ಮಳೆ ಇಳಿಕೆ, ಕೆಲವೆಡೆ ಪ್ರವಾಹ ಭೀತಿ

KannadaprabhaNewsNetwork |  
Published : Aug 05, 2024, 12:35 AM IST
ಯಲ್ಲಾಪುರ ತಾಲೂಕಿನ ಕಳಚೆಯಲ್ಲಿ ಭೂಕುಸಿತವಾಗಿದೆ. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಭಾನುವಾರ 1 ಮನೆಗೆ ಭಾಗಶಃ ಹಾನಿಯಾಗಿದ್ದು, ಕಾರವಾರದ 2, ಅಂಕೋಲಾದ 1, ಹೊನ್ನಾವರದ 7 ಮತ್ತು ಕುಮಟಾದ 2 ಸೇರಿದಂತೆ ಒಟ್ಟು 12 ಕಾಳಜಿ ಕೇಂದ್ರಗಳಲ್ಲಿ 514 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ.

ಕಾರವಾರ: ಭಾನುವಾರ ಮಳೆ ಸ್ವಲ್ಪ ಕಡಿಮೆಯಾಗಿದೆ. ಆದರೆ ಲಿಂಗನಮಕ್ಕಿ ಜಲಾಶಯದಿಂದ ನೀರನ್ನು ಹೊರಬಿಡುತ್ತಿರುವುದರಿಂದ ಹೊನ್ನಾವರ ತಾಲೂಕಿನಲ್ಲಿ ಶರಾವತಿಯ ಇಕ್ಕೆಲಗಳಲ್ಲಿ ಪ್ರವಾಹ ಪರಿಸ್ಥಿತಿ ಹಾಗೆ ಮುಂದುವರಿದಿದೆ. ಜಿಲ್ಲೆಯ ಕಾಳಜಿ ಕೇಂದ್ರಗಳಲ್ಲಿ 514 ಜನರು ಆಶ್ರಯ ಪಡೆದಿದ್ದಾರೆ. ಜಿಲ್ಲೆಯಲ್ಲಿ ಭಾನುವಾರ 1 ಮನೆಗೆ ಭಾಗಶಃ ಹಾನಿಯಾಗಿದ್ದು, ಕಾರವಾರದ 2, ಅಂಕೋಲಾದ 1, ಹೊನ್ನಾವರದ 7 ಮತ್ತು ಕುಮಟಾದ 2 ಸೇರಿದಂತೆ ಒಟ್ಟು 12 ಕಾಳಜಿ ಕೇಂದ್ರಗಳಲ್ಲಿ 514 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ.ಲಿಂಗನಮಕ್ಕಿ ಹಾಗೂ ಗೇರುಸೊಪ್ಪ ಜಲಾಶಯದಿಂದ ನೀರನ್ನು ನಿರಂತರವಾಗಿ ಹೊರಬಿಡಲಾಗುತ್ತಿದೆ. ಇದರ ಪರಿಣಾಮವಾಗಿ ಶರಾವತಿ ನದಿಯ ಎರಡೂ ದಂಡೆಗಳ ಕೆಲವು ಮನೆಗಳು ಜಲಾವೃತವಾದರೆ, ಹಲವು ಮನೆಗಳು ಜಲಾವೃತವಾಗುವ ಆತಂಕ ಎದುರಿಸುತ್ತಿವೆ. ಇದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಆ ಮನೆಗಳಲ್ಲಿನ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಸಿದ್ದಾಪುರದಲ್ಲಿ ಭಾರಿ ಮಳೆಯಾದ ಹಿನ್ನೆಲೆ ಶನಿವಾರ ಹೊನ್ನಾವರದ ಗುಂಡಬಾಳ ನದಿಯಲ್ಲಿ ಭಾರಿ ಪ್ರವಾಹ ಬಂದು ಮನೆಗಳು ಜಲಾವೃತವಾಗಿದ್ದವು. ನದಿತೀರದ ಜನರಿಗೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿತ್ತು. ಆದರೆ ಭಾನುವಾರ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದರಿಂದ ಜನತೆ ಕಾಳಜಿ ಕೇಂದ್ರಗಳಿಂದ ತಮ್ಮ ತಮ್ಮ ಮನೆಗಳಿಗೆ ಮರಳಿದ್ದಾರೆ.ಭಾನುವಾರ ಕರಾವಳಿ ಹಾಗೂ ಘಟ್ಟದ ಮೇಲಿನ ತಾಲೂಕುಗಳಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ನಿರಂತರವಾಗಿ ಮಳೆ ಬರುತ್ತಿಲ್ಲ. ಆಗಾಗ ಮಾತ್ರ ಭಾರಿ ಮಳೆ ಬರುತ್ತಿದೆ. ಇದರಿಂದ ನೀರು ಸಂಗ್ರಹವಾಗದೆ ಹರಿದುಹೋಗುತ್ತಿದೆ. ಅಂಕೋಲಾದ ಕೇಣಿ ಗಾಂವಕಾರವಾಡದಲ್ಲಿ ಅಬ್ಬರಿಸಿದ ಕೇಣಿಹಳ್ಳ ಶಾಂತವಾಗಿದೆ. ಅಲ್ಲಿ ಕಾಳಜಿ ಕೇಂದ್ರಗಳಲ್ಲಿ ವಾಸ್ತವ್ಯ ಮಾಡಿದ್ದ ಜನರು ತಮ್ಮ ತಮ್ಮ ಮನೆಗಳಿಗೆ ಮರಳುತ್ತಿದ್ದಾರೆ. ಕಾರವಾರ ತಾಲೂಕಿನ ಅರಗಾ, ಚೆಂಡಿಯಾ, ಈಡೂರುಗಳಲ್ಲೂ ಮನೆಗಳ ಸುತ್ತಮುತ್ತ ನೆಲೆಸಿದ್ದ ನೀರು ಹೊರಹೋಗಿದೆ. ಕುಮಟಾದಲ್ಲಿ ಅಬ್ಬರಿಸುತ್ತಿದ್ದ ಚಂಡಿಕಾ ನದಿಯಲ್ಲಿ ನೀರಿನ ಮಟ್ಟ ಇಳಿದಿದೆ. ತಿಂಗಳ ಕಾಲ ಬಿಟ್ಟೂ ಬಿಡದೆ ಸುರಿಯುತ್ತಿದ್ದ ಮಳೆ ಜಿಲ್ಲೆಯ ಜನರನ್ನು ಹೈರಾಣಾಗಿಸಿದೆ. ಗುಡ್ಡ ಕುಸಿತ, ಕೊಚ್ಚಿಹೋದ ರಸ್ತೆ, ಸೇತುವೆಗಳು, ಕುಸಿದ ಮನೆಗಳು, ಜಲಾವೃತವಾದ ಮನೆಗಳು ಹೀಗೆ ಜಿಲ್ಲೆಯ ಜನಜೀವನ ಅಸ್ತವ್ಯಸ್ತವಾಗಿದೆ. ಸಹಜ ಸ್ಥಿತಿಗೆ ಬರಲು ಇನ್ನೂ ಸಮಯ ಬೇಕಾಗಲಿದೆ.

ಸಾಧ್ಯವಾಗದ ಶೋಧ

ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಮೂವರ ಶವ ಇನ್ನೂ ಪತ್ತೆಯಾಗಬೇಕಿದೆ. ಶವಗಳ ಪತ್ತೆಗೆ ಮುಳುಗುತಜ್ಞ ಈಶ್ವರ ಮಲ್ಪೆ ತಮ್ಮ ಸಂಗಡಿಗರೊಂದಿಗೆ ಭಾನುವಾರ ಸ್ಥಳಕ್ಕೆ ಆಗಮಿಸಿದ್ದರು. ಆದರೆ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ಅಧಿಕಾರಿಗಳು ಸುರಕ್ಷತಾ ದೃಷ್ಟಿಯಿಂದ ಪರವಾನಗಿ ನೀಡದೆ ಇರುವುದರಿಂದ ಶೋಧ ಕಾರ್ಯ ಸಾಧ್ಯವಾಗಲಿಲ್ಲ.

ಕಳಚೆಯಲ್ಲಿ ಮತ್ತೆ ಭೂಕುಸಿತಯಲ್ಲಾಪುರ: 2021ರಲ್ಲಿ ಭಾರೀ ಪ್ರಮಾಣದ ಭೂಕುಸಿತ ಕಂಡಿದ್ದ ಕಳಚೆಯಲ್ಲಿ ಶನಿವಾರ ರಾತ್ರಿ ಮತ್ತೆ ಕುಸಿತವಾಗಿದೆ. ಕಳಚೆಯ ಮಾನಿಗದ್ದೆ ಕುಂಬ್ರಿಯ ಕಮಲಾಕರ್ ಭಾಗ್ವತ್ ಅವರ ಮನೆ ಮುಂದೆ ದೊಡ್ಡ ಪ್ರಮಾಣದಲ್ಲಿ ಭೂಮಿ ಕುಸಿದಿದೆ. ಜನಾರ್ದನ ಹೆಬ್ಬಾರ್ ಅವರ 1 ಎಕರೆ ತೋಟ ಮಣ್ಣುಪಾಲಾಗಿದೆ. ಉದಯ್ ಐತಾಳ್ ಅವರ ಮನೆ ಪಕ್ಕದಲ್ಲಿ ಸಹ ಭೂಮಿ ಸಡಿಲಗೊಂಡಿದ್ದು, ಹಂತ- ಹಂತವಾಗಿ ಮಣ್ಣು ಕುಸಿಯುತ್ತಿದೆ.

ಕಳೆದ ಒಂದು ವಾರದ ಹಿಂದೆ ಸಹ ಅಲ್ಪ ಪ್ರಮಾಣದ ಭೂಕುಸಿತ ಉಂಟಾಗಿತ್ತು. ಶನಿವಾರ ರಾತ್ರಿ ಮತ್ತೆ ಭೂಮಿ ಸಡಿಲಗೊಂಡಿದ್ದು, ಭಾನುವಾರ ಬೆಳಗ್ಗೆ ಕುಸಿತದ ಪ್ರಮಾಣ ನೋಡಿ ಜನ ಆತಂಕಕ್ಕೆ ಒಳಗಾಗಿದ್ದಾರೆ.ಭೂಕುಸಿತ ಹೀಗೆ ಮುಂದುವರಿದಲ್ಲಿ ಆ ಭಾಗದಲ್ಲಿ ವಾಸಿಸುವುದು ಕಷ್ಟ ಎನ್ನುವ ಅಭಿಪ್ರಾಯ ಕೇಳಿಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಕೂಡಲೇ ಸ್ಥಳಾಂತರವಾಗುವಂತೆ ಸೂಚಿಸಿದ್ದಾರೆ. ಆದರೆ, ಪುನರ್ವಸತಿ ಕಲ್ಪಿಸಿಲ್ಲ ಎಂಬುದು ಜನರ ದೂರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