ಕರಾವಳಿಯಲ್ಲಿ ಕ್ಷೀಣಿಸುತ್ತಿರುವ ಕಪ್ಪೆಗಳ ಸಂತತಿ

KannadaprabhaNewsNetwork |  
Published : Aug 17, 2026, 02:45 AM IST
ರೈತನ ಮಿತ್ರ ಕಪ್ಪೆಗಳು. | Kannada Prabha

ಸಾರಾಂಶ

ಒಂದೆಡೆ ಪ್ರಸಕ್ತ ವರ್ಷ ಮಳೆಯ ಅಭಾವ, ಇನ್ನೊಂದೆಡೆ ಸಾಂಪ್ರದಾಯಿಕ ಕೃಷಿಗೆ ರಾಸಾಯನಿಕ ಗೊಬ್ಬರಗಳ ಬಳಕೆ ಹಾಗೂ ಅಕ್ರಮ ಸಾಗಾಟ ಇವುಗಳ ಜಂಟಿ ಹೊಡೆತಕ್ಕೆ ಸಿಲುಕಿ ಮಳೆಗಾಲದ ಅತಿಥಿ ಎಂದೇ ಕರೆಯಲ್ಪಡುವ ಕಪ್ಪೆಗಳ ಸಂತತಿ ಕರಾವಳಿಯಲ್ಲಿ ಕ್ಷೀಣಿಸುತ್ತಿದೆ.

ಮಳೆ ಅಭಾವ, ರಾಸಾಯನಿಕ ಬಳಕೆಯಿಂದ ಕಪ್ಪೆಗಳ ಮಾರಣಹೋಮ

ಗೋವಾದಲ್ಲಿ ಕಪ್ಪೆ ಖಾದ್ಯಕ್ಕೆ ಭಾರಿ ಡಿಮ್ಯಾಂಡ್, ಒಂದಕ್ಕೆ ₹900!

ರಾಘು ಕಾಕರಮಠ

ಕನ್ನಡಪ್ರಭ ವಾರ್ತೆ ಅಂಕೋಲಾ

ಒಂದೆಡೆ ಪ್ರಸಕ್ತ ವರ್ಷ ಮಳೆಯ ಅಭಾವ, ಇನ್ನೊಂದೆಡೆ ಸಾಂಪ್ರದಾಯಿಕ ಕೃಷಿಗೆ ರಾಸಾಯನಿಕ ಗೊಬ್ಬರಗಳ ಬಳಕೆ ಹಾಗೂ ಅಕ್ರಮ ಸಾಗಾಟ ಇವುಗಳ ಜಂಟಿ ಹೊಡೆತಕ್ಕೆ ಸಿಲುಕಿ ಮಳೆಗಾಲದ ಅತಿಥಿ ಎಂದೇ ಕರೆಯಲ್ಪಡುವ ಕಪ್ಪೆಗಳ ಸಂತತಿ ಕರಾವಳಿಯಲ್ಲಿ ಕ್ಷೀಣಿಸುತ್ತಿದೆ.

ಪರಿಸರ ವ್ಯವಸ್ಥೆಯ ಆಹಾರ ಸರಪಣಿಯ ಪ್ರಮುಖ ಕೊಂಡಿಯಾಗಿರುವ ಕಪ್ಪೆಗಳು ಮಾಯವಾಗುತ್ತಿರುವುದು ಕೃಷಿಕರು ಹಾಗೂ ಪರಿಸರ ಪ್ರೇಮಿಗಳಲ್ಲಿ ಕಳವಳ ಮೂಡಿಸಿದೆ.

