ಕನ್ನಡಪ್ರಭ ವಾರ್ತೆ ಹುಣಸೂರು
ಡಾ.ಬಿ.ಆರ್. ಅಂಬೇಡ್ಕರ್ ಅವರ 133ನೇ ಜಯಂತಿಯನ್ನು ದಲಿತ ಚಳವಳಿ ನವ ನಿರ್ಮಾಣ ವೇದಿಕೆ ಹಾಗೂ ಬುಡಕಟ್ಟು ಕೃಷಿಕರ ಸಂಘವು ಡೀಡ್ ಸಂಸ್ಥೆಯಲ್ಲಿ ಆಚರಿಸಿದರು.ಸಂವಿಧಾನದ ಆಶಯಗಳಂತೆ ಪ್ರತಿ ಪ್ರಜೆಗೂ ಸಮಾನ ಅವಕಾಶ ಕಲ್ಪಿಸುವ, ಗೌರವದಿಂದ ಬಾಳುವ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ ಹೊತ್ತು ಆಳುವ ಸರ್ಕಾರಗಳು ಕರ್ತವ್ಯ ನಿರ್ವಹಿಸಬೇಕು ಎಂದು ಒಮ್ಮತದ ಒತ್ತಾಯ ಮಾಡಿದವು.
ಡಾ. ಅಂಬೇಡ್ಕರ್‌ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ನವನಿರ್ಮಾಣ ವೇದಿಕೆಯ ಮುಖ್ಯಸ್ಥ ಹರಿಹರ ಆನಂದಸ್ವಾಮಿ ಅಸ್ಪೃಶ್ಯತೆಯು ಇನ್ನೂ ಕೂಡ ಸಾಮಾಜಿಕ ರೋಗವಾಗಿ ಉಳಿದಿದೆ. ಜಾತಿ, ಜಾತಿಗಳ ನಡುವೆ ಕಂದಕವಿದೆ. ಸಂವಿಧಾನದ ಆಶಯದಂತೆ ಪ್ರಜಾಸತಾತ್ಮಕ ಸಮಾಜ ನಿರ್ಮಾಣವಾಗುತ್ತಿಲ್ಲ. ಜಾತಿ ಧರ್ಮಗಳ ಎಲ್ಲೆ ಮೀರಿ ಜನತಂತ್ರ ವ್ಯವಸ್ಥೆಯ ನಡವಳಿಕೆಗಳನ್ನು ಮೈಗೂಡಿಸಿಕೊಂಡು ವಿಶ್ವಮಾನವನಾಗಿ ಪರಿವರ್ತನೆಯಾಗುವತ್ತ ಪ್ರತಿಯೊಬ್ಬರು ಬಾಬ ಸಾಹೇಬರು ನಿರ್ಮಿಸಿದ ಭಾರತದ ಸಂವಿಧಾನದ ಬೆಳಕಿನಲ್ಲಿ ಸಮಾನತೆಯ ಬಾಳನ್ನು ಬಾಳಲು ಮುಂದಾಗಬೇಕು ಎಂದರು.ಡೀಡ್ ಸಂಸ್ಥೆಯ ನಿರ್ದೇಶಕ ಡಾ.ಎಸ್. ಶ್ರೀಕಾಂತ್ ಮಾತನಾಡಿ, ಲೋಕಸಭಾ ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಸಂವಿಧಾನದ ಆಶಯದಂತೆ ಹಮ್ಮಿಕೊಳ್ಳಬೇಕಾದ ಕಾರ್ಯಗಳ ಕುರಿತು ಮಾತನಾಡದೆ, ಈ ಪಕ್ಷ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತಾರೆ. ಆ ಪಕ್ಷ ಅಧಿಕಾರಕ್ಕೆ ಬಂದರೆ ಹಿಂದುಗಳಿಗೆ ರಕ್ಷಣೆಇಲ್ಲ ಎಂಬ ಇತ್ಯಾದಿ ಅನಗತ್ಯ ಹೇಳಿಗಳನ್ನು ನೀಡುವ ಮೂಲಕ ಜನರಲ್ಲಿ ಹೆದರಿಕೆಗಳನ್ನು ಹುಟ್ಟು ಹಾಕುತ್ತಿವೆ. ಇದರ ಬದಲಾಗಿ ರಾಜಕೀಯ ಪಕ್ಷಗಳು ಸಂವಿಧಾನದ ಬೆಳಕಿನಲ್ಲಿ ಜನರಿಗಾಗಿ ತಾವು ಯಾವ ಯಾವ ಅಭಿವೃದ್ದಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತೇವೆ ಎಂಬುದರ ಬಗ್ಗೆ ಮಾತನಾಡಿದರೆ ಒಳ್ಳೆಯದು, ಸಂವಿಧಾನ ಬದಲಿಸುತ್ತಾರೆ ಎಂಬ ಭೀತಿಗೆ ಮತದಾರರು ಒಳಗಾಗುವ ಅಗತ್ಯವಿಲ್ಲ ಎಂದರು.
ದಸಂಸ ದೇವರಾಜು, ಮಹಿಳಾ ಘಟಕದ ರತ್ನಮ್ಮ ಹಾಗೂ ನವ ನಿರ್ಮಾಣ ವೇದಿಕೆಯ ತಾಲೂಕು ಸಂಚಾಲಕ ದರ್ಶನ್ ಮಾತನಾಡಿದರು.ಬುಡಕಟ್ಟು ಕೃಷಿಕರ ಸಂಘದ ಪ್ರತಿನಿಧಿಗಳು ಹಾಗೂ ಆಮ್‌ಆದ್ಮಿ ಪಾರ್ಟಿಯ ತಾಲೂಕು ಅಧ್ಯಕ್ಷ ಮೊಹಿದ್ದೀನ್ ಪಾಲ್ಗೊಂಡಿದ್ದರು.