ಕನ್ನಡಪ್ರಭ ವಾರ್ತೆ ಕುಷ್ಟಗಿ
ಇತ್ತೀಚಿನ ದಿನಗಳಲ್ಲಿ ಹಿರಿಯರಿಗೆ ಗೌರವ ಕೊಡಬೇಕೆನ್ನುವ ಸಂಸ್ಕಾರವು ಮಕ್ಕಳಲ್ಲಿ ಹಾಗೂ ಯುವಕರಲ್ಲಿ ಕಡಿಮೆಯಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್. ಪೂಜೇರಿ ಹೇಳಿದರು.ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆಯಿಂದ ಹಿರಿಯ ನಾಗರಿಕ ಕಾಯ್ದೆ 2007ರ ಕುರಿತು ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮದುವೆಯ ನಂತರ ಮಕ್ಕಳು ತಂದೆ-ತಾಯಿಗಳಿಂದ ಆಸ್ತಿಪಾಸ್ತಿಯನ್ನು ತಮ್ಮ ಹೆಸರಿನಲ್ಲಿ ಮಾಡಿಸಿಕೊಂಡು ಕೊನೆಯವರೆಗೂ ಸಾಕಿ ಸಲುಹದನ್ನು ಬಿಟ್ಟು ಅನಾಥಾಶ್ರಮ, ದೇವಸ್ಥಾನಗಳಲ್ಲಿ ಬಿಡುವಂತಹ ಸನ್ನಿವೇಶವನ್ನು ಇಂದಿನ ದಿನಗಳಲ್ಲಿ ಕಾಣಬಹುದಾಗಿದೆ. ಈ ರೀತಿಯಾಗಬಾರದು ಎಂದರೆ ಈಗಿನ ಪಾಲಕರು ತಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಎಂದರು.ಹಿರಿಯರಾದವರು ಒಂದು ವೇಳೆ ಮಕ್ಕಳಿಂದ ದೌರ್ಜನ್ಯಕ್ಕೆ ಒಳಗಾಗಿದ್ದರೆ ಅಥವಾ ನಿಮ್ಮನ್ನು ಸಾಕಲು ಅವರು ಹಿಂದೇಟು ಹಾಕುತ್ತಿದ್ದರೆ ಕಾನೂನಿನ ಮೂಲಕ ನ್ಯಾಯ ಪಡೆದುಕೊಳ್ಳಬಹುದು ಹಾಗೂ ನೇರವಾಗಿ ಎಸಿ ಕೋರ್ಟ್ ಮೊರೆ ಹೋದರೆ ನೀವು ಮಕ್ಕಳಿಗೆ ಮಾಡಿರುವ ಆಸ್ತಿಯನ್ನು ಮರಳಿ ನಿಮ್ಮ ಹೆಸರಿನಲ್ಲಿ ಮಾಡಿಕೊಡುವುದರ ಮೂಲಕ ಸೂಕ್ತವಾದ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದ್ದು, ಇದನ್ನು ಎಲ್ಲರು ಅರಿತುಕೊಂಡು ಕಾನೂನುಗಳ ಸದುಪಯೋಗ ಪಡೆಯಬೇಕು ಎಂದರು.
ಕ್ರೈಂ ಪಿಎಸ್‌ಐ ಮಾನಪ್ಪ ವಾಲ್ಮೀಕಿ ಮಾತನಾಡಿ, ನಮ್ಮ ಪೊಲೀಸ್ ಠಾಣೆಯಲ್ಲಿಯೂ ಕೂಡ ತಿಂಗಳಿಗೊಮ್ಮೆ ಹಿರಿಯ ನಾಗರಿಕರ ಕಾಯ್ದೆಯ ಕುರಿತು ಅವರ ಸಮಸ್ಯೆಗಳ ಕುರಿತು ಚರ್ಚಿಸಲಾಗುತ್ತದೆ. ಹಿರಿಯ ನಾಗರಿಕರು ತಮ್ಮ ಮಕ್ಕಳಿಂದ ದೌರ್ಜನ್ಯಕ್ಕೆ ಒಳಗಾಗಿದ್ದರೆ ಅವರು ಠಾಣೆ ಗಮನಕ್ಕೆ ತರುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.ವಕೀಲರ ಸಂಘದ ಅಧ್ಯಕ್ಷ ಸಂಗನೌಡ ಪಾಟೀಲ ಮಾತನಾಡಿದರು. ಸಿಪಿಐ ಯಶವಂತ ಬಿಸನಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಹಾಯಕ ಸರ್ಕಾರಿ ಅಭಿಯೋಜಕ ಎಲ್. ರಾಯನಗೌಡ, ಅಪರ ಸರ್ಕಾರಿ ವಕೀಲ ಪರಸಪ್ಪ ಗುಜಮಾಗಡಿ ಸೇರಿದಂತೆ ನೂರಾರು ಜನರು, ಹಿರಿಯ ನಾಗರಿಕರು, ಸಾರ್ವಜನಿಕರು ಇದ್ದರು.