- ಶೆಟ್ಟಿಕೊಪ್ಪ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಗೆ ಶ್ರೀಗಳಿಂದ ವಿಶೇಷ ಪೂಜೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಭಗವಂತನ ಸಾನ್ನಿಧ್ಯದಲ್ಲಿ ತಮ್ಮ ಭಕ್ತಿ ಸಮರ್ಪಿಸಿಕೊಂಡರೆ ಎಷ್ಟೋ ಸಮಸ್ಯೆಗೆ ಪರಿಹಾರ ಸಿಗಬಲ್ಲದು ಎಂದು ಶ್ರೀ ಜ್ವಾಲಾ ಮಾಲಿನಿ ಕ್ಷೇತ್ರದ ಪೀಠಾಧಿಪತಿ ಶ್ರೀಮದಭಿನವ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಹೇಳಿದರು.
ಸೋಮವಾರ ತಾಲೂಕಿನ ಶೆಟ್ಟಿಕೊಪ್ಪದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಡೆದ ಮಕರ ಸಂಕ್ರಾಂತಿ ಕಾರ್ಯಕ್ರಮ ದಲ್ಲಿ ಆಶೀರ್ವಚನ ನೀಡಿ, ಗಂಗೆಗೆ ಬಾಗಿನ ನೀಡುವುದು ಹಿಂದೂ ಧರ್ಮದ ಆಚರಣೆ ಒಂದು ಭಾಗವಾಗಿದೆ. ನಮ್ಮ ದೇಶದ 3 ದಿಕ್ಕಿನಲ್ಲಿಯೂ ಕೂಡ ನೀರು ಆವರಿಸಿದೆ. ನದಿ, ಹಳ್ಳ, ಕೆರೆಗಳು ಈ ದೇಶದ ಸಂಪತ್ತುಗಳಾಗಿವೆ. ಸಕಲ ಜೀವ ರಾಶಿಗಳಿಗೂ ಇದರ ಅವಶ್ಯಕತೆ ಇದೆ. ಅತಿವೃಷ್ಟಿ, ಅನಾವೃಷ್ಟಿ ಬಾರದಂತೆ ಗಂಗೆ ಎಲ್ಲರನ್ನೂ ಕಾಪಾಡಲಿ. ನೀರಿಲ್ಲದೆ ಯಾವ ಜೀವರಾಶಿಗೂ ಬದುಕಲು ಸಾಧ್ಯವೇ ಇಲ್ಲ. ಆದ್ದರಿಂದ ಪ್ರತಿಯೊಬ್ಬ ಮನುಷ್ಯ ನೀರಿನ ಮಹತ್ವ ಅರಿತು, ಜಲ ಸಂರಕ್ಷಣೆ ಕಾರ್ಯಕ್ಕೆ ಪಣತೊಡಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಅಧ್ಯಕ್ಷ ಗಾಂಧಿಗ್ರಾಮ ನಾಗರಾಜು ಮಾತನಾಡಿ, ಬಸ್ತಿ ಮಠಕ್ಕೂ ಅಯ್ಯಪ್ಪಸ್ವಾಮಿ ದೇಗುಲಕ್ಕೂ ಅವಿನಾಭಾವ ಸಂಬಂಧವಿದೆ. ಬಸ್ತಿ ಮಠದ ಈ ಹಿಂದಿನ ಶ್ರೀಗಳು ವರ್ಷದಲ್ಲಿ ಒಮ್ಮೆಯಾದರೂ ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು. ಈಗಿನ ಶ್ರೀಗಳು ಸಹ ಮಕರ ಸಂಕ್ರಾಂತಿ ಹಬ್ಬಕ್ಕೆ ಬಂದು ಆಶೀರ್ವಾಚನ ಮಾಡುತ್ತಾರೆ ಎಂದರು.ಬಸ್ತಿಮಠದ ಶ್ರೀಗಳು ಶೆಟ್ಟಿಕೊಪ್ಪದ ದೊಡ್ಡಕೆರೆಯಲ್ಲಿ ವಿದ್ಯುತ್ ಅಲಂಕೃತಗೊಂಡಿದ್ದ ಶ್ರೀ ಅಯ್ಯಪ್ಪಸ್ವಾಮಿ ಪ್ರತಿಬಿಂಬದ ಬಳಿ ಪೂಜೆ ಸಲ್ಲಿಸಿ ಗ್ರಾಮಸ್ಥರ ಪರವಾಗಿ ಕೆರೆಗೆ ಬಾಗಿನ ಸಮರ್ಪಿಸಿದರು.
ಕಡಹಿನಬೈಲು ಗ್ರಾ.ಪಂ. ಅಧ್ಯಕ್ಷೆ ಶೈಲಾಮಹೇಶ್, ಸದಸ್ಯರುಗಳಾದ ಎ.ಬಿ.ಮಂಜುನಾಥ್, ವಾಣಿನರೇಂದ್ರ, ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ಎನ್.ಎಂ.ಕಾಂತರಾಜ್, ಕಾರ್ಯದರ್ಶಿ ವೆಂಕಟೇಶ್, ಮಾಜಿ ಅಧ್ಯಕ್ಷ ಬಿ.ಕೆ.ಉದಯಕರ್, ರೈತ ಮುಖಂಡರಾದ ಬಿ.ಕೆ.ರವೀಂದ್ರ, ಲೋಹಿತಾಶ್ವ, ಬಿ.ಆರ್.ಮಂಜುನಾಥ್, ಮಹಿಳಾ ಸಂಘದ ಅಧ್ಯಕ್ಷೆ ಸುನಂದ, ಕಾರ್ಯದರ್ಶಿ ಸುಧಾಲೋಹಿತಾಶ್ವ, ಸದಸ್ಯರಾದ ಭಾರತಿ ಅರವಿಂದಾಚಾರ್, ಎಸ್.ವಿ.ಗಾಯತ್ರಿ, ದಾನಮ್ಮ, ಶಾಲಿನಿ, ಪುಷ್ಪಾ, ಮುಖಂಡರಾದ ಪ್ರಶಾಂತ್, ಎ.ಬಿ.ಚಂದ್ರಶೇಖರ್, ವಾವುಟ್ಟಿ ಗುರುಸ್ವಾಮಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.