ಗಿರೀಶ್ ಗರಗ
ಅರಣ್ಯ ಉತ್ಪನ್ನ ಸೇರಿ ಮತ್ತಿತರ ಮೂಲಗಳಿಂದ ಅರಣ್ಯ ಇಲಾಖೆಗೆ ಬರುತ್ತಿರುವ ಆದಾಯ ಹಿಂದಿನ ವರ್ಷಕ್ಕೆ ಹೋಲಿಸಿದರೆ 2024-25ನೇ ಸಾಲಿನಲ್ಲಿ ಭಾರೀ ಕುಸಿತ ಕಂಡಿದೆ. ಉಳಿದೆಲ್ಲ ಉತ್ಪನ್ನಗಳಿಗಿಂತ ಇ-ಹರಾಜು ಮೂಲಕ ನಾಟಾ ಮತ್ತು ಉರುವಲು (ಕಟ್ಟಿಗೆ) ಮಾರಾಟದಿಂದ 2023-24 ಸಾಲಿಗಿಂತ ಕಡಿಮೆ ಆದಾಯ ಬಂದಿದೆ.
6 ವಿಧದಲ್ಲಿ ಆದಾಯ:ಅರಣ್ಯ ಇಲಾಖೆ ಅರಣ್ಯ ಉತ್ಪನ್ನಗಳಲ್ಲಿ ಗುರುತಿಸಿರುವಂತೆ ಆರು ವಿಧದಲ್ಲಿ ಆದಾಯ ಗಳಿಸುತ್ತಿದೆ. ಶ್ರೀಗಂಧ, ನಾಟಾ, ಉರುವಲು, ಬಿದಿರು, ಬೆತ್ತ ಹಾಗೂ ಅರಣ್ಯ ಪ್ರದೇಶದಲ್ಲಿ ಬೆಳೆಯುವ ಗೋಡಂಬಿ, ಹುಣಸೆ, ಜೇನುತುಪ್ಪ ಹೀಗೆ ಇನ್ನಿತರ ಚೌಬಿನೇತರ ಅರಣ್ಯ ಉತ್ಪನ್ನಗಳಿಂದ ಆದಾಯ ಪಡೆಯುತ್ತಿದೆ. ನಾಟಾ, ಉರುವಲುಗಳನ್ನು ಹೊರತುಪಡಿಸಿದರೆ ಉಳಿದ ಮೂಲಗಳಿಂದ ಬರುತ್ತಿರುವ ಆದಾಯ ತೀರ ಕಡಿಮೆಯಿದೆ.
ಇ-ಹರಾಜಿನಲ್ಲಿ ಆದಾಯ ಕುಸಿತ:
2024-25ರಲ್ಲಿ 3,667 ಘನ ಮೀ. ಬೀಟೆ, 3,832 ತೇಗ, 48,061 ಘನ ಮೀ. ಇತರ ನಾಟಾ ಹಾಗೂ 1.96 ಲಕ್ಷ ಘನ ಮೀ. ಉರುವಲುಗಳನ್ನು ಇ-ಹರಾಜಿನ ಮೂಲಕ ಮಾರಲಾಗಿದೆ. ಅದರಿಂದ ನಾಟಾ ಮೂಲಕ 152.06 ಕೋಟಿ ರು. ಹಾಗೂ ಉರುವಲಿನಿಂದ 51.57 ಕೋಟಿ ರು. ಸೇರಿ ಒಟ್ಟು 203.64 ಕೋಟಿ ರು. ಆದಾಯ ಗಳಿಸಲಾಗಿದೆ. ಇದನ್ನು ಗಮನಿಸಿದರೆ ಹಿಂದಿನ ವರ್ಷಕ್ಕಿಂತ 49 ಕೋಟಿ ರು. ಆದಾಯ ಕಡಿಮೆಯಾಗುವಂತಾಗಿದೆ.
ಅರಣ್ಯ ಇಲಾಖೆ ಅರಣ್ಯ ಪ್ರದೇಶ ಹೆಚ್ಚಿಸುವುದು, ವನ್ಯಜೀವಿಗಳ ಸಂರಕ್ಷಣೆ, ಮಾನವ-ವನ್ಯಜೀವಿ ಸಂಘರ್ಷ ತಡೆ, ನಗರ ಪ್ರದೇಶಗಳಲ್ಲಿ ಹಸಿರೀಕರಣ ಹೀಗೆ ಹಲವು ಕಾರ್ಯಗಳನ್ನು ಅನುಷ್ಠಾನಗೊಳಿಸುತ್ತದೆ. ಅದಕ್ಕೆ ಅಗತ್ಯವಿರುವ ಅನುದಾನವನ್ನು ರಾಜ್ಯ ಸರ್ಕಾರ ನೀಡುತ್ತದೆ. ಪರಿಹಾರ ಅರಣ್ಯೀಕರಣ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (ಕಾಂಪಾ)ದಿಂದಲೂ ಅನುದಾನ ದೊರೆಯುತ್ತಿದೆ. ಜತೆಗೆ ಅರಣ್ಯ ಉತ್ಪನ್ನಗಳ ಮಾರಾಟದಿಂದಲೂ ಆದಾಯ ಗಳಿಸುತ್ತಿದೆ. ಆದರೆ, 2023-24ಕ್ಕೆ ಹೋಲಿಸಿದರೆ 2024-25ರಲ್ಲಿ ಉಳಿದೆಲ್ಲ ಆದಾಯ ಅಥವಾ ಅನುದಾನಕ್ಕಿಂತ ಅರಣ್ಯ ಉತ್ಪನ್ನಗಳ ಮಾರಾಟದಿಂದ ಗಳಿಸಲಾದ ಆದಾಯ ಕುಸಿತ ಕಂಡಿದೆ.