ಕನ್ನಡಪ್ರಭ ವಾರ್ತೆ ಮಳವಳ್ಳಿ
ಗ್ರಾಮದ ಇತಿಹಾಸ ಪ್ರಸಿದ್ಧ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಕಳೆದ ಐದು ದಿನಗಳಿಂದ ದೀಪಾವಳಿ ಹಬ್ಬದ ಅಂಗವಾಗಿ ಜಾತ್ರಾ ಮಹೋತ್ಸವದ ವಿಜೃಂಭಣೆಯಿಂದ ನಡೆಯುತ್ತಿದ್ದು, ಇಂದು ರಥೋತ್ಸವದ ಹಿನ್ನೆಲೆಯಲ್ಲಿ ಮಹದೇಶ್ವರಸ್ವಾಮಿ ದೇವರ ಮೂರ್ತಿಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ನಡೆಸಲಾಯಿತು.
ದೀಪಾವಳಿ ಜಾತ್ರೋತ್ಸವದ ಅಂಗವಾಗಿ ಗ್ರಾಮದ ಪ್ರಮುಖ ರಸ್ತೆಗಳು, ದೇವಸ್ಥಾನ ಹಾಗೂ ಆವರಣದಲ್ಲಿ ಅಳವಡಿಸಿದ್ದ ವಿದ್ಯುತ್ ದೀಪಾಂಲಕಾರ ಭಕ್ತರ ಗಮನ ಸೆಳೆಯಿತು. ಸೋಮವಾರ ಮಧ್ಯರಾತ್ರಿ ದೇವಸ್ಥಾನದಿಂದ ಎರಡು ಕಿ.ಮೀ.ದೂರದ ಹಂಚೀಪುರದ ಹಾಲು ಹಳ್ಳದಿಂದ ದುಗ್ಗನಹಳ್ಳಿ, ಮುದ್ದೇಗೌಡನದೊಡ್ಡಿ, ಹಂಚೀಪುರ ವ್ಯಾಪ್ತಿಯ ನೂರಾರು ಹೆಣ್ಣುಮಕ್ಕಳು ಸಡಗರ ಸಂಭ್ರಮದಿಂದ ಗಂಗೆಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಹಾಲರವಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.ವಿವಿಧೆಡೆಯಿಂದ ಆಗಮಿಸಿದ ಸಾವಿರಾರು ಜನರು ರಾತ್ರೀಯಿಡಿ ನಡೆದ ಹಾಲರವಿ ಉತ್ಸವವನ್ನು ಕಣ್ಣಿಂಬಿಕೊಂಡರು. ರಾತ್ರಿಯೀಡಿ ನಡೆದ ದೇವರ ಉತ್ಸವದ ಮೆರವಣಿಗೆಯಲ್ಲಿ ಹರಕೆ ಹೊತ್ತ ನೂರಾರು ಮಂದಿ ಬಾಯಿಬೀಗ ಸೇವೆ ಸಲ್ಲಿಸಿ ನಂತರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು.
ಮಂಗಳವಾರ ದೇವರಿಗೆ ಎಣ್ಣೆಮಜ್ಜನ ಸೇವೆ, ತೈಲಾಭಿಷೇಕ, ಬಿಲ್ವಾರ್ಚಣೆ ಸೇವೆ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳನ್ನು ಅರ್ಚಕರ ತಂಡ ನೆರವೇರಿಸಿದರು. ನಂತರ ಹುಲಿವಾಹನದಲ್ಲಿ ಮಹದೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ದೇವಸ್ಥಾನದ ಸುತ್ತ ಮೆರವಣಿಗೆ ನಡೆಸಲಾಯಿತು. ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಭಕ್ತರು ದನಗಳು ಹಾಗೂ ಕುರಿಗಳನ್ನು ದೇವಸ್ಥಾನದ ಸುತ್ತ ಪ್ರದರ್ಷಣೆ ಹಾಕಿಸಿ ಗಮನ ಸೆಳೆದರು.
ಬುಧವಾರ ಮಧ್ಯಾಹ್ನ ರಥೋತ್ಸವವು ಅದ್ಧೂರಿಯಾಗಿ ನಡೆಯಿತು. ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ರಥೋತ್ಸವದ ಉತ್ಸವಮೂರ್ತಿಗೆ ಹಣ್ಣು-ಜವನ ಎಸೆದು ಸಂಭ್ರಮಿಸಿದರು. ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮಾಂತರ ಸಿಪಿಐ ಬಸವರಾಜು ನೇತೃತ್ವದಲ್ಲಿ ಭದ್ರತೆ ವ್ಯವಸ್ಥೆ ಕಲ್ಪಿಸಿದರು.