ರಾಜ್ಯ ಪೊಲೀಸ್‌ ಸಿಬ್ಬಂದಿಗೆ 5 ಬಂಪರ್‌ ಗಿಫ್ಟ್‌ ಘೋಷಿಸಿದ ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Jan 17, 2024, 01:45 AM ISTUpdated : Jan 17, 2024, 11:44 AM IST
ಪೊಲೀಸರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯ ಪೊಲೀಸರಿಗೆ 5 ಉಡುಗೊರೆಯನ್ನು ನೀಡಿದ್ದು, ವೈದ್ಯಕೀಯ ವೆಚ್ಚವನ್ನು 1500 ರುಗೆ ಹೆಚ್ಚಳ, ಸೇರಿ ಹಲವು ಪೊಲೀಸ್‌ ಸ್ನೇಹ ಯೋಜನೆಗಳನ್ನು ಘೋಷಿಸಿದ್ದಾರೆ. ಈ ಮೂಲಕ ಪೊಲೀಸರಿಗೆ ಸೌಲಭ್ಯ ಕಲ್ಪಿಸಲು ಸಿಎಂ ಕರೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರುವೈದ್ಯಕೀಯ ತಪಾಸಣಾ ಭತ್ಯೆ 500 ರು. ಹೆಚ್ಚಳ, ಭವ್ಯವಾದ ಸುವರ್ಣ ಪೊಲೀಸ್‌ ಭವನ ನಿರ್ಮಾಣ, ಕರ್ನಾಟಕ ಏಕೀಕರಣದ ಸುವರ್ಣ ಮಹೋತ್ಸವದ ಪ್ರಯುಕ್ತ ಎಲ್ಲಾ ಪೊಲೀಸ್‌ ಸಿಬ್ಬಂದಿಗೆ ಬೆಳ್ಳಿ ಪದಕ ಸೇರಿದಂತೆ ರಾಜ್ಯ ಪೊಲೀಸ್ ಸಿಬ್ಬಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರ್ಜರಿ ಕೊಡುಗೆಗಳನ್ನು ಘೋಷಿಸಿದ್ದಾರೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಕಚೇರಿಯಲ್ಲಿ ಮಂಗಳವಾರ ನಡೆದ ಹಿರಿಯ ಪೊಲೀಸ್‌ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಪೊಲೀಸರಿಗೆ ಕೊಡುಗೆ ಘೋಷಿಸಿ ಮಾತನಾಡಿದರು.ಕರ್ನಾಟಕ ಏಕೀಕರಣ ಸುವರ್ಣ ಮಹೋತ್ಸವದ ಪ್ರಯುಕ್ತ ರಾಜ್ಯದಲ್ಲಿ ಭವ್ಯವಾದ ಸುಸಜ್ಜಿತ ಸುವರ್ಣ ಪೊಲೀಸ್‌ ಭವನ ನಿರ್ಮಿಸಲಾಗುವುದು. 

ಇದಕ್ಕೆ ಬಜೆಟ್‌ನಲ್ಲಿ ಹಣ ನಿಗದಿ ಮಾಡಲಾಗುವುದು. ಕರ್ನಾಟಕ ಏಕೀಕರಣಕ್ಕೂ ಮುನ್ನ ಮೈಸೂರು ರಾಜ್ಯ ಪೊಲೀಸ್ ಎಂದು ಹೆಸರಿತ್ತು. ಏಕೀಕರಣ ಬಳಿಕ ಕರ್ನಾಟಕ ರಾಜ್ಯ ಪೊಲೀಸ್‌ ಎಂದು ಹೆಸರು ಬದಲಾಗಿತ್ತು. 

ಈ ಹೆಸರು ಬದಲಾಗಿ 50 ವರ್ಷ(ಸುವರ್ಣ ಮಹೋತ್ಸವ) ತುಂಬಿರುವ ಹಿನ್ನೆಲೆಯಲ್ಲಿ ರಾಜ್ಯ ಎಲ್ಲಾ ಪೊಲೀಸ್‌ ಸಿಬ್ಬಂದಿಗೆ ಬೆಳ್ಳಿ ಪದಕ ನೀಡುವುದಾಗಿ ಹೇಳಿದರು.