ಗೋವಾ, ಚೀನಾದಲ್ಲಿ ಡಿಮ್ಯಾಂಡ್:

ನೆರೆಯ ಗೋವಾ ಹಾಗೂ ಚೀನಾ ದೇಶಗಳಲ್ಲಿ ಕಪ್ಪೆ ಮಾಂಸಕ್ಕೆ ವಿಪರೀತ ಬೇಡಿಕೆಯಿದೆ. ಗೋವಾದ ಪ್ರಸಿದ್ಧ ಹೊಟೇಲ್‌ಗಳಲ್ಲಿ ಕಪ್ಪೆ ಖಾದ್ಯಕ್ಕೆ ಅಭಾವ ಸೃಷ್ಟಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಕಪ್ಪೆಗಳನ್ನು ಹಿಡಿದು ಗೋವಾ ಹೊಟೇಲ್‌ಗಳಿಗೆ ಅಕ್ರಮವಾಗಿ ಪೂರೈಸಲಾಗುತ್ತಿದೆ. ಕಳೆದ ವರ್ಷ ಗೋವಾದಲ್ಲಿ ಒಂದು ದೊಡ್ಡ ಗಾತ್ರದ ಕಪ್ಪೆಗೆ ₹700 ವರೆಗೆ ಬೆಲೆಯಿದ್ದರೆ, ಈ ವರ್ಷ ₹900 ನೀಡಿದರೂ ಕಪ್ಪೆಗಳು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದೆ ಮಳೆಗಾಲ ಆರಂಭವಾಗುತ್ತಿದ್ದಂತೆ ಏಜೆಂಟ್‌ಗಳಿಗೆ ಹೊಟೇಲ್ ಉದ್ಯಮಿಗಳು ಮುಂಗಡ ಹಣ ನೀಡುತ್ತಿದ್ದರು. ಆದರೆ ಈಗ ಕಪ್ಪೆಗಳ ಸಂಖ್ಯೆ ತಗ್ಗಿದ್ದರಿಂದ ಈ ಅಕ್ರಮ ಜಾಲಕ್ಕೂ ಹೊಡೆತ ಬಿದ್ದಿದೆ.

ಗುಟುರ್ ಗುಟುರ್ ಮೌನ:

ಮಳೆಗಾಲದ ಆಗಮನದ ಸೂಚನೆ ನೀಡುತ್ತಾ ಕೃಷಿ ಗದ್ದೆಗಳಲ್ಲಿ ಮೊಳಗುತ್ತಿದ್ದ ಗುಟುರ್ ಗುಟುರ್ ನಾದ ಈಗ ಕ್ಷೀಣಿಸಿದೆ. ಜೈವಿಕ ವೈವಿಧ್ಯತೆಯ ಸಂಕೇತವೂ, ಅನ್ನದಾತನ ಆಪ್ತ ಮಿತ್ರನೂ ಆಗಿದ್ದ ಕಪ್ಪೆಗಳು ಕಾಣೆಯಾಗುತ್ತಿರುವುದು ರೈತರಲ್ಲಿ ಜಿಜ್ಞಾಸೆ ಮೂಡಿಸಿದೆ.

ರೈತನ ಅಪರೂಪದ ಮಿತ್ರ:

ಕಪ್ಪೆಗಳು ಕೇವಲ ಜೀವಿಯಲ್ಲ, ಕೃಷಿಕನ ಬೆಳೆಯ ರಕ್ಷಕ. ಗದ್ದೆಗಳಲ್ಲಿ ಬೆಳೆ ಹಾಳುಮಾಡುವ ಕ್ರಿಮಿ-ಕೀಟಗಳು ಹಾಗೂ ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳನ್ನು ಕಪ್ಪೆಗಳು ಆಹಾರವಾಗಿ ಸೇವಿಸಿ ಕೀಟನಾಶಕವಾಗಿ ಕೆಲಸ ಮಾಡುತ್ತಿದ್ದವು. ಸೊಳ್ಳೆಗಳ ಹಾವಳಿ ನಿಯಂತ್ರಣದಲ್ಲಿದ್ದರೆ ಸಾಂಕ್ರಾಮಿಕ ರೋಗಗಳೂ ದೂರವಿರುತ್ತವೆ ಎಂಬುದು ತಜ್ಞರ ಅಭಿಮತವಾಗಿದೆ.

