೆ ಮಠದ ಪರ್ಯಾಯೋತ್ಸವ ಸಾಕ್ಷಿಯಾಯಿತು.ಇತರ ಏಳು ಮಠಾಧಿಪತಿಗಳು ಮೆರವಣಿಗೆಯಲ್ಲಿ ಭಾಗವಹಿಸಿಲ್ಲ ಎನ್ನುವ ಕೊರತೆಯ ನಡುವೆಯೂ, ಎಲ್ಲಾ ಮಠಗಳ ಅನುಯಾಯಿಗಳು ಮಠಗಳ ನಡುವಿನ ಭಿನ್ನಾಭಿಪ್ರಾಯಕ್ಕೂ ತಮಗೂ ಸಂಬಂಧ ಇಲ್ಲ ಎನ್ನುವಂತೆ ಉತ್ಸಾಹ ಮೇರೆ ಮೀರಿ ಭಾಗವಹಿಸಿದ್ದರು.ಮುಂಜಾನೆ 3 ಗಂಟೆಗೆ ಕಿನ್ನಿಮುಲ್ಕಿ ಸ್ವಾಗತಗೋಪುರದಿಂದ ಆರಂಭವಾದ ಮೈಲುದ್ದದ ಮೆರವಣಿಗೆಯು ರಥಬೀದಿಯನ್ನು ಮುಟ್ಟುವಾಗ 5 ಗಂಟೆ ಕಳೆದಿತ್ತು. ಮೆರವಣಿಯಲ್ಲಿದ್ದ ಸ್ತಬ್ಧಚಿತ್ರಗಳು ನೋಡುವವರಿಗೆ ಪ್ರಧಾನ ಆಕರ್ಷಣೆಗಳಾಗಿದ್ದವು. ಅದರಲ್ಲೂ ಅಯೋಧ್ಯೆ ರಾಮಮಂದಿರದ ಸ್ತಬ್ಧಚಿತ್ರ ಎಲ್ಲ ಮೊಬೈಲ್‌ಗಳಲ್ಲೂ ಸೆರೆಯಾಗುತ್ತಿತ್ತು.ವಸುದೇವ ಕೃಷ್ಣ, ನರಸಿಂಹಾವತಾರ, ವಾಮನಾವತಾರ, ಭೀಮಾವತಾರ, ಮೀನುಗಾರಿಕೆ, ಗೋರಕ್ಷಣೆ ಮುಂತಾದ ಸ್ತಬ್ಧಚಿತ್ರಗಳು, ಕೊಂಬುಕಹಳೆ, ನಾದಸ್ವರ, ಸ್ಯಾಕ್ಸೋಫೋನ್ ನಾಸಿಕ್ ಬ್ಯಾಂಡ್ ಮುಂತಾದ ಮಂಗಳವಾದ್ಯಗಳು, ಕೇರಳ ಚಂಡೆ, ಕುಣಿತದ ಭಜನಾ ತಂಡಗಳು, ಹುಲಿವೇಷಗಳು, ಜನಪದ ತಂಡಗಳು ಮೆರವಣಿಗೆ ಮೆರುಗು ನೀಡಿದ್ದವು.ತೆರದ ವಾಹನದ ಮೇಲೆ ಚಿನ್ನದ ಪಲ್ಲಕ್ಕಿಯನ್ನಿಟ್ಟು ಅದರಲ್ಲಿ ಪುತ್ತಿಗೆ ಮಠದ ದೇವರ ಸಂಪುಟ, ಅದರ ಹಿಂದೆ ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಮತ್ತು ಪರ್ಯಾಯ ಪೀಠಾಧಿಪತಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅಲಂಕೃತ ದಂಡಿಗೆಯಲ್ಲಿ ಕುಳಿತು, ಸಾಗಿ ಬರುವಾಗ ಜನರ ಹರ್ಷೋದ್ಘಾರ ಮುಗಿಲು ಮುಟ್ಟುತ್ತಿತ್ತು.ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ರಸ್ತೆಯ ಇಕ್ಕೆಲಗಳಲ್ಲಿ ಎಳ್ಳು ಬೀರಿದರೂ ನೆಲಕ್ಕೆ ಬೀಳದಂತೆ ನಿಂತಿದ್ದ ಜನರು, ಅವರನ್ನು ನಿಯಂತ್ರಿಸಲು ಸ್ವಯಂಸೇವಕರ ಮತ್ತು ಪೊಲೀಸರು ಹರಸಾಹಸ ಪಡುತಿದ್ದರು.ಜೋಡುಕಟ್ಟೆಯಿಂದ ಮೆರವಣಿಗೆಯಲ್ಲಿ ಸ್ವತಃ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನಡೆದುಕೊಂಡು ರಥಬೀದಿಗೆ ಬಂದಿದ್ದು ವಿಶೇಷವಾಗಿತ್ತು.ಪೌರಕಾರ್ಮಿಕರು ಪೊಲೀಸರಿಗೆ ಶ್ಲಾಘನೆ:ಮೆರವಣಿಗೆ ಸಾಗುತ್ತಿದ್ದಂತೆ ಹಿಂದಿನಿಂದ ನಗರಸಭೆಯ ಪೌರಕಾರ್ಮಿಕರು ರಸ್ತೆಯನ್ನು ಗುಡಿಸಿ ಸ್ವಚ್ಛಗೊಳಿಸುತ್ತಿದ್ದದು ಮತ್ತು ನಗರಾದ್ಯಂತ ಬಿಗಿ ಬಂದೋಬಸ್ತ್ ಮೂಲಕ, ವಾಹನಸಂಚಾರ, ಸುವ್ಯವಸ್ಥೆ ಕಾಪಾಡಿದ ಪೊಲೀಸ್ ಇಲಾಖೆಯ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.