ಇಂದಿನಿಂದ ಕರಾವಳಿ ಮತ್ಸ್ಯೋದ್ಯಮ ಪುನಾರಂಭ

KannadaprabhaNewsNetwork |  
Published : Aug 01, 2024, 12:23 AM IST
11 | Kannada Prabha

ಸಾರಾಂಶ

ಕಳೆದ ಮೀನುಗಾರಿಕಾ ಋತುಮಾನದಲ್ಲಿ ವಿವಿಧ ಕಾರಣಗಳಿಂದ ತೀವ್ರ ಮತ್ಸ್ಯ ಕ್ಷಾಮ ಉಂಟಾಗಿ ಆರ್ಥಿಕವಾಗಿ ಕಂಗೆಟ್ಟಿದ್ದ ಮೀನುಗಾರರು ಈ ಬಾರಿ ಉತ್ತಮ ಮೀನು ದೊರೆಯುವ ಆಶಾಭಾವನೆಯಿಂದ ಸರ್ವ ಸನ್ನದ್ಧರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ವರ್ಷಂಪ್ರತಿಯಂತೆ 61 ದಿನಗಳ ಆಳಸಮುದ್ರ ಯಾಂತ್ರೀಕೃತ ಬೋಟುಗಳ ಮೀನುಗಾರಿಕೆ ನಿಷೇಧ ಜುಲೈ 31ಕ್ಕೆ ಕೊನೆಗೊಂಡಿದ್ದು, ಆ.1ರಿಂದ ರಾಜ್ಯದ ಕರಾವಳಿಯಲ್ಲಿ ಮೀನುಗಾರಿಕೆ ಚಟುವಟಿಕೆಗಳು ಪುನಾರಂಭವಾಗಲಿವೆ.

ಕಳೆದ ಮೀನುಗಾರಿಕಾ ಋತುಮಾನದಲ್ಲಿ ವಿವಿಧ ಕಾರಣಗಳಿಂದ ತೀವ್ರ ಮತ್ಸ್ಯ ಕ್ಷಾಮ ಉಂಟಾಗಿ ಆರ್ಥಿಕವಾಗಿ ಕಂಗೆಟ್ಟಿದ್ದ ಮೀನುಗಾರರು ಈ ಬಾರಿ ಉತ್ತಮ ಮೀನು ದೊರೆಯುವ ಆಶಾಭಾವನೆಯಿಂದ ಸರ್ವ ಸನ್ನದ್ಧರಾಗಿದ್ದಾರೆ.ಮೀನುಗಳ ಸಂತಾನೋತ್ಪತ್ತಿ ಅವಧಿಯಾಗಿರುವ ಜೂ.1ರಿಂದ ಜು.31ರವರೆಗೆ ಪ್ರತಿವರ್ಷವೂ ಕರ್ನಾಟಕ ಕರಾವಳಿ ಮೀನುಗಾರಿಕೆ (ನಿಯಂತ್ರಣ) ಕಾಯ್ದೆ 1986ರ ಅಡಿಯಲ್ಲಿ ಆಳಸಮುದ್ರ ಯಾಂತ್ರೀಕೃತ ಬೋಟುಗಳ ಮೀನುಗಾರಿಕೆಯನ್ನು ನಿಷೇಧಿಸಲಾಗುತ್ತದೆ. ನಿಷೇಧದ ಅವಧಿಯಲ್ಲಿ ಮೀನುಗಾರರು ತಮ್ಮ ಬೋಟು ಮತ್ತು ಬಲೆಗಳನ್ನು ಮುಂದಿನ ಮೀನುಗಾರಿಕಾ ಋುತುಮಾನಕ್ಕಾಗಿ ಸಿದ್ಧಗೊಳಿದ್ದಾರೆ. ಹೊಸ ಮೀನುಗಾರಿಕೆ ಋತುವಿನ ಆರಂಭದೊಂದಿಗೆ ಐಸ್ ಪ್ಲಾಂಟ್‌ಗಳು ಕೂಡ ಪೂರ್ಣ ಸಾಮರ್ಥ್ಯದಿಂದ ಕಾರ್ಯ ನಿರ್ವಹಿಸಲಿವೆ. ಮಾತ್ರವಲ್ಲದೆ, ಕರಾವಳಿ ಸೇರಿದಂತೆ ಹೊರಜಿಲ್ಲೆ, ಹೊರ ರಾಜ್ಯಗಳ ಸಹಸ್ರಾರು ಕುಟುಂಬಗಳಿಗೆ ಮೀನುಗಾರಿಕೆಯು ನೇರ ಹಾಗೂ ಪರೋಕ್ಷ ಉದ್ಯೋಗ ಒದಗಿಸುತ್ತದೆ.

ಮೀನುಗಾರಿಕೆ ಇಲಾಖೆಯ ಅಂಕಿ ಅಂಶಗಳ ಪ್ರಕಾರ ದಕ್ಷಿಣ ಕನ್ನಡದಲ್ಲಿ 2022-23ರಲ್ಲಿ 4154 ಕೋಟಿ ರು. ಮೌಲ್ಯದ 3,33,537.05 ಟನ್ ಮೀನು ದೊರೆತಿದ್ದರೆ, ಕಳೆದ ವರ್ಷ 2023-24ರಲ್ಲಿ ಕೇವಲ 2587.12 ಕೋಟಿ ರು. ಮೌಲ್ಯದ 1,89,924 ಟನ್ ಮೀನು ದೊರೆತಿತ್ತು.

ಕರಾವಳಿಯಲ್ಲಿ ಮೀನುಗಾರಿಕೆ ಕೆಲಸದಲ್ಲಿ ತೊಡಗಿಕೊಂಡಿದ್ದ ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ ಮತ್ತು ಜಾರ್ಖಂಡ್‌ನ ಕಾರ್ಮಿಕರು ಇದೀಗ ಹೊಸ ಮೀನುಗಾರಿಕೆ ಋತುಮಾನಕ್ಕಾಗಿ ರಜೆ ಮುಗಿಸಿ ಮರಳಿ ಮಂಗಳೂರು ಸೇರಿದ್ದಾರೆ. ಜಿಲ್ಲೆಯಲ್ಲಿ ಸುಮಾರು 1310 ಟ್ರಾಲ್‌ ಬೋಟ್‌ಗಳು, 85 ಪರ್ಸೀನ್‌ ಬೋಟುಗಳು ಮತ್ತು 1438 ಸಾಂಪ್ರದಾಯಿಕ ದೋಣಿಗಳು ಇವೆ.

ಮೀನುಗಾರಿಕೆ ನಿಷೇಧದ ಅವಧಿಯಲ್ಲಿ (ಜೂನ್‌, ಜುಲೈ) ಸಾಂಪ್ರದಾಯಿಕ ನಾಡದೋಣಿಗಳಿಗೆ ಮೀನುಗಾರಿಕೆ ಮಾಡಲು ಅವಕಾಶ ಇದ್ದಿದ್ದರೂ, ಈ ಬಾರಿ ಹವಾಮಾನ ವೈಪರೀತ್ಯದ ಕಾರಣ ನಾಡದೋಣಿಗಳು ಸಮುದ್ರಕ್ಕೆ ಇಳಿದದ್ದಕ್ಕಿಂತ ಲಂಗರು ಹಾಕಿದ್ದೇ ಹೆಚ್ಚು. ಇನ್ನಾದರೂ ಉತ್ತಮ ಮೀನು ಲಭ್ಯತೆಯ ನಿರೀಕ್ಷೆಯಲ್ಲಿ ಮೀನುಗಾರ ಸಮುದಾಯವಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!