ಮಾರಕ ರಾಸಾಯನಿಕ:

ಮಳೆಯ ಅಭಾವ ಒಂದೆಡೆಯಾದರೆ, ಗದ್ದೆ, ಹಳ್ಳ-ಕೊಳ್ಳ ಮತ್ತು ಬಾವಿಗಳಲ್ಲಿ ಅತಿಯಾಗಿ ಬಳಸಲಾಗುತ್ತಿರುವ ಅಸಾಂಪ್ರದಾಯಿಕ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳು ಕಪ್ಪೆಗಳ ಜೀವಕ್ಕೆ ಕಂಟಕವಾಗಿವೆ. ರಾಸಾಯನಿಕಯುಕ್ತ ನೀರು ಕಪ್ಪೆಗಳ ಆವಾಸ ಸ್ಥಾನವನ್ನೇ ನಾಶಪಡಿಸುತ್ತಿದೆ.

ಹೆಚ್ಚಾದ ಸೊಳ್ಳೆಗಳ ಹಾವಳಿ:

ಕಪ್ಪೆಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಸೊಳ್ಳೆಗಳ ಹಾವಳಿ ಗಣನೀಯವಾಗಿ ಹೆಚ್ಚಿದ್ದು, ಡೆಂಘೀ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ.ಹಿಂದೆ ಮಳೆಗಾಲದಲ್ಲಿ ಕಪ್ಪೆಗಳ ನಾದ ಹೆಚ್ಚಾಗಿ ಕೇಳಿಸುತ್ತಿತ್ತು. ಈಗ ಆ ವಾತಾವರಣವಿಲ್ಲ. ಜೀವವೈವಿಧ್ಯತೆಯನ್ನು ಉಳಿಸಲು ಕಪ್ಪೆಗಳ ಅಕ್ರಮ ಸಾಗಾಟಕ್ಕೆ ತಡೆ ಒಡ್ಡಿ, ಅವುಗಳ ರಕ್ಷಣೆಗೆ ಆಡಳಿತ ವ್ಯವಸ್ಥೆ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ ಎನ್ನುತ್ತಾರೆ ಹಟ್ಟಿಕೇರಿ ಗ್ರಾಮಸ್ಥ ವಿನೋದ ನಾಯ್ಕ.ಉರಗಗಳಿಗೆ ಆಹಾರದ ಕ್ಷಾಮ

ನಿಸರ್ಗದದ ಆಹಾರ ಸರಪಣಿಯಲ್ಲಿ ಒಂದು ಜೀವಿಯನ್ನು ತಿಂದು ಇನ್ನೊಂದು ಜೀವಿ ಬದುಕುತ್ತದೆ. ಕಪ್ಪೆಗಳು ಹಾವಿನ ಪ್ರಮುಖ ಆಹಾರ. ಗದ್ದೆಗಳಲ್ಲಿ ಕಪ್ಪೆಗಳ ಸಂಖ್ಯೆ ಕ್ಷೀಣಿಸಿದ್ದರಿಂದ ಆಹಾರದ ಕ್ಷಾಮ ಎದುರಿಸುತ್ತಿರುವ ಉರಗಗಳು (ಹಾವುಗಳು) ಈಗ ಆಹಾರ ಅರಸಿ ನಾಡಿನತ್ತ ಹಾಗೂ ಮಾನವ ವಸತಿ ಪ್ರದೇಶಗಳತ್ತ ದಾಂಗುಡಿ ಇಡುತ್ತಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತನಿಖೆ ಬಳಿಕ ಶೂಟೌಟ್‌ ಪ್ರಕರಣಕ್ಕೆ ಸ್ಪಷ್ಟತೆ: ಡಿಕೆಶಿ
ಕಲಾ ಪ್ರಕಾರಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯ: ಪ್ರಭಾಕರ ಜೋಶಿ