ಹರಿಹರ: ಶಿಕ್ಷಕರಾದವರಿಗೆ ತಮ್ಮ ಕ್ಷೇತ್ರದಲ್ಲಿ ತಲ್ಲೀನತೆ, ಸಮರ್ಪಣಾ ಮನೋಭಾವ ಇರಬೇಕು ಎಂದು ಎಆರ್‌ಡಿವೈಎಸ್ಪಿ ಪ್ರಕಾಶ್ ಪಿ.ಬಿ. ಹೇಳಿದರು.
ಶಿಕ್ಷಕರು ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತೆಗೆಯಲು ಇಂತಹ ಕಾರ್ಯಗಾರಗಳು ಅತ್ಯಂತ ಪ್ರಮುಖವಾದವುಗಳು. ಕಾರ್ಯಕ್ರಮದ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ತಾರ್ಕಿಕ ವಿಶ್ಲೇಷಣೆ ಹಾಗೂ ಜ್ಞಾನವನ್ನು ಜೀವನದೊಂದಿಗೆ ಸಂಪರ್ಕಿಸುವ ಕೌಶಲ್ಯವನ್ನು ಬೆಳೆಸುವುದು ಆಗಿದೆ. ಇದು ಕೇವಲ ಪಠ್ಯ ವಿಷಯವಲ್ಲ. ವಿದ್ಯಾರ್ಥಿಗಳ ಚಿಂತನಾ ಸಾಮರ್ಥ್ಯವನ್ನು ವಿಸ್ತರಿಸುವ ಮಹತ್ವದ ಸಾಧನವಾಗಿದೆ. ಶಿಕ್ಷಕರು ಜ್ಞಾನ ಸಿದ್ಧಾಂತ ವಿಧಾನವನ್ನು ಅಳವಡಿಸಿಕೊಂಡರೆ, ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿಗಳಾದ ಪೋದಾರ್ ಇಂಟರ್ನ್ಯಾಷನಲ್ ಶಾಲೆಯ ಪ್ರಾಂಶುಪಾಲೆ ಪಲ್ಕೂರಿ ರೇವತಿ ಹಾಗೂ ಅರ್ಕ ಸಂಸ್ಥೆಯ ಮುಖ್ಯಸ್ಥ ಸಂದೀಪ್ ಜೈನ್ ಜ್ಞಾನ ಸಿದ್ಧಾಂತದ ಉದ್ದೇಶಗಳನ್ನು ತಿಳಿಸುತ್ತ, ಇದು ಜ್ಞಾನ ಪಡೆಯುವ ವಿಧಾನಗಳು, ವಾಸ್ತವ ಉದಾಹರಣೆಗಳ ಮೂಲಕ ಬೋಧನೆ, ಚರ್ಚಾಧಾರಿತ ಕಲಿಕೆ, ಪ್ರಶ್ನೋತ್ತರ ವಿಧಾನ, ಹಾಗೂ ಮೌಲ್ಯಮಾಪನ ತಂತ್ರಗಳ ಬಗ್ಗೆ ವಿವರವಾಗಿ ತಿಳಿಸುತ್ತದೆ ಎಂದರು. ಕಾರ್ಯಾಗಾರದಲ್ಲಿ ಗುಂಪು ಚಟುವಟಿಕೆಗಳು, ಪ್ರಸ್ತುತಿಗಳು ಹಾಗೂ ಸಂವಾದಾತ್ಮಕ ಅಧಿವೇಶನಗಳು ನಡೆಯಿತು.ಕಾರ್ಯಕ್ರಮದ ಕೊನೆಯಲ್ಲಿ ಪಾಲ್ಗೊಂಡವರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಸಂಘಟಕರು ಮುಂದಿನ ದಿನಗಳಲ್ಲಿ ಇನ್ನಷ್ಟು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.