ಕನ್ನಡಪ್ರಭವಾರ್ತೆ ಚಿತ್ರದುರ್ಗನಂದಿನಿ ಬ್ರಾಂಡ್ ಹಾಲಿನ ಪೌಡರ್ ಹಾಗೂ ಬೆಣ್ಣೆಗೆ ಬೇಡಿಕೆ ಕಡಿಮೆಯಾಗಿದ್ದು ಅಪಾರ ಪ್ರಮಾಣದಲ್ಲಿ ದಾಸ್ತಾನು ಉಳಿದಿದೆ ಎಂದು ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ವಿದ್ಯಾಧರ್ ಮಾಹಿತಿ ನೀಡಿದ್ದಾರೆ.ನಗರದ ತರಾಸು ರಂಗಮಂದಿರದಲ್ಲಿ ಸೋಮವಾರ ನಡೆದ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮದಿಂದ ಜಿಲ್ಲೆಯ ಆರು ತಾಲೂಕಿನ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳಿಗಾಗಿ ನಡೆದ ಪ್ರಾದೇಶಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪೌಡರ್ ಹಾಗೂ ಬೆಣ್ಣೆಯಿಂದಾದ ನಷ್ಟ ಸರಿತೂಗಿಸುವುದು ಶಿಮುಲ್ ಗೆ ಸಾಹಸವಾಗಿದೆ ಎಂದರು. ಒಂದು ಕೆಜಿ ಹಾಲಿನ ಪೌಡರ್ ಸಿದ್ಧಪಡಿಸಲು ಹನ್ನೊಂದು ಲೀಟರ್ ಹಾಲು ಬೇಕಾಗುತ್ತದೆ. ಮೂವತ್ತಾರು ರು. ಗೆ ಒಂದು ಲೀಟರ್ ಹಾಲು ಖರೀದಿಸುತ್ತಿದ್ದು ಒಟ್ಟು ₹396 ಖರ್ಚು ಬರುತ್ತದೆ. ಒಂದು ಕೆಜಿ ಹಾಲಿನ ಪೌಡರನ್ನು ₹216 ರು. ಗೆ ಮಾರಾಟ ಮಾಡಲಾಗುತ್ತಿದ್ದು, ಶಿಮುಲ್ ಗೆ ₹180 ನಷ್ಟವಾಗುತ್ತಿದೆ. ಹಾಲಿನ ಬೇಡಿಕೆ ನೋಡಿಕೊಂಡು ಪೌಡರ್ ದರ ಏರಿಕೆ ಮಾಡಲಾಗುವುದು. ಬೆಣ್ಣೆಯೂ ಸಹ ಸ್ಟಾಕ್ ಇದೆ. ಪೌಡರ್ ಮತ್ತು ಬೆಣ್ಣೆ ದರ ಕುಸಿದಿರುವುದರಿಂದ ಒಕ್ಕೂಟ ನಷ್ಟದಲ್ಲಿದೆ ಎಂದರು.ಮುಂದಿನ ದಿನಗಳಲ್ಲಿ ಮಾರುಕಟ್ಟೆ ವಿಸ್ತರಿಸಿ ಹಾಲು ಹಾಗೂ ಬೆಣ್ಣೆಗೆ ಹೆಚ್ಚಿನ ದರ ನೀಡುವ ಚಿಂತನೆಯಿದೆ. ಏನೇ ದರ ಹೆಚ್ಚಳ ಮಾಡಿದರೂ ಹಾಲು ಉತ್ಪಾದಕರಿಗೆ ನೆರವಾಗುವ ನಿಟ್ಟನಲ್ಲಿ ಶಿಮುಲ್ ಕೆಲಸ ಮಾಡುತ್ತದೆ. ರೈತರು ಗುಣಮಟ್ಟದ ಹಾಲು ಉತ್ಪಾದನೆ ಕಡೆ ಗಮನ ಹರಿಸಬೇಕೆಂದು ವಿದ್ಯಾಧರ ಸಲಹೆ ನೀಡಿದರು. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕ ಜಿ.ಬಿ. ಶೇಖರ್ ಮಾತನಾಡಿ, ಜಿಲ್ಲೆಯಲ್ಲಿ ರೈತರು ಅಪಾರ ಪ್ರಮಾಣದಲ್ಲಿ ಹಾಲು ಉತ್ಪಾದನೆಯಲ್ಲಿ ತೊಡಗಿದ್ದಾರೆ. ರೈತರಿಗೆ ಅನುಕೂಲವಾಗಬೇಕಾಗಿರುವುದರಿಂದ ಜಿಲ್ಲೆಯಲ್ಲಿ ಹೊಸ ಹಾಲಿನ ಸೊಸೈಟಿಗಳು ಆರಂಭವಾಗಬೇಕು. ಜಾನುವಾರುಗಳಿಗೆ ವಿಮೆ ಮಾಡಿಸಿದರೆ ಆಕಸ್ಮಿಕವಾಗಿ ರಾಸುಗಳು ಮೃತಪಟ್ಟಾಗ ಪರಿಹಾರ ದೊರಕುತ್ತದೆ. ರೈತರು ಗುಣಮಟ್ಟದ ಹಾಲನ್ನು ಸಹಕಾರ ಸಂಘಕ್ಕೆ ಕೊಡಬೇಕೆಂದು ಮನವಿ ಮಾಡಿದರು.ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದಿಸುವಂತೆ ರೈತರಿಗೆ ಶಿಮುಲ್ ಪ್ರೇರಣೆ ನೀಡುವುದಷ್ಟಕ್ಕಷ್ಟೇ ಸೀಮಿತವಾಗಬಾರದು. ಹಾಲು ಉತ್ಪಾದನೆಯ ಲಾಭಾಂಶ ರೈತರಿಗೆ ಹೋಗಬೇಕು. ರೈತರಿಗೆ ಕಷ್ಟವಾಗಬಾರದೆನ್ನುವ ಕಾರಣಕ್ಕೆ ಹಾಲಿನ ದರ ಜಾಸ್ತಿ ಮಾಡಬೇಕೆಂದು ಒಕ್ಕೂಟದ ಅಧ್ಯಕ್ಷರಿಗೆ ಸಲಹೆ ನೀಡಿದರು.
ನಿರ್ದೇಶಕರಾದ ಜಿ.ಬಿ. ರೇವಣಸಿದ್ದಪ್ಪ, ಸಂಜೀವಮೂರ್ತಿ, ರವಿಕುಮಾರ್, ಶೇಖರ್, ಶಿವಮೊಗ್ಗ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ಮುರಳಿಧರ್, ಉಪ ವ್ಯವಸ್ಥಾಪಕ ಕುಮಾರಸ್ವಾಮಿ ವೇದಿಕೆಯಲ್ಲಿದ್ದರು.