ಕನ್ನಡಪ್ರಭ ವಾರ್ತೆ ಮಂಡ್ಯ
ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ನಡುವೆ ದೊಡ್ಡ ತಲೆನೋವಾಗಿರುವ ಡೀಮ್ಡ್ ಫಾರೆಸ್ಟ್ ಸರ್ವೇಯನ್ನು ಶೀಘ್ರ ಪೂರ್ಣಗೊಳಿಸುವಂತೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ನೀಡಿದರು.ಶನಿವಾರ ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಡೀಮ್ಡ್ ಫಾರೆಸ್ಟ್ ಜಿಲ್ಲೆಯಲ್ಲಿ ದೊಡ್ಡ ಸಮಸ್ಯೆಯಾಗಿದೆ. ನಾಲ್ಕಾರು ಗಿಡಗಳನ್ನು ನೆಟ್ಟು ಅದನ್ನು ಡೀಮ್ಡ್ ಫಾರೆಸ್ಟ್ ಎನ್ನುತ್ತಾರೆ. ರೈತರಿಗೆ ಅದರ ಬಗ್ಗೆ ಅರಿವಿಲ್ಲ. ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಸರ್ವೇ ನಡೆಸುವಂತೆ ಸಚಿವರು ನಿರ್ದೇಶನ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಕುಮಾರ, ಸರ್ವೇಗೆ ಸಂಬಂಧಿಸಿದಂತೆ ಮೊಬೈಲ್ ಅಪ್ಲಿಕೇಷನ್ ನೀಡುವುದಾಗಿ ತಿಳಿಸಿದ್ದು, ಅದು ಬಂದ ನಂತರವಷ್ಟೇ ಸರ್ವೇ ನಡೆಸಲಾಗುವುದು ಎಂದರು.ಜಿಲ್ಲೆಯಲಿ ರಸಗೊಬ್ಬರ ದಾಸ್ತಾನಿನ ಬಗ್ಗೆ ರೈತಸಂಪರ್ಕ ಕೇಂದ್ರ, ಸೊಸೈಟಿಗಳು ಹಾಗೂ ಖಾಸಗಿ ರೀಟೈಲ್ ಅಂಗಡಿಗಳ ಮುಂದೆ ನಿತ್ಯ ದಾಸ್ತಾನು ವಿವರ ಪ್ರಕಟಿಸುವಂತೆ ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ರಸಗೊಬ್ಬರಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸುವಂತೆ ಸೂಚಿಸಿದರು.
ರೈತರಿಂದ ವಿವಿಧ ಬೆಳೆಗಳಿಗೆ ಬೆಳೆ ವಿಮೆ ಮಾಡಿಸುವುದಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಹೆಚ್ಚಿನ ಒತ್ತು ನೀಡಬೇಕು. ವಿಮೆಗೆ ರೈತರು ಕಟ್ಟುವುದು ಕೇವಲ ಶೇ.೨ರಷ್ಟು ಮಾತ್ರ. ಅತಿವೃಷ್ಟಿ, ಅನಾವೃಷ್ಟಿ ಎದುರಾಗಿ ಬೆಳೆ ನಷ್ಟವಾದರೂ ರೈತರು ಸರ್ಕಾರದ ಎದುರು ಪರಿಹಾರ ಬೇಡಬೇಕಿಲ್ಲ. ವಿಮಾ ಕಂತು ಪಾವತಿಸಿದ್ದರೆ ತನ್ನಿಂತಾನೇ ಬೆಳೆ ವಿಮೆ ಹಣ ರೈತರ ಕೈಸೇರಲಿದೆ ಎಂದರು.ಈ ವಿಚಾರವಾಗಿ ಗ್ರಾಪಂ ಮಟ್ಟದಲ್ಲಿ ಕಸ ಸಂಗ್ರಹಿಸುವ ವಾಹನಗಳ ಮೂಲಕ ರೈತ ಸಮೂಹಕ್ಕೆ ಜಾಗೃತಿ ಅರಿವು ಮೂಡಿಸುವಂತೆ ಜಿಪಂ ಸಿಇಒ ಕೆ.ಆರ್.ನಂದಿನಿ ಅವರಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ಉಪಾಧ್ಯಕ್ಷೆ ಪುಷ್ಪಾ ಅಮರ್‌ನಾಥ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಕೆ.ಎಂ.ಉದಯ್, ಎಚ್.ಟಿ.ಮಂಜು, ಕೆ.ವಿವೇಕಾನಂದ ಇದ್ದರು.ಇದು ಮಾವನ ಮನೆಯಲ್ಲ, ನೋಟಿಸ್ ಕೊಡಿ: ಚಲುವರಾಯಸ್ವಾಮಿ
ಕನ್ನಡಪ್ರಭ ವಾರ್ತೆ ಮಂಡ್ಯಇದೇನು ಮಾವನ ಮನೆಯಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಲೇಬೇಕು. ಡೀಸಿ, ಸಿಇಒಗೂ ತಿಳಿಸದೆ ಗೈರು ಹಾಜರಾಗಿದ್ದಾರೆ ಎಂದರೆ ಇದೇನು ಮಾವನ ಮನೆನಾ. ಅವರಿಗೆ ನೋಟಿಸ್ ಕೊಡಿ.
ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಗೆ ಪೂರ್ವಾನುಮತಿ ಇಲ್ಲದೆ ಗೈರು ಹಾಜರಾದ ಅಧಿಕಾರಿಗಳ ಕುರಿತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಖಾರವಾಗಿಯೇ ಆಡಿದ ಮಾತುಗಳು.ಕೆಆರ್‌ಎಸ್ ಭರ್ತಿಯಾಗಿ ಒಂದೂವರೆ ತಿಂಗಳಾದರೂ ಕೆರೆಗಳನ್ನು ಇನ್ನೂ ಏಕೆ ತುಂಬಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಲು ಕಾವೇರಿ ನೀರಾವರಿ ನಿಗಮದ ಅಧಿಕ್ಷಕ ಎಂಜಿನಿಯರ್ ರಘುರಾಮ್ ಸಭೆಗೆ ಗೈರು ಹಾಜರಾಗಿದ್ದರು. ಅವರ ಬದಲಿಗೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಜಯಂತ್ ಬಂದಿದ್ದರು. ರಘುರಾಮ್ ಎಲ್ಲಿ ಎಂದು ಸಚಿವರು ಕೇಳಿದಾಗ, ಅವರು ಮೀಟಿಂಗ್‌ಗೆ ಹೊರಹೋಗಿದ್ದಾರೆ ಎಂದು ಜಯಂತ್ ಉತ್ತರಿಸಿದರು. ಡೀಸಿ ಅಥವಾ ಸಿಇಒ ಅನುಮತಿ ಪಡೆದಿದ್ದಾರಾ ಎಂದಾಗ ಜಯಂತ್ ಮೌನ ವಹಿಸಿದರು. ಆಗ ಸಚಿವರು ಗೈರು ಹಾಜರಾದ ಅಧಿಕಾರಿಗೆ ನೋಟಿಸ್ ಕೊಡಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.ಕೆಲವರ ಬಳಿ ರಸಗೊಬ್ಬರ ಅಕ್ರಮ ದಾಸ್ತಾನು: ಆರೋಪ
ಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲೆಯಲ್ಲಿ ಕೆಲವರ ಬಳಿ ರಸಗೊಬ್ಬರ ಅಕ್ರಮ ದಾಸ್ತಾನು ಇದೆ. ನನ್ನ ಬಳಿ ಅದರ ಮಾಹಿತಿ ಇದೆ. ದಾಳಿ ಮಾಡಿದರೆ 2 ಲಕ್ಷ ಮೆಟ್ರಿಕ್ ಟನ್ ಮಂಡ್ಯದಲ್ಲೇ ಸಿಗುತ್ತೆ ಎಂದು ಕೆಡಿಪಿ ಸಭೆಯಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸ್ಫೋಟಕ ಮಾಹಿತಿ ನೀಡಿದರು.
ನನ್ನ ಬಳಿ ಎಲ್ಲಾ ಮಾಹಿತಿ ಇದೆ, ಇದನ್ನು ನಾನು ಹೇಳುವುದಿಲ್ಲ ಎಂದು ಶಾಸಕರು ತಿಳಿಸಿದಾಗ, ನಮ್ಮ ಜಿಲ್ಲೆಯಲ್ಲಿ ಆ ರೀತಿ ಇಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್ ಪ್ರತಿಕ್ರಿಯಿಸಿದರು. ಆಗ ಸಚಿವ ಚಲುವರಾಯಸ್ವಾಮಿ ಮಧ್ಯಪ್ರವೇಶಿಸಿ ಅವರೇ ಹೇಳುತ್ತಿದ್ದಾರಲ್ಲ. ಸಭೆ ಮುಗಿದ ಬಳಿಕ ಶಾಸಕರ ಜೊತೆ ಚರ್ಚೆ ಮಾಡು. ಅವರೇ ಮಾಹಿತಿ ಕೊಡುತ್ತಾರೆ ಎಂದರು.