ರಾಮಕೃಷ್ಣ ದಾಸರಿ
ಮಳೆಗಾಲ, ಹಿಂಗಾರು ಹಂಗಾಮು ಹಾಗೂ ಚಳಿಗಾಲದ ಸಮಯದಲ್ಲಿ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಂದ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಮಾಡುವುದು ಅಪರೂಪ, ಆದರೆ ಪ್ರಸಕ್ತ ಸಾಲಿನಲ್ಲಿ ಶೇ.60 ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯ ಕೊರತೆ, ತೀವ್ರ ಬರಗಾಲ ಆವರಿಸಿದ್ದರಿಂದ ಬೇಸಿಗೆಯಲ್ಲಿ ಬಳಕೆಯಾಗುವಷ್ಟು ವಿದ್ಯುತ್ ಬೇಡಿಕೆ ಸೃಷ್ಟಿಯಾಗುತ್ತಿರುವುದರಿಂದ ಅನ್ಯ ಮೂಲಗಳ ಜೊತೆಗೆ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಂದ ನಿರಂತರ ಕರೆಂಟ್ ಉತ್ಪಾದನೆ ಸಾಗಿದೆ.
ಜಲ ಮೂಲ ಆಧಾರಿತ ಕರೆಂಟ್ ಉತ್ಪಾದನೆ ಪ್ರಮಾಣವು ತೀವ್ರವಾಗಿ ಕುಸಿತ ಕಂಡಿದ್ದರಿಂದ ಇದೀಗ ಇಡೀ ರಾಜ್ಯಕ್ಕೆ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳೇ ಆಸರೆಯಾಗಿ ನಿಂತಿದ್ದು, ಜಲ, ಪವನ, ಸೋಲಾರ್ ಸೇರಿ ಇತರೆ ಪರ್ಯಾಯ ಮೂಲಗಳಿಂದ (ಅಲ್ಪ ಪ್ರಮಾಣದಲ್ಲಿ ) ವಿದ್ಯುತ್ ಉತ್ಪಾದನೆ ಜೊತೆ ಜೊತೆಗೆ ಶಾಖೋತ್ಪನ್ನ ಕೇಂದ್ರಗಳಿಂದ ಅತೀ ಹೆಚ್ಚಿನ ಪ್ರಮಾಣದಲ್ಲಿ ಕರೆಂಟ್ ಉತ್ಪಾದನೆ ಮಾಡಲಾಗುತ್ತಿದ್ದು, ಈ ಭಾಗದಲ್ಲಿರುವ ಆರ್ಟಿಪಿಎಸ್, ವೈಟಿಪಿಎಸ್ ಹಾಗೂ ಬಿಟಿಪಿಎಸ್ಗಳು ಗುಣಮಟ್ಟದ ಕಲ್ಲಿದ್ದಲು ಸರಬರಾಜಿನ ಏರುಪೇರು, ತಾಂತ್ರಿಕ ದೋಷಗಳು ಹಾಗೂ ಇತರೆ ಒತ್ತಡಗಳ ನಡುವೆಯೂ ಬೇಡಿಕೆ ರೀತ್ಯ ಕರೆಂಟ್ ಕೊಡಲು ಶ್ರಮಿಸುತ್ತಿವೆ.ಇಲ್ಲಿನ ರಾಯಚೂರು ಬೃಹತ್ ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್ಟಿಪಿಎಸ್) 8 ಘಟಕಗಳ ಪೈಕಿ 5 ರಿಂದ, ಯರಮರಸ್ ಆತ್ಯಾಧುನಿಕ ಶಾಖೋತ್ಪನ್ನ ವಿದ್ಯುತ್ (ವೈಟಿಪಿಎಸ್) ಸ್ಥಾವರದ ಎರಡೂ ಮತ್ತು ಅದೇ ರೀತಿ ಪಕ್ಕದ ಬಳ್ಳಾರಿಯ ವೈಟಿಪಿಎಸ್ನ ಮೂರರ ಪೈಕಿ ಎರಡು ಘಟಕಗಳಿಂದ ಕರೆಂಟ್ ಉತ್ಪಾದಿಸ ಲಾಗುತ್ತಿದೆ.
ರಾಜ್ಯದ ಬೇಡಿಕೆ, ವಿವಿಧ ಮೂಲಗಳಿಂದ ಉತ್ಪಾದನೆ: ಸೋಮವಾರ ಸಂಜೆ ಸಮಯಕ್ಕೆ ರಾಜ್ಯದಲ್ಲಿ 11,058 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆಯಲ್ಲಿ ರಾಜ್ಯದ ಜಲ, ಪವನ- ಸೋಲಾರ್ ಹಾಗೂ ಶಾಖೋತ್ಪನ್ನದ (2,714 ಮೆಗಾ ವ್ಯಾಟ್ ಶಾಖೋತ್ಪನ್ನ, 303 ಮೆಗಾ ವ್ಯಾಟ್ ಶಾಖೋತ್ಪನ್ನ ಪಿಪಿಐ, 453 ಮೆಗಾ ವ್ಯಾಟ್ ಜಲ, 802 ಮೆಗಾ ವ್ಯಾಟ್ ಪವನ, 355 ಮೆಗಾ ವ್ಯಾಟ್ ಸೋಲಾರ್, 430 ಮೆಗಾ ವ್ಯಾಟ್ ಇತರೆ) ಮೂಲಗಳಿಂದ ಒಟ್ಟು 10,804 ಮೆಗಾ ವ್ಯಾಟ್ಕ ರೆಂಟ್ ಉತ್ಪಾದಿಸುತ್ತಿದ್ದು, ಸಿಜಿಎಸ್ ನಿಂದ 5,810 ಮೆಗಾ ವ್ಯಾಟ್ ಕರೆಂಟ್ ಲಭ್ಯವಾಗುತ್ತಿದೆ ಎಂದು ಕೆಪಿಟಿಸಿಎಲ್ ಮೂಲಗಳು ತಿಳಿಸಿವೆ.