ಹಾಸನಾಂಬೆಯ ದರ್ಶನ ಮಾಡಿ ಹೇಳುತ್ತಿದ್ದೇನೆ । ಕಾಂಗ್ರೆಸ್‌ನ ಯಾವ ಕುತಂತ್ರವೂ ಫಲಿಸಲ್ಲ
ನನ್ನ ಮಗನನ್ನು ಮುಗಿಸಲು ಕಾಂಗ್ರೆಸ್ ನಾಯಕರು ಏನು ಕುತಂತ್ರ ಮಾಡಿದರೂ ಅದು ಸಾದ್ಯವಿಲ್ಲ. ಜನ ಚುನಾವಣೆಯಲ್ಲಿ ತೋರಿಸುತ್ತಾರೆ. ಚನ್ನಪಟ್ಟಣದಿಂದ ಕಾಂಗ್ರೆಸ್ ಅವನತಿ ಆರಂಭವಾಗುತ್ತದೆ. ಹಾಸನಾಂಬೆ ದರ್ಶನ ಮಾಡಿ ಹೇಳ್ತಾ ಇದೀನಿ ಬರೆದಿಟ್ಟುಕೊಳ್ಳಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.
ನಗರದ ರಿಂಗ್ ರಸ್ತೆ ಬಳಿ ಇರುವ ಶಾಸಕ ಎಚ್.ಪಿ.ಸ್ವರೂಪ್ ನಿವಾಸದಲ್ಲಿ ಭಾನುವಾರ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ ವಾಯುಭಾರ ಕುಸಿತದಿಂದ ಮಳೆಯ ಅನಾಹುತವಾಗಿದ್ದು, ರಾಜ್ಯದಲ್ಲಿ ರೈತರ ಬದುಕು ಧಾರುಣವಾಗಿದೆ. ಸಿಎಂ ಅವರು ಡಿಸಿ, ಸಿಎಸ್‌ಗಳ ಜತೆ ಸಭೆ ನಡೆಸಿದ್ದಾರೆ. ಸಭೆ ಬಳಿಕ ಸುಮಾರು ೮೦ ಸಾವಿರ ಹೆಕ್ಟೇರ್ ಭೂಮಿ ಬೆಳೆ ನಷ್ಟದ ಬಗ್ಗೆ ಮಾಹಿತಿ ನೀಡಿದ್ದಾರೆ. ಸರ್ಕಾರದ ಅಂದಾಜಿನ ಪ್ರಕಾರವೇ ರೈತರ ಆತ್ಮಹತ್ಯೆ ಪ್ರಕರಣ ಶುರುವಾಗಿದೆ ಎಂದು ಹೇಳಿದರು.ಇನ್ನು ಹದಿನೈದು ದಿನದಲ್ಲಿ ಉಪಚುನಾವಣೆ ನಡೆಯಲಿದ್ದು, ಹಾನಿ ಬಗ್ಗೆ ಸಚಿವರ ಉಸ್ತುವಾರಿ ಇಲ್ಲ. ಆದರೆ ಚುನಾವಣೆ ಉಸ್ತುವಾರಿ ಆಗಿ ಬರುತ್ತಿದ್ದಾರೆ. ಸರ್ಕಾರ ಜನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲು ಮುಂದಾಗದೇ ಬರೀ ಸಭೆ ಮಾಡಿದರೆ ಆಗುವುದಿಲ್ಲ. ಉಸ್ತುವಾರಿ ಸಚಿವರಿಗೆ ಜವಾಬ್ದಾರಿ ನೀಡಿ ಮಾಹಿತಿ ಪಡೆದು ರೈತರಿಗೆ ವಿಶ್ವಾಸ ತುಂಬ ಬೇಕು. ಚುನಾವಣೆ ಘೋಷಣೆ ಆಗಿ ನಾಮಪತ್ರ ಸಲ್ಲಿಕೆ ಆಗಿದೆ. ಚನ್ನಪಟ್ಟಣ ದೇಶದ ಗಮನ ಸೆಳೆಯೋದನ್ನು ಕಂಡಿದ್ದೇನೆ. ಚನ್ನಪಟ್ಟಣದ ವಿಷಯದಲ್ಲಿ ವಿರೋಧಿಗಳು ಕೊಡುತ್ತಿರುವ ಹೇಳಿಕೆಗೆ ಜನರೇ ಉತ್ತರ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಎಸ್‌ಟಿ ಹಂಚಿಕೆ ವಿಚಾರದಲ್ಲಿ ಗೊಂದಲ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಇದು ನೀವೇ ಮಾಡಿದ್ದು, ಆಗ ಇದು ಅರ್ಥ ಆಗಿರಲಿಲ್ಲವೇ. ಮನಮೋಹನ್ ಸಿಂಗ್, ಚಿದಂಬರಂ ಅವರೆಲ್ಲಾ ಕುಳಿತು ಮಾಡಿದ್ದು ಅಲ್ಲವಾ. ಆಗ ಈ ಸಮಸ್ಯೆ ಆಗುತ್ತೆ ಎಂದು ಗೊತ್ತಿರಲಿಲ್ಲವೇ. ಕೊಟ್ಟ ಅನುದಾನವನ್ನು ಬಳಸಿಕೊಳ್ಳದೆ ಏನೇನೊ ಹೇಳಿದ್ರೆ ಆಗುವುದಿಲ್ಲ ಎಂದು ಲೇವಡಿ ಮಾಡಿದರು.
ನಮ್ಮಲ್ಲಿ ಯಾವುದೇ ಸಮನ್ವಯದ ಕೊರತೆ ಇಲ್ಲ. ಸಮನ್ವಯದ ಕೊರತೆ ಇರುವುದು ಕಾಂಗ್ರೆಸ್‌ನಲ್ಲಿ ಎಂದು ತಿರುಗೇಟು ನೀಡಿದರು.