ವೈದ್ಯಕೀಯ ತಪಾಸಣಾ ಭತ್ಯೆ ₹500 ಏರಿಕೆ: ರಾಜ್ಯದ ಎಲ್ಲಾ ಪೊಲೀಸ್‌ ಸಿಬ್ಬಂದಿಯ ವಾರ್ಷಿಕ ವೈದ್ಯಕೀಯ ತಪಾಸಣಾ ಭತ್ಯೆಯನ್ನು 1000 ರು.ಗಳಿಂದ 1,500 ರು.ಗೆ ಏರಿಕೆ ಮಾಡಲಾಗುವುದು. 2013ರಲ್ಲಿ ನಮ್ಮ ಸರ್ಕಾರವೇ ಈ ವಾರ್ಷಿಕ ವೈದ್ಯಕೀಯ ತಪಾಸಣಾ ಭತ್ಯೆಯನ್ನು ಹೆಚ್ಚಳ ಮಾಡಿತ್ತು. ಇದೀಗ ಮತ್ತೆ ನಮ್ಮ ಸರ್ಕಾರವೇ ಏರಿಕೆ ಮಾಡುತ್ತಿದೆ ಎಂದರು.

ಪ್ರತಿ ಸೈಬರ್‌ ಠಾಣೆಗಳಿಗೆ ಎಸಿಪಿ/ಡಿವೈಎಸ್ಪಿ: ಇತ್ತೀಚೆಗೆ ರಾಜ್ಯದಲ್ಲಿ ಮಾದಕವಸ್ತು ಮತ್ತು ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚಳವಾಗುತ್ತಿವೆ. 

ಇವುಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗಳ ಮುಖ್ಯಸ್ಥರ ಹುದ್ದೆಯನ್ನು ಇನ್ಸ್‌ಪೆಕ್ಟರ್‌ನಿಂದ ಎಸಿಪಿ/ಡಿವೈಎಸ್ಪಿ ಹುದ್ದೆಗೆ ಮೇಲ್ದರ್ಜೆಗೇರಿಸಲಾಗುವುದು.

ಈ ಅಧಿಕಾರಿಗಳ ಅಡಿಯಲ್ಲಿ ಇನ್ಸ್‌ಪೆಕ್ಟರ್‌, ಸಬ್‌ ಇನ್ಸ್‌ಪೆಕ್ಟರ್‌ ಹಾಗೂ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.

ಬೆಂಗಳೂರು ನಗರಕ್ಕೆ 8 ಹೆಚ್ಚುವರಿ ಡಿಸಿಪಿ ಹುದ್ದೆ ಸೃಜನೆ: ಬೆಂಗಳೂರು ನಗರದ ಜನಸಂಖ್ಯೆ 1.50 ಕೋಟಿಗೆ ಏರಿಕೆಯಾಗಿದೆ. ಅಪರಾಧ ನಿಯಂತ್ರಣ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ನಗರದಲ್ಲಿ 8 ಹೆಚ್ಚುವರಿ ಡಿಸಿಪಿ ಹುದ್ದೆಗಳನ್ನು ಸೃಷ್ಟಿಸಲಾಗುವುದು.

 ನಗರ ಪೊಲೀಸ್‌ ಘಟಕದಲ್ಲಿ 8 ವಿಭಾಗಗಳಿದ್ದು, 8 ಮಂದಿ ಡಿಸಿಪಿಗಳು ಇದ್ದಾರೆ. ಈ ಹೆಚ್ಚುವರಿ 8 ಡಿಸಿಪಿಗಳನ್ನು ಪ್ರತಿ ವಿಭಾಗಕ್ಕೆ ಒಬ್ಬರಂತೆ ನಿಯೋಜಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