ಕನ್ನಡಪ್ರಭ ವಾರ್ತೆ ಹೊಸದುರ್ಗ
ಪಾರಂಪರಿಕ ಕಲ್ಲು ಒಡೆಯುವವರಿಗೆ ಡೀಮ್ಡ್ ಫಾರಿಸ್ಟ್, ಬಲಾಢ್ಯರು ಕ್ರಷರ್ ಮಾಡಲು ಡೀಮ್ಡ್ ಫಾರೆಸ್ಟ್ ಅಲ್ವಾ? ಎಂದು ಮಾಜಿ ಸಚಿವ ಗೂಳಿಹಟ್ಟಿ ಡಿ.ಶೇಖರ್ ಪ್ರಶ್ನಿಸಿದರು.ಪಟ್ಟಣದ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂಬಾಗ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿ ಮಾತನಾಡಿದ ಅವರು, ಮದುರೆ ರಿ.ಸ. ನಂ.88ರಲ್ಲಿ ತಲ ತಲಾಂತರಗಳಿಂದ ವಡ್ಡರು ಕಲ್ಲು ಒಡೆದು ಜೀವನ ಮಾಡುತ್ತಿದ್ದಾರೆ. ಅಂತವರ ಮೇಲೆ ಹೊಸದಾಗಿ ಬಂದಿರುವ ವಲಯ ಅರಣ್ಯಾಧಿಕಾರಿ ಸುನಿಲ್ ಎಂಬಾತರು, ಇದು ಡೀಮ್ಡ್ ಅರಣ್ಯ ಪ್ರದೇಶವಾಗಿದ್ದು ಇಲ್ಲಿ ಕಲ್ಲು ಒಡೆಯಬಾರದು ಎಂದು ಬೆದರಿಕೆ ಹಾಕಿದ್ದಾರೆ. ಆದರೆ ಅದೇ ಪ್ರದೇಶದಲ್ಲಿ ಕೆಲವು ಬಲಾಢ್ಯರು ಕ್ರಷರ್ ನಡೆಸಲು ಹೇಗೆ ಅವಕಾಶ ನೀಡಿದ್ದೀರೀ ಎಂದು ಅಧಿಕಾರಿಗಳ ವಿರುದ್ಧ ಅವರು ಹರಿಹಾಯ್ದರು.
ಬ್ರಹ್ಮವಿದ್ಯಾನಗರದ ಭಗೀರಥ ಪೀಠದ ಜಮೀನು ಇರುವುದು ಸರ್ಕಾರಿ ಜಾಗದಲ್ಲಿಯೇ. ಅದೇ ಜಾಗಕ್ಕೆ ಹೊಂದಿಕೊಂಡಂತೆ ಶೇಖರಪ್ಪ ಎಂಬಾತ ಕಳೆದ ನಾಲ್ಕೈದು ದಶಕಗಳಿಂದ ಜಮೀನು ಉಳುಮೆ ಮಾಡಿಕೊಂಡು ತೆಂಗು, ಅಡಿಕೆ ಮರ ಬೆಳೆಸಿದ್ದಾರೆ. ಇದೇ ವಲಯ ಅರಣ್ಯಾಧಿಕಾರಿ ಸುನಿಲ್, ತನ್ನ ಸಿಬ್ಬಂದಿಯೊಂದಿಗೆ ತೆರಳಿ ಸುಮಾರು 2 ಸಾವಿರ ಅಡಿಕೆ ಮರಗಳನ್ನು ಕತ್ತರಿಸಿ ಬಂದಿದ್ದಾರೆ. ಇದು ಮನುಷ್ಯತ್ವ ಇರುವವರು ಮಾಡುವ ಕೆಲಸವೇ ಎಂದು ಪ್ರಶ್ನಿಸಿದರು.ರಾಜ್ಯದಲ್ಲಿ ಸಿದ್ದರಾಮಯ್ಯ ರವರು ನಾನು ಪರಿಶಿಷ್ಠ ಜಾತಿ, ಪಂಗಡ ಹಿಂದಳಿದವರ ಪರ ಎನ್ನುತ್ತಾರೆ. ಆದರೆ ಹೊಸದುರ್ಗದಲ್ಲಿ ಪರಿಶಿಷ್ಠರನ್ನು ತುಳಿಯುವ ಕೆಲಸವಾಗುತ್ತಿದೆ. ರಾಜ್ಯದಲ್ಲಿರುವ ಕಾನೂನು ಹೊಸದುರ್ಗಕ್ಕೆ ಅನ್ವಯಿಸುವುದಿಲ್ಲವೇ, ಕಾನೂನು ಹೇಳುವ ಅಧಿಕಾರಿಗಳೇ ಕಾನೂನಿನಂತೆ ನಡೆದುಕೊಳ್ಳಿ. ಅಮಾಯಕರ ಮೇಲೆ ದಬ್ಬಾಳಿಕೆ ಸರಿಯಲ್ಲ. ಅಮಾಯಕ ರೈತನ ಜಮೀನಿಗೆ ತೆರಳಿ ಅಡಿಕೆ ಮರ ಕತ್ತರಿಸಿರುವ ನಿಮಗೆ ತಾಕತ್ತಿದ್ದರೆ, ಅದೇ ಸರ್ವೇ ನಂಬರಿನಲ್ಲಿ 600 ಎಕೆರೆ ಪ್ರದೇಶದಲ್ಲಿ ಭಗೀರಥ ಮಠದಿಂದ ಬೆಳೆಸಲಾಗಿರುವ ತೆಂಗು, ಅಡಿಕೆ ಮರಗಳನ್ನು ಕತ್ತರಿಸಿ ಬನ್ನಿ ಎಂದು ಸವಾಲು ಹಾಕಿದರು.
ನಂತರ ಸ್ಥಳಕ್ಕಾಗಮಿಸಿದ ಎಸಿಎಫ್ ರಮೇಶ್ ಹಾಗೂ ಹೊಸದುರ್ಗ ಠಾಣೆ ಇನ್ಸ್‌ಪೆಕ್ಟರ್ ತಿಮ್ಮಣ್ಣ ಮಾಜಿ ಸಚಿವರನ್ನು ಮನವೊಲಿಸಲು ಪ್ರಯತ್ನಿಸಿದರಾದರೂ ಒಪ್ಪದ ಗೂಳಿಹಟ್ಟಿ ಶೇಖರ್ ಅವರು, ಆರ್‌ಎಫ್‌ಓ ಸುನಿಲ್‌ರನ್ನು ಮೊದಲು ಅಮಾನತ್ತು ಮಾಡಿ ನಂತರ ನನ್ನ ಬಳಿ ಬನ್ನಿ, ಇಲ್ಲವೇ ಅಮಾಯಕ ರೈತ ಬೆಳೆದ ಅಡಿಕೆ ಮರಗಳನ್ನು ಕತ್ತರಿಸಿದ ಹಾಗೆ ಅದೇ ಅರಣ್ಯ ಪ್ರದೆಶದಲ್ಲಿ ಮಠದವರು ಬೆಳೆಸಿರುವ ಮರಗಳನ್ನು ಕಡಿದು ಬನ್ನಿ. ನಾನೂ ಏನು ಮಾತನಾಡದೆ ಎದ್ದು ಹೋಗುತ್ತೇನೆ ಎಂದ ಅವರು, ಅಕ್ರಮವಾಗಿ ಬಲಾಢ್ಯರಿಗೆ ಕ್ರಷರ್ ನಡೆಸಲು ಅವಕಾಶ ಕಲ್ಪಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.ಸಂಜೆ ವೇಳೆಗೆ ಜಿಲ್ಲಾ ಅರಣ್ಯಾಧಿಕಾರಿ ರಾಜಪ್ಪ ಸ್ಥಳಕ್ಕಾಗಮಿಸಿ ಗೂಳಿಹಟ್ಟಿ ಶೇಖರ್ ಅವರೊಂದಿಗೆ ಮಾತುಕತೆ ನಡೆಸಿ ನಮಗೆ ಸಮಯಾವಕಾಶ ಕೊಡಿ, ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ. ಉಪವಾಸ ಸತ್ಯಾಗ್ರಹ ಹಿಂಪಡೆಯಿರಿ ಎಂದು ಮನವೊಲಿಸುವ ಪ್ರಯತ್ನ ನಡೆಯಿತಾದರೂ ಫಲಕಾರಿಯಾಗಲಿಲ್ಲ. ಸಂಜೆಯಾದರೂ ಸತ್ಯಾಗ್ರಹ ಮುಂದುವರೆದಿತ್ತು.
ಉಪವಾಸ ಸತ್ಯಾಗ್ರಹ ಹಿಂಪಡೆದ ಮಾಜಿ ಸಚಿವ:ಉಪವಾಸ ಸತ್ಯಾಗ್ರಹ ಕುಳಿತಿದ್ದ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರಿಗೆ ಸತ್ಯಾಗ್ರಹ ಹಿಂಪಡೆಯುವಂತೆ ಸೋಮವಾರ ದಿನವೀಡಿ ಅಧಿಕಾರಿಗಳು ಪ್ರಯತ್ನಿಸಿದರಾದರೂ ಒಪ್ಪದೆ ಮಂಗಳವಾರವೂ ಮುಂದುವರೆದಿತ್ತು. ಆದರೆ ಮಂಗಳವಾರ ಬೆಳಗ್ಗೆ ವಲಯ ಅರಣ್ಯಾಧಿಕಾರಿ ಸುನಿಲ್, ಮಾಜಿ ಸಚಿವರ ಹಿತೈಶಿಗಳು ಹಾಗೂ ಬೆಂಬಲಿಗರೊಂದಿಗೆ ಬಂದು ಮಾತುಕತೆ ನಡೆಸಿ ಮುಂದೆ ಇಂತಹ ಘಟನೆಗಳಿಗೆ ಅವಕಾಶ ನೀಡದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.
ನಂತರ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ ಗೂಳಿಹಟ್ಟಿ ಶೇಖರ್ ಅವರು, ಇದು ಎಚ್ಚರಿಕೆ ಮಾತ್ರ. ಮುಂದೆ ಇಂತಹ ಘಟನೆಗಳು ನಡೆದರೆ ನಾನು ವಿಧಾನಸೌಧದ ಮುಂಭಾಗ ಧರಣಿ ಸತ್ಯಾಗ್ರಹ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದರು. ಅಲ್ಲದೆ ಪಾರಂಪರಿಕವಾಗಿ ಕಲ್ಲು ಒಡೆದುಕೊಂಡು ಬಂದಿರುವ ಪರಿಶಿಷ್ಠ ಜನಾಂಗದವರಿಗೆ ಅರಣ್ಯ ಪ್ರದೇಶದಲ್ಲಿ ಅವಕಾಶ ನೀಡಬೇಕು. ಅಲ್ಲದೆ ಅಕ್ರಮವಾಗಿ ಕ್ರಷರ್‌ಗೆ ಅವಕಾಶ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಎಚ್ಚರಿಕೆ ನೀಡಿ ತಮ್ಮ ಸತ್ಯಾಗ್ರಹವನ್ನು ವಾಪಸ್ ಪಡೆದರು.ಈ ವೇಳೆ ಎಸಿಎಫ್ ರಮೇಶ್, ಪಿಐ ತಿಮ್ಮಣ್ಣ ಹಾಜರಿದ್ದರು.